ಶ್ರೀನಗರ:
ಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡಲಿದ್ದು, ಅಭಿನಂದನ್ ಬಿಡುಗಡೆಗಾಗಿ ಉಸಿರು ಬಿಗಿಹಿಡಿದು ಕುಳಿತಿದ್ದ ಭಾರತೀಯರು ಸಂಭ್ರಮಾಚರಣೆಯಲ್ಲಿದ್ದಾರೆ.
ಇಂದು ರಾವಲ್ಪಿಂಡಿಯಿಂದ ಲಾಹೋರ್‍ಗೆ ಅಭಿನಂದನ್‍ರನ್ನು ಕರೆ ತಂದು ಭಾರತೀಯ ವಾಯು ಸೇನೆಯ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಅವರಿಗೆ ಪಾಕ್ ಒಪ್ಪಿಸಲಿದೆ. ರಾಜತಾಂತ್ರಿಕ ಮಾರ್ಗದ ಮೂಲಕ ಅಭಿನಂದನ್‍ರನ್ನು ಬಂಧಮುಕ್ತವಾಗಿಸುವಲ್ಲಿ ಭಾರತ ಯಶಸ್ವಿಯಾಗಿದೆ.
ಮಿಗ್ 21 ಯುದ್ಧವಿಮಾನದ ಪೈಲಟ್ ಅಭಿನಂದನ್ ಅವರು ಫೆಬ್ರವರಿ 27 ರಂದು ಪಾಕ್ ಸೇನೆಯ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು.
ಪಾಕಿಸ್ತಾನವು ಅಭಿನಂದನ್ ಅವರನ್ನು ವಶಕ್ಕೆ ಪಡೆದಿದ್ದರ ಬಗ್ಗೆ ಇಡೀ ವಿಶ್ವವೂ ಖಂಡನೆ ವ್ಯಕ್ತಪಡಿಸಿತ್ತು. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ, ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶುಕ್ರವಾರವೇ ಬೇಷರತ್ತಾಗಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.
ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಿದ್ದರಿಂದ ಬೆದರಿದ ಪಾಕಿಸ್ತಾನ ‘ಶಾಂತಿಯ ಸಂಕೇತವಾಗಿ ನಾವು ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ನಿನ್ನೆ ಸಂಸತ್ತಿನಲ್ಲಿ ಘೋಷಿಸಿತ್ತು.
ಅಭಿನಂದನ್ ಬಿಡುಗಡೆಗಾಗಿ ಉಸಿರು ಬಿಗಿಹಿಡಿದು ಕುಳಿತಿದ್ದ ಭಾರತೀಯರು, ಪಾಕ್ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಈ ಘೋಷಣೆ ಮಾಡುತ್ತಿದ್ದಂತೆಯೇ ಸಂಭ್ರಮಿಸಿದರು. ಅಭಿನಂದನ್ ಸ್ವಾಗತಕ್ಕೆ ಅವಕಾಶ ಕೋರಿ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಇತ್ತ ದೇಶವೇ ಅಭಿನಂದನ್ ಬರುವಿಕೆಗಾಗಿ ಕಾಯುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ