ತುರುವೇಕೆರೆ
ತಾಲ್ಲೂಕಿನಲ್ಲಿ ಸಕಾಲಕ್ಕೆ ಮಳೆ ಬಾರದ್ದರಿಂದ ಈ ಬಾರಿ ಬರಗಾಲ ಕಟ್ಟಿಟ್ಟ ಬುತ್ತಿ ಎಂಬುದು ರೈತರನ್ನು ಆತಂಕಕ್ಕೆ ದೂಡಿದೆ.
ಏಪ್ರಿಲ್ ಕೊನೆ ವಾರದಿಂದ ಮೇ ಮೊದಲನೇ ವಾರದ ತನಕ ಬಿದ್ದ ಅಲ್ಪಸ್ವಲ್ಪ ಮಳೆಗೆ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಜೋಳ ಹಲಸಂದೆ, ತೊಗರಿ, ಎಳ್ಳು ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದರು. ಮಳೆ ಸಮರ್ಪಕವಾಗಿ ಬೀಳದ್ದರಿಂದ ಪೂರ್ವ ಮುಂಗಾರು ಬೆಳೆಗಳು ಕುಂಠಿತಗೊಂಡು ಮುಂಗಾರು ಬೆಳೆಯಾದರೂ ಕೈಗೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಲ್ಲಿ ಇಂದು ನಿರಾಸೆ ಮೂಡಿದೆ.
ಒಂದೆಡೆ ಕುಡಿಯುವ ನೀರಿಗೆ ಹಾಹಾಕಾರವಾದರೆ ಮತ್ತೊಂದೆಡೆ ಜಾನುವಾರುಗಳಿಗೆ ಮೇವಿಲ್ಲದೆ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ರೈತ ಮುಂಗಾರು ಬಿತ್ತನೆಗೆ ಜಮೀನು ಹಸನು ಮಾಡಿ ಬೀಜ ಗೊಬ್ಬರ ಮನೆಯಲ್ಲಿಟ್ಟುಕೊಂಡು ಮಳೆಗಾಗಿ ಆಗಸದತ್ತ ಮುಖ ಮಾಡಿದ್ದಾನೆ. ದಿನದ 24 ಗಂಟೆ ಮೋಡ ಕವಿದ ವಾತಾವರಣವಿದ್ದು ಇನ್ನೇನು ಆಕಾಶದಿಂದ ಮಳೆ ಬಂದೇಬಿಟ್ಟಿತು ಅನ್ನುವಷ್ಟರಲ್ಲಿ ತುಂತುರು ಮಳೆಯೊಂದಿಗೆ ಮೋಡಗಳು ಹಾಗೆಯೇ ಗಾಳಿಯಲ್ಲಿ ತೇಲಿಹೋಗುತ್ತವೆ.
ಕುಸಿದ ಬಿತ್ತನೆ ಇಳುವರಿ :
ಕಳೆದ ವರ್ಷ ಪೂರ್ವ ಮುಂಗಾರು ಬಿತ್ತನೆ ಶೇ.24ರಷ್ಟು ಬಿತ್ತನೆಯಾಗಿದ್ದರೆ, ಈ ಬಾರಿ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿ ಕೇವಲ ಶೇ. 18 ರಷ್ಟು ಬಿತ್ತನೆಯಾಗಿದೆ. ಬಿತ್ತನೆ ಕಡಿಮೆಯಾಗಿರುವುದು ಹಾಗೂ ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ಬಿತ್ತಿದ್ದ ಮುಂಗಾರು ಬೆಳೆಗಳ ಇಳುವರಿ ಸಹ ಕಡಿಮೆಯಾಗಿದೆ.
ರೈತರು ಪೂರ್ವ ಮುಂಗಾರು ಬಿತ್ತಿದ 1250 ಹೆಕ್ಟೇರು ಹೆಸರು, 2000 ಹೆಕ್ಟೇರು ಹುರುಳಿ, 750 ಹೆಕ್ಟೇರು ಹಲಸಂದೆ ಹಾಗೂ 30 ಹೆಕ್ಟೇರು ಉದ್ದು ಸೇರಿದಂತೆ ಹುರುಳಿ, ಅವರೆ, ಎಳ್ಳು, ಜೋಳ ಸೇರಿದಂತೆ ಅನೇಕ ದ್ವಿದಳ ಧಾನ್ಯಗಳನ್ನು ಒಟ್ಟು 19,750 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ್ದ ಬೆಳೆಗಳಿಗೆ ಸಮಪ್ರಮಾಣದಲ್ಲಿ ಮಳೆ ಬಾರದೆ ಅಲ್ಪಸ್ವಲ್ಪ ಬಂದಿದ್ದ ಬೆಳೆ ಕೂಲಿಗೂ ಸಾಕಾಗದಾಗಿದೆ. ಹೆಸರು ಗಿಡಕ್ಕೆ ಹಳದಿ ರೋಗ ಬಂದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು.
ತೋಟಗಳಿಗಿಲ್ಲ ಮಳೆ:
ಭೂಮಿಯಲ್ಲಿ ಅಂತರ್ಜಲ ಕಡಿಮೆಯಾಗಿ ವಾಣಿಜ್ಯ ಬೆಳೆಗಳು ನೆಲಕಚ್ಚಿವೆ. ಮಳೆ ಪ್ರಮಾಣ ಕಡಿಮೆಯಾಗಿ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಬಾಳೆಗಿಡಗಳಿಗೆ ಯಾವುದೇ ಪ್ರಯೋಜನವಾಗಿಲ್ಲ. ಕೆರೆ ಕಟ್ಟೆಗಳಿಗೆ ನೀರು ಹರಿದಿಲ್ಲ. ಸಾಧಾರಣ ಮಳೆ ಸುರಿದಿದ್ದರಿಂದ ಕೆಲ ಕಡೆ ರೈತರು ರಾಗಿ ಬಿತ್ತನೆಗೆ ತಮ್ಮ ಭೂಮಿಯನ್ನು ಟ್ರ್ಯಾಕ್ಟರ್, ಎತ್ತುಗಳಿಂದ ಉಳುಮೆ ಮಾಡಿ ಭೂಮಿಯನ್ನು ಹಸನು ಮಾಡಿ ಮಳೆ ಬಂದರೆ ಸಾಕು ಬೀಜ ಬಿತ್ತಲು ಮಳೆಗಾಗಿ ಕಾಯುತ್ತಿದ್ದಾರೆ.
ತಾಲ್ಲೂಕಿಗೆ ಹರಿಯದ ಹೇಮೆ:
ಕಳೆದ ವರ್ಷ ಜೂನ್ ತಿಂಗಳಲ್ಲಿ ಹೇಮಾವತಿ ನೀರು ತಾಲ್ಲೂಕಿನಲ್ಲಿ ಹರಿದಿದ್ದರಿಂದ ಅಂತರ್ಜಲ ವೃದ್ಧಿಯಾಗಿ ತೆಂಗು, ಅಡಿಕೆ, ಬತ್ತದ ಬೆಳೆಗಳನ್ನು ಉಳಿಸಿಕೊಳ್ಳಲಾಗಿತ್ತು. ಅಲ್ಲದೆ ಶಾಸಕ ಮಸಾಲೆ ಜಯರಾಂ ಅಹೋರಾತ್ರಿ ಧರಣಿ ನಡೆಸಿ ಕೆರೆಕಟ್ಟೆಗಳನ್ನು ತುಂಬಿಸುವಲ್ಲಿ ಸಫಲರಾಗಿದ್ದರು. ಆದರೆ ಈ ಬಾರಿ ಹೇಮಾವತಿ ನದಿ ಕೊಳ್ಳದಲ್ಲೇ ಮಳೆಯಾಗದ್ದರಿಂದ ಈ ಬಾರಿ ಹೇಮಾವತಿ ನೀರು ತಾಲ್ಲೂಕಿಗೆ ಸಿಗದಿದ್ದಲ್ಲಿ ಬರಗಾಲ ಕಟ್ಟಿಟ್ಟಬುತ್ತಿ ಎಂಬುದು ಜನರಲ್ಲಿ ಆತಂಕ ಮನೆಮಾಡಿದೆ.
ಕಳೆದ ವರ್ಷ ಉತ್ತಮ ಪೂರ್ವ ಮುಂಗಾರು ಮಳೆ ಬಿದ್ದಿದ್ದು ಮುಂಗಾರು ಬೆಳೆಗಳಾದ ಹೆಸರು, ಉದ್ದು, ತೊಗರಿ, ಅಲಸಂದೆ, ಜೋಳ ಬೆಳೆಗಳು ನಿರೀಕ್ಷಿತ ಇಳುವರಿ ಬಂದಿತ್ತು. ಆದರೆ ಈ ವರ್ಷ ಬಿತ್ತನೆ ಮಾಡುವಷ್ಟೂ ಮಳೆ ಬಿದ್ದಿಲ್ಲದಿರುವುದರಿಂದ ಕೆರೆಕಟ್ಟೆಗಳಿಗೆ ನೀರು ಬಂದಿಲ್ಲ. ಇದರಿಂದ ಈಗಾಗಲೇ ಕೆಲವು ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲದೆ ತಾಲ್ಲೂಕು ಕಛೇರಿಗಳ ಮುಂದೆ ಮಹಿಳೆಯರಾದಿಯಾಗಿ ಬಂದು ಬಿಂದಿಗೆ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ದನಕರುಗಳಿಗೆ ಮೇಯಲು ಮೇವಿಲ್ಲದೆ ಒಣಗಿದ ಅಡಿಕೆ ಪಟ್ಟೆಯನ್ನು ತಿನ್ನುವಂತಹ ದುರ್ಗತಿ ತಾಲ್ಲೂಕಿನಲ್ಲಿ ಒದಗಿ ಬಂದಿರುವುದು ವಿಪರ್ಯಾಸವೇ ಸರಿ. ಮಳೆಯ ಕಣ್ಣಾಮುಚ್ಚಾಲೆಯಿಂದ ಹೊಲದಲ್ಲಿ ಬಿತ್ತಿದ ಬೀಜ ಗೊಬ್ಬರಕ್ಕೆ ಹಾಕಿದ ಹಣ ಹಾಗೂ ಗೇಯ್ದ ಕೂಲಿ ಸಹ ಕೈಗೆ ಬಾರದಂತಾಗಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಜೊತೆಗೆ ಜನಪ್ರತಿನಿಧಿಗಳ ಕಿತ್ತಾಟದಿಂದ ಸರ್ಕಾರದ ಸವಲತ್ತುಗಳು ರೈತರಿಗೆ ಸಕಾಲದಲ್ಲಿ ಸಿಗದೆ ರೈತನ ಜೀವನ ಡೋಲಾಯಮಾನವಾದಂತಾಗಿದೆ ಎಂದು ರೈತ ಶಂಕರಪ್ಪ ಆತಂಕ ವ್ಯಕ್ತಪಡಿಸಿದರು.ಇನ್ನು ಹದಿನೈದಿಪ್ಪತ್ತು ದಿನಗಳೊಳಗಾಗಿ ಉತ್ತಮ ಮಳೆ ಬಂದರೇನೋ ಸರಿ. ಇಲ್ಲದಿದ್ದಲ್ಲಿ ಆಕಾಶ ನಂಬಿ ಜೀವನ ಸಾಗಿಸುತ್ತಿರುವ ರೈತ ಕುಟುಂಬಗಳು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಹ ಗತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.