ಬೆಂಗಳೂರು
ನಗರದಲ್ಲೆಡೆ ಸುತ್ತಾಡುತ್ತಾ ಗಾಂಜಾ ಮಾರಾಟ ಮಾಡುತ್ತಿದ್ದ ತಲಾ ಮೂವರು ಆರೋಪಿಗಳಿದ್ದ ಎರಡು ಗ್ಯಾಂಗ್ಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿ 11ಕೆಜಿ 150 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟಿನ್ ಟೌನ್ನ ಶ್ರೀನಿವಾಸ (33), ಬರ್ನಾಡ್ ರಾಜ್ (31), ಉಲ್ಲಾಳ ಉಪನಗರದ ಸಂಗೀತ್ ಕುಮಾರ್(32) ಒಂದು ಗ್ಯಾಂಗ್ನವರಾದರೆ ಮತ್ತೊಂದು ಗ್ಯಾಂಗ್ನ ಶ್ರೀರಾಂಪುರ ಸತೀಶ್ ಅಲಿಯಾಸ್ ಕೋಳಿಬಾಡಿ (26), ಅಗ್ರಹಾರ ದಾಸರಹಳ್ಳಿಯ ಬೈರಗೌಡ ಅಲಿಯಾಸ್ ಭೈರ (27), ವೈಟ್ಫೀಲ್ಡ್ನ ನಾರಾಯಣ (35)ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ 11ಕೆ.ಜಿ. 150 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳಲ್ಲಿ ಸಂಗೀತ್ ಕುಮಾರ್ ಹಾಗೂ ನಾರಾಯಣ ಈಗಾಗಲೇ ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿತರಾಗಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದು, ಇತರರ ಜೊತೆ ಸೇರಿ ಮೋಜು ಮಾಡಲು ಗಾಂಜಾ ಮಾರಾಟ ಮಾಡುತ್ತಿದ್ದರು
ಆರೋಪಿಗಳೆಲ್ಲರೂ ಗಾಂಜಾ ವ್ಯಸನಿಗಳಾಗಿದ್ದು ನಾಲ್ವರನ್ನು ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಿದ್ದರು ಗಾಂಜಾ ಸೇವನೆಯ ಚಟವನ್ನು ಬಿಟ್ಟಿರಲಿಲ್ಲ. ಮೂವರ ಗ್ಯಾಂಗ್ ಒರಿಸ್ಸಾಕ್ಕೆ ಹೋಗಿ ಗಾಂಜಾ ಖರೀದಿಸಿಕೊಂಡು ರೈಲಿನಲ್ಲಿ ಲಗೇಜ್ ಜೊತೆಗೆ ಯಾರಿಗೂ ಗೊತ್ತಾಗದಂತೆ ತೆಗೆದುಕೊಂಡು ಬಂದು ಇತರ ಮೂವರ ಗ್ಯಾಂಗ್ಗೆ ನೀಡುತ್ತಿದ್ದರು ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಈ ಗ್ಯಾಂಗ್ ಶ್ರೀರಾಂಪುರ, ನಂದಿನಿ ಲೇ ಔಟ್ ಇನ್ನಿತರ ಕಡೆಗಳಲ್ಲಿ ಸುತ್ತಾಡುತ್ತಾ ಗಾಂಜಾ ವ್ಯಸನಿಗಳು ವಿದ್ಯಾರ್ಥಿಗಳು, ಐಟಿಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಮೋಜು ಮಾಡುತ್ತಿದ್ದರು. ಗಾಂಜಾ ವ್ಯಸನಿಯೊಬ್ಬ ನೀಡಿದ ಮಾಹಿತಿ ಆಧಾರಿಸಿ ಕಾರ್ಯಾಚರಣೆ ಕೈಗೊಂಡು ನಂದಿನಿ ಲೇಔಟ್ ಪೊಲೀಸ್ ಇನ್ಸ್ಪೆಕ್ಟರ್ ಲೋಹಿತ್, ಸಬ್ಇನ್ಸ್ಪೆಕ್ಟರ್ ಲಕ್ಷ್ಮಣ್ ಅವರಿದ್ದ ತಂಡ ಆರೋಪಿಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








