ಮಧುಗಿರಿ:
ಮುಂದಿನ ದಿನಗಳಲ್ಲಿ ತಾಲ್ಲೋಕಿನ ಎಲ್ಲಾ ಗ್ರಾಮಗಳ ದಲಿತ ಕಾಲೋನಿಗಳಲ್ಲಿನ ದಲಿತರ ಸಮಸ್ಯೆಗಳನ್ನು ಮುಕ್ತವಾಗಿ ತಿಳಿದು ಪೋಲಿಸ್ ಇಲಾಖೆಯ ವತಿಯಿಂದ ಕಾನೂನು ಅರಿವು ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ವೃತ್ತ ನಿರೀಕ್ಷಕ ದಯಾನಂದ್ ಸೇಗುಣಿಸಿ ಭರವಸೆ ನೀಡಿದರು.
ಪಟ್ಟಣದ ಪೋಲಿಸ್ ಠಾಣೆಯ ಕಛೇರಿಯಲ್ಲಿ ಪೋಲಿಸ್ ಇಲಾಖೆಯ ವತಿಯಿಂದ ಆಯೋಜಿಸಿದ ದಲಿತ ಸಮುದಾಯಗಳ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಲಿತ ಮುಖಂಡರ ಸಹಕಾರ ಮುಖ್ಯ ವಾಗಿದ್ದು ಪೋಲಿಸರ ಜೊತೆ ಉತ್ತಮ ಸ್ನೇಹ ಬೆಳಸಿಕೊಂಡು ಬಂದರೆ ಸಮಸ್ಯೆಗಳು ಕಡಿಮೆಯಾಗುವುದಲ್ಲದೇ ಅಪರಾಧ ಘಟನೆಗಳು ಸಹ ಇಳಿಮುಖವಾಗುತ್ತದೆ ದಲಿತ ಸಮುದಾಯದ ಜನರ ಹಿತಕಾಯಲು ಪೋಲಿಸ್ ಇಲಾಖೆ ಸಂಪೂರ್ಣ ಬದ್ದವಾಗಿದ್ದು ಕಾನೂನಿನ ನಿಯಮಗಳ ಪ್ರಕಾರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು
ದಲಿತ ಮುಖಂಡ ಎಂ.ವೈ.ಶಿವಕುಮಾರ್ ಮಾತನಾಡಿ ಇತಿಹಾಸ ಪ್ರಸಿದ್ದ ದಂಡಿಮಾರಮ್ಮನ ಜಾತ್ರೆ ಸಮೀಪಿಸುತ್ತಿದೆ ಜಾತ್ರೆ ಪ್ರಾರಂಭದಿಂದಲೂ ಮುಗಿಯುವವರೆಗೂ ದಲಿತ ಸಮುದಾಯವು ಎಲ್ಲಾ ಕೆಲಸ ಕಾರ್ಯಗಳಲ್ಲೂ ಭಾಗವಹಿಸುತ್ತದೆ ಮುಜರಾಯಿ ಇಲಾಖಾ ವ್ಯಾಪ್ತಿಗೆ ದೇವಸ್ಥಾನ ಒಳಪಟ್ಟಿದ್ದರು ಆದರೆ ಜಾತ್ರ ಕಾರ್ಯಕ್ರಮದ ಕರ ಪತ್ರಗಳಲ್ಲಿ ದಲಿತರ ಹೆಸರುಗಳನ್ನು ಮುದ್ರಿಸದೆ ಅಧಿಕಾರಿಗಳು ಅಸ್ಪ್ರಶ್ಯತೆ ಆಚರಣೆ ಮಾಡುತ್ತಿದ್ದಾರೆ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಎಲ್ಲಾ ಜನಾಂಗದವರಿಗೂ ಕರಪತ್ರದಲ್ಲಿ ಗೌರವ ನೀಡಿ ಕೂಡಲೇ ಸಂಬಂಧಪಟ್ಟ ಇಲಾಖೆಯು ಇದನ್ನು ಸರಿಪಡಿಸಿ ಸಾಮಾಜಿಕ ನ್ಯಾಯ ನೀಡಬೇಕು ಎಂದರು.ಆದಿಜಾಂಭವ ಮಹಾಸಭಾ ತಾ.ಅದ್ಯಕ್ಷ ಮಹರಾಜು ಮಾತನಾಡಿ ಪಟ್ಟಣದಲ್ಲಿ ದಲಿತ ವಿಧ್ಯಾರ್ಥಿ-ವಿಧ್ಯಾರ್ಥಿನಿಯರ ಹಾಸ್ಟಲ್‍ಗಳ ಬಳಿ ಕೆಲ ಪುಂಡು ಪೋಕರಿಗಳು ಸುಳಿದಾಡುತ್ತ ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಭಂಗವುಂಟು ಮಾಡುತ್ತಾ ಕೆಲ ತೊಂದರೆಗಳನ್ನು ನೀಡುತ್ತಿರುವುದು ಕಂಡು ಬರುತ್ತಿದೆ. ಪೋಲಿಸರು ಆಗಾಗ ವಿಧ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಅವರಲ್ಲಿ ಆತ್ಮ ಸ್ಥೈರ್ಯ ತುಂಬುವಂತೆ ತಿಳಿಸಿದರು.
ದ.ಸಂ.ಸ.ತಾ.ಸಂಚಾಲಕ ಎಸ್.ಸಂಜೀವಯ್ಯ ಮಾತನಾಡಿ ದಲಿತ ಕಾಲೋನಿಗಳಲ್ಲಿ ಇತ್ತೀಚೆಗೆ ಅಕ್ರಮ ಮಧ್ಯ ಮಾರಾಟ ಹೆಚ್ಚುತ್ತಿದೆ ಇದರಿಂದ ಯುವಕರು ಹಾಳಾಗುತ್ತಿದ್ದಾರೆ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದರು.ಸಭೆಯಲ್ಲಿ ಪಿ.ಎಸ್.ಐ.ರವೀಂದ್ರ, ದಲಿತ ಒಕ್ಕೂಟದ ಅಧ್ಯಕ್ಷ ಸಂಜೀವ್ ಮೂರ್ತಿ, ದಸಂಸ ಭರತ್ , ಮರಿಯಪ್ಪ, ಹೇಮಂತ್, ಪೇದೆಗಳಾದ ಮಲ್ಲಿಕಾರ್ಜುನ, ರಂಗನಾಥ್ ಹಾಗೂ ಮುಂತಾದವರು ಹಾಜರಿದ್ದರು.