ವಕೀಲ ಅನೀಸ್ ಪಾಷಾರನ್ನು ಕಣಕ್ಕಿಳಿಸಲು ಒತ್ತಾಯ

ದಾವಣಗೆರೆ:

     ಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನಾಗಿ, ಹಿರಿಯ ವಕೀಲ ಅನೀಸ್ ಪಾಷಾ ಅವರನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರನ್ನು ಒತ್ತಾಯಿಸಲು ಜೆಡಿಎಸ್ ಸಮಾನ ಮನಸ್ಕರ ಸಭೆ ನಿರ್ಧರಿಸಿದೆ.

       ನಗರದ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಜೆಡಿಎಸ್ ಪಕ್ಷದ ಹಿರಿಯ ಮುಖಂಡ, ವಕೀಲ ಎ.ವೈ.ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಮಾನ ಮನಸ್ಕರ ಸಭೆಯು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ವಕೀಲ ಅನೀಸ್ ಪಾಷಾ ಅವರನ್ನು ಕಣಕ್ಕಿಳಸಬೇಕೆಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಶೀಘ್ರದಲ್ಲಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರ ಬಳಿಗೆ ಸುಮಾರು 300 ಜನರ ನಿಯೋಗ ತೆಗೆದುಕೊಂಡು ಹೋಗಲು ತೀರ್ಮಾನಿಸಿತು.

      ಸಭೆಯಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಗುಡ್ಡಪ್ಪ, ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿರುವ ಕೋಮುವಾದಿ ಪಕ್ಷವಾಗಿರುವ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಒಂದಾಗಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

        ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನಾಯಕತ್ವದ ಕೊರತೆ ಇದೆ. ಹೀಗಾಗಿ ಪಕ್ಷವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಸಂಘಟಿಸಲಾಗುತ್ತಿಲ್ಲ. ಎಲ್ಲಾ ಸಮಾಜದವರನ್ನೂ ಒಟ್ಟಾಗಿ ಕರೆದೊಯ್ಯುವ ಜವಾಬ್ದಾರಿ ನಾಯಕರ ಮೇಲಿದೆ ಎಂದ ಅವರು, ಈ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು, ಪಕ್ಷದ ಸಾಂಪ್ರಾದಾಯಿಕ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಈ ಎಲ್ಲರನ್ನೂ ಒಗ್ಗೂಡಿಸಿ, ಚುನಾವಣೆ ಹೊತ್ತಿಗೆ ಪಕ್ಷವನ್ನು ಸದೃಢಗೊಳಿಸಿ, ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು.

        ಪಕ್ಷದ ವರಿಷ್ಠ ದೇವೇಗೌಡರ ನಾಯಕತ್ವದಲ್ಲಿ ಜೆಡಿಎಸ್ ಪಕ್ಷವನ್ನು ಬೆಳೆಸಲು ಇಲ್ಲಿಯ ಕೆಲವರಿಗೆ ಮನಸ್ಸೇ ಇಲ್ಲವಾಗಿದೆ. ಆದ್ದರಿಂದಲೇ ಪಕ್ಷವನ್ನು ಜಿಲ್ಲೆಯಲ್ಲಿ ಸದೃಢಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಅಹಿಂದ ಸೇರಿದಂತೆ ಎಲ್ಲಾ ವರ್ಗ ಮತ್ತು ಸಮಾಜದವರನ್ನೂ ಪಕ್ಷಕ್ಕೆ ಸೆಳೆಯುವ ಮೂಲಕ ಲೋಕಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲಿಸಲು ಸಮಾನ ಮನಸ್ಕರು ಶ್ರಮಿಸಬೇಕೆಂದು ಹೇಳಿದರು.

           ಹಿರಿಯ ವಕೀಲರಾದ ಅನೀಸ್ ಪಾಷಾರವರು ಜೆಡಿಎಸ್‍ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರಿಗೆ ನಮ್ಮೆಲ್ಲರ ಸಹಕಾರ, ಬೆಂಬಲವಿದ್ದು, ಇನ್ನೂ ಮೂರ್ನಾಲ್ಕು ದಿನಗಳಲ್ಲೇ ಪಕ್ಷದ ಸುಮಾರು 300 ಜನ ಪ್ರಮುಖರ ನಿಯೋಗ ವರಿಷ್ಠರನ್ನು ಭೇಟಿ ಮಾಡಿ, ಅಹಿಂದ ವರ್ಗಕ್ಕೆ ಟಿಕೇಟ್ ನೀಡುವಂತೆ ಒತ್ತಡ ಹೇರಲಾಗುವುದು ಎಂದರು.

          ಟಿಕೇಟ್ ಆಕಾಂಕ್ಷಿ ಅನೀಸ್ ಪಾಷಾ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರುಗಳ ನಾಯಕತ್ವದಲ್ಲಿ ನನಗೆ ಸಂಪೂರ್ಣ ನಂಬಿಕೆವಿದೆ. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ದೇವೇಗೌಡರ ಆಡಳಿತಾವಧಿಯಲ್ಲಿ ಹೆಚ್ಚು ಅವಕಾಶ ನೀಡುವ ಮೂಲಕ ಅಹಿಂದ ವರ್ಗದ ಏಳಿಗೆಗೆ ಶ್ರಮಿಸಿದ್ದಾರೆ. ಕುಮಾರಸ್ವಾಮಿ ಸಹ ಅದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ನಮ್ಮ ಮೈತ್ರಿ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಜನರಿಗೆ ತೀಳಿಸುವ ಮೂಲಕ ಪಕ್ಷದೆಡೆಗೆ ಸೆಳೆದು ಪಕ್ಷವನ್ನು ಜಿಲ್ಲೆಯಲ್ಲಿ ಸದೃಢಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

           ಲೋಕಸಭೆ ಚುನಾವಣೆಗೆ ನಾನೂ ಸಹ ಟಿಕೇಟ್ ಆಕಾಂಕ್ಷಿಯಾಗಿದ್ದೇನೆ. ನಮ್ಮ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದು, ರಾಜ್ಯದಲ್ಲಿ ಕೋಮುವಾದದ ಬೀಜ ಬಿತ್ತುತ್ತಿರುವ ಬಿಜೆಪಿಯನ್ನು ದೂರ ಇಡಬೇಕಾದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಬರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅಥವಾ ಮೈತ್ರಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು.

          ನಗರಸಭೆ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ಭೈರಪ್ಪ ಮಾತನಾಡಿ, ಕಾಮ್ರೇಡ್ ಪಂಪಾಪತಿಯವರ ಕಾಲದಿಂದಲೂ ಕಮ್ಯುನಿಷ್ಟ್ ಪಕ್ಷದೊಂದಿಗೆ ಜನತಾದಳ ಹೊಂದಾಣಿಕೆ ಮಾಡಿಕೊಂಡು ನಗರಸಭೆಯಲ್ಲಿ ಆಡಳಿತ ನಡೆಸಿತ್ತು. ನಗರದ ಅಭಿವೃದ್ಧಿಯಲ್ಲಿ ಈ ಎರಡೂ ಪಕ್ಷಗಳ ಕೊಡುಗೆ ಅಪಾರವಾಗಿದೆ ಎಂದರು.

          ದಾವಣಗೆರೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕಟ್ಟಲು ಜಾತಿ ಅಡ್ಡ ಬರುತ್ತಿದೆ. ಇದೆಲ್ಲವನ್ನೂ ಮರೆತು, ಒಗ್ಗಟ್ಟಾಗಿ ಕೆಲಸ ಮಾಡಿದರೆ, ಉತ್ತಮ ಪಕ್ಷ ಸಂಘಟನೆಯ ಜೊತೆಗೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶವನ್ನು ಸಹ ನಿರೀಕ್ಷಿಸಲು ಸಾಧ್ಯ ಎಂದರು.ಸಭೆಯಲ್ಲಿ ಜೆಡಿಎಸ್ ಮುಖಂಡರುಗಳಾದ ಹೂವಿನಮಡು ಚಂದ್ರಪ್ಪ, ಬಾತಿ ಶಂಕರ, ಲಿಯಾಕತ್ ಅಲಿಖಾನ್, ಜೆ.ಡಿ.ಎಸ್. ಕಾನೂನು ವಿಭಾಗದ ಅಧ್ಯಕ್ಷರಾದ ಯೋಗೇಶ್, ಹರಪನಹಳ್ಳಿ ಪರಮೇಶ್ವರಪ್ಪ, ಮಳಲಕೆರೆ ಪ್ರಕಾಶ್, ಬಿ. ದಾದಾಪೀರ್, ಜಸ್ಟಿನ್ ಜಯಕುಮಾರ್, ಜೆ.ಡಿ.ಎಸ್. ಪಕ್ಷದ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂಗನಗೌಡ, ಮಹಮ್ಮದ್ ಗೌಸ್, ಚಿತ್ರದುರ್ಗ ಕಾಂಗ್ರೆಸ್ ಮುಖಂಡ ಬಿ.ಕೆ. ರಹಮತ್‍ಉಲ್ಲಾ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಮನ್ಸೂರ್‍ಅಲಿ, ಐರಣಿ ಚಂದ್ರು ಪ್ರಾರ್ಥನೆ ನೆರವೇರಿಸಿದರು. ಬಿ. ದಾದಾಪೀರ್ ಸ್ವಾಗತಿಸಿ, ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link