ರಾಹುಲ್ ಗೆ ಕಪ್ಪು ಪಟ್ಟಿ ಪ್ರದರ್ಶಿಸಲು ರೈತರ ನಿರ್ಧಾರ…!!

ಬ್ಯಾಡಗಿ:
       ಮಾ. 9 ರಂದು ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಿಸನಳ್ಳಿ ಗ್ರಾಮಕ್ಕೆ ಆಗಮಿಸಲಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ಕಪ್ಪು ಬಟ್ಟೆ ಪ್ರದರ್ಶಿಸಿ ವಿರೋಧ ವ್ಯಕ್ತ ಪಡಿಸಲಾಗುವುದೆಂದು ತಾಲೂಕಾ ಹಸಿರು ಸೇನೆಯ ಅಧ್ಯಕ್ಷ ಗಂಗಣ್ಣ ಯಲಿ ಹೇಳಿದರು. 
   
       ಮಂಗಳವಾರ ಅವರು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ತಾಲೂಕಾ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನೆಯ ಆಶ್ರಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಜಮೀರಹ್ಮದ ಖಾನ ಹಾಗೂ ಮಾಜಿ ಶಾಸಕ ಬಸವರಾಜ ಶಿವಣ್ಣನವರ ಧುರೀಣ ಎಸ್.ಆರ್.ಪಾಟೀಲ ಅವರುಗಳು ತಾಲೂಕಿನ ಆಣೂರ ಗ್ರಾಮದ ಕೆರೆಗೆ ತುಂಗಭದ್ರಾ ಜಲಾಶಯದಿಂದ ನೀರು ತುಂಬಿಸಿ ಸುತ್ತ ಹತ್ತಾರು ಗ್ರಾಮಗಳ ಕೆರೆಗಳಿಗೂ ನೀರು ತುಂಬಿಸುವ ಯೋಜನೆಯನ್ನು ಮಂಜೂರಿ ತರುವುದಾಗಿ ರೈತರಿಗೆ ಸುಳ್ಳು ಭರವಸೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಕೆಲವೇ ವಾರಗಳ ಹಿಂದೆ ಬ್ಯಾಡಗಿ ಬಂದ್ ಕೂಡಾ ನಡೆಸಲಾಗಿದೆ.
 
        ಬಂದ್ ವೇಳೆ ಎಲ್ಲಾ ಪಕ್ಷದ ಧುರೀಣರು ರೈತರೂ ಭಾಗವಹಿಸಿದ್ದು, ರೈತರ ಕೆರೆಗಳಿಗೆ ನೀರು ತುಂಬಿಸುವ ಭರವಸೆಯನ್ನು ಅಂದು ನಡೆದ ಸಭೆಯಲ್ಲಿ ತಾಲೂಕಿನ ರೈತರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಮಾತನಾಡಿದ್ದಾರೆಂದರು. 212 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಆಣೂರ ಕೆರೆಗೆ ನೀರು ತುಂಬಿಸುವ ಯೋಜನೆಯ ಆದೇಶವನ್ನು ಕೆಲವೇ ದಿನಗಳಲ್ಲಿ ರೈತರಿಗೆ ನೀಡುವುದಾಗಿ ಭರವಸೆನ್ನು ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಇಲ್ಲಿಯವರೆಗೂ ಆಣೂರ ಕೆರೆಗೆ ನೀರು ತುಂಬಿಸುವ ಯೋಜನೆಯ ಬಗ್ಗೆ ಎಲ್ಲಿಯೂ ಚಕಾರವೆತ್ತುತ್ತಿಲ್ಲ, ಇದು ತಾಲೂಕಿನ ಹಾಗೂ ಜಿಲ್ಲೆಯ ರೈತರಿಗೆ ಮಾಡಿದ ಮೋಸವೆಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. 
   
           ಸರಕಾರದಲ್ಲಿ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರಅಹ್ಮದ ಖಾನರವರು ರೈತರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಮಾ.9 ರಂದು ನಡೆಯಲಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು 212 ಕೋಟಿ ರೂ.ಗಳ ವೆಚ್ಚದ ಆಣೂರ ಕರೆಗೆ ನೀರು ತುಂಬಿಸುವ ಯೋಜನೆಯ ಆದೇಶವನ್ನು ಸರಕಾರದಿಂದ ತಂದು ರೈತರಿಗೆ ತಲುಪಿಸಿದಲ್ಲಿ  ಕಪ್ಪು ಬಟ್ಟೆ ಪ್ರದರ್ಶನವನ್ನು ಹಿಂಪಡೆಯುವುದಾಗಿ ಹೇಳಿದರು.
   
        ಮಾ.9 ರಂದು ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಿಸನಹಳ್ಳಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರದರ್ಶನ ಮಾಡುವ ಹೋರಾಟಕ್ಕೆ ಪಕ್ಷಾತೀತವಾಗಿ ತಾಲೂಕಿನ ಎಲ್ಲಾ ರೈತರು ಬೆಂಬಲಿಸಬೇಕಲ್ಲದೆ  ನಮ್ಮ ಹೋರಾಟದಲ್ಲಿ ಭಾಗವಹಿಸಬೇಕೆಂದು ರೈತರಲ್ಲಿ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು, ಈ ಸಂದರ್ಭದಲ್ಲಿ ರೈತ ಸಂಘದ ಧುರೀಣರಾದ ಕಿರಣಕುಮಾರ ಗಡಿಗೋಳ, ಚಿಕ್ಕಣ್ಣ ಛತ್ರದ, ಮೌನೇಶ ಕಮ್ಮಾರ, ಅಶೋಕ ಮಾಳೇನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link