ವೀರ ಯೋಧರ ಸಾವಿಗೆ ಹೊಣೆ ಯಾರು?

ದಾವಣಗೆರೆ

         ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಬಲಿಯಾದ ವೀರ ಯೋಧರ ಸಾವಿಗೆ ಹೊಣೆ ಯಾರು ಎಂದು ಕೆಪಿಸಿಸಿ ವಕ್ತಾರ ಮುರಳೀಧರ್ ಹಾಲಪ್ಪ ಪ್ರಶ್ನಿಸಿದರು.

          ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಸಭಾಂಗಣದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ ಲೋಕಸಭಾ ಚುನಾವಣಾ ಸಿದ್ಧತಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ದಾವಣಗೆರೆ ಸೇರಿದಂತೆ ಯಾವುದೇ ಊರುಗಳಲ್ಲಿ ಸಣ್ಣ-ಪುಟ್ಟ ಘಟನೆ ನಡೆದರೂ ಗೃಹ ಸಚಿವ, ಮುಖ್ಯಮಂತ್ರಿಗಳು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆನ್ನುವುದರ ವರೆಗೂ ಒತ್ತಾಯಗಳು ಕೇಳಿ ಬರುತ್ತವೆ. ಆದರೆ, ಪುಲ್ವಾಮಾದಲ್ಲಿ 44 ಜನ ವೀರ ಯೋಧರು ಉಗ್ರರದಾಳಿಗೆ ಒಳಗಾಗಿ ವೀರ ಮರಣ ಹೊಂದಿದರೂ ಅದರ ನೈತಿಕ ಜವಾಬ್ದಾರಿಯನ್ನು ಹಾಗೂ ಹೊಣೆ ಹೊರಲು ಯಾರೂ ಮುಂದೆ ಬರುತ್ತಿಲ್ಲ. ಇದನ್ನು ಪ್ರಶ್ನಿಸಿದರೆ, ದೇಶ ದ್ರೋಹಿ, ರಾಷ್ಟ್ರ ವಿರೋಧಿ ಎಂಬ ಹಣೆಪಟ್ಟೆ ಕಟ್ಟಿಬಿಡುತ್ತಾರೆಂದು ಮಾರ್ಮಿಕವಾಗಿ ನುಡಿದರು.

            ರಾಷ್ಟ್ರಪತಿ ಆಡಳಿತ ಹೇರಿಕೆಯಲ್ಲಿರುವ ಜಮ್ಮು ಕಾಶ್ಮೀರ ಸರ್ಕಾರದ ರಾಜ್ಯಪಾಲರು ಸಹ ಈ ದಾಳಿಯ ಬಗ್ಗೆ ಒಂದು ಅಧಿಕೃತ ಹೇಳಿಕೆಯನ್ನು ಎಲ್ಲೂ ನೀಡಿಲ್ಲ. ಆದರೆ, ಇದರ ಬದಲಾಗಿ ಸರ್ಕಾರದ ಯಾವುದೇ ಜವಾಬ್ದಾರಿ ಇಲ್ಲದ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ನಮ್ಮ 44 ಜನ ಸೈನಿಕರನ್ನು ಕೊಂದ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಿಕ್ಕಾಗಿ, ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿ 300 ಜನ ಭಯೋತ್ಪಾದಕರನ್ನು ಸಂಹಾರ ಮಾಡಿದ್ದೇವೆ ಎನ್ನುತ್ತಾರೆ. ಆದರೆ, ಈ ಹೇಳಿಕೆಯನ್ನು ಸೇನೆಯ ಮುಖ್ಯಸ್ಥರು ಅಲ್ಲಗೆಳೆಯುತ್ತಾರೆ. ಆದ್ದರಿಂದ ಇಂತಹ ಬೇಜವಾಬ್ದಾರಿ ತನದ ಹೇಳಿಕೆಗಳ ಬಗ್ಗೆ ಚರ್ಚೆ ಆರಂಭಿಸಬೇಕೆಂದು ಕರೆ ನೀಡಿದರು.

           44 ಜನ ವೀರಯೋಧರನ್ನು ಉಗ್ರರು ಬಲಿ ಪಡೆದಾಗ ದೇಶದ ಕಾವಲುಗಾರ ಎಂಬುದಾಗಿ ಹೇಳಿಕೊಳ್ಳುವ, ವಿಶ್ವ ಮಾನ್ಯ ನರೇಂದ್ರ ಮೋದಿಯವರು ನೈನಿತಾಲ್‍ನ ಕೋಬಾಟ್ ಅರಣ್ಯ ಪ್ರದೇಶದಲ್ಲಿ ವೈಲ್ಡ್‍ಲೈಫ್ ವಾಹಿನಿಯೊಂದರ ಶೂಟಿಂಗ್‍ನಲ್ಲಿದ್ದರು. ಬಳಿಕ ಶೂಟಿಂಗ್ ಮುಗಿಸಿಕೊಂಡು ಸಕ್ರ್ಯೂಟ್ ಹೌಸ್‍ಗೆ ಹೋಗಿ, ಇಂಪೋರ್ಟೆಡ್ ಅಣಬೆ ಸೇವಿಸಿ ಉಗ್ರರ ದಾಳಿ ನಡೆದ ಸುಮಾರು ನಾಲ್ಕು ಗಂಟೆಯ ಬಳಿಕ ಮಾತನಾಡಿದರು.

           ಇದು ಮೋದಿಗೆ ದೇಶದ ಸೈನಿಕರ ಮೇಲೆ ಎಂತಹ ಕಾಳಜಿ ಇದೆ ಎಂಬುದನ್ನು ತೋರಿಸುತ್ತದೆ ಎಂದರು.ಪುಲ್ವಾಮಾ ಘಟನೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳಬೇಕೆಂಬ ಕಾರಣಕ್ಕೆ ಮಾರನೆಯ ದಿನವೇ ನರೇಂದ್ರ ಮೋದಿ ಆಂಧ್ರಪ್ರದೇಶದಲ್ಲಿ, ಅಮಿತಾಷಾ ಹಾಗೂ ರಾಜನಾಥ್ ಸಿಂಗ್ ಬೇರೆ, ಬೇರೆ ರಾಜ್ಯಗಳಲ್ಲಿ ಬಿಜೆಪಿ ಸಮಾವೇಶಗಳಲ್ಲಿ ಭಾಗವಹಿಸಿದ್ದರು. ಆದರೆ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಗುಜರಾತ್‍ನ ಅಹಮದಾಬಾದ್‍ನಲ್ಲಿ ನಿಗದಿಯಾಗಿದ್ದ ಸಿಡಬ್ಲ್ಯುಸಿ ಸಭೆಯನ್ನು ರದ್ದು ಮಾಡಿ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಇದು ನಿಜವಾದ ದೇಶ ಪ್ರೇಮ ಎಂದರು.

          ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಲಿಲ್ಲ. ಲಿಂಗಾಯತ ಸಮುದಾಯದ ಒಬ್ಬರಿಗೂ ಏಕೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಿಲ್ಲ ಎಂದು ಪ್ರಶ್ನಿಸಿದ ಅವರು, ಒಕ್ಕಲಿಗ ಸಮುದಾಯದ ಸದಾನಂದಗೌಡರಿಗೂ ಅತ್ಯಂತ ಸಣ್ಣ ಖಾತೆ ನೀಡಿದ್ದಾರೆ. ಹೀಗೆ ಕೇಂದ್ರ ಸರ್ಕಾರ ಮಣ್ಣು ಎರುಚುತ್ತಿದೆ ಎಂದು ಆರೋಪಿಸಿದರು.

         ಯುಪಿಎ ಸರ್ಕಾರ ಎರಡೂ ಅವಧಿಯಲ್ಲಿ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿತ್ತು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಈಗಿನ ಜಂಟಿ ಸರ್ಕಾರ ರಾಜ್ಯದ ರೈತರ 48 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಮುಂದಾಗಿದೆ. ಆದರೆ, ಸರ್ಕಾರ ಹಂತ, ಹಂತವಾಗಿ ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿದ ಸಂದರ್ಭದಲ್ಲಿ ಬಿಜೆಪಿ ನಾಯಕರು ಕಂತಿನ ರೂಪದಲ್ಲಿ ಸಾಲ ತೀರಿಸುತ್ತೀರಾ ಎಂಬುದಾಗಿ ಪ್ರಶ್ನಿಸಿದ್ದರು. ಆದರೆ, ಈಗ ಬಿಜೆಪಿ ಸರ್ಕಾರ ರೈತರಿಗೆ ಕೊಡುವ 6 ಸಾವಿರ ರೂ. ಹಣವನ್ನು ಮೂರು ಕಂತಿನಲ್ಲಿ ಹಲವು ಷರತ್ತುಗಳನ್ನು ವಿಧಿಸಿ ಜಮೆ ಮಾಡುವುದಾಗಿ ಹೇಳುತ್ತಿದೆ. ಆ ಹಣ ಜಮೆ ಆದಾಗಲೆ ಗ್ಯಾರೆಂಟೆ ಎಂದು ಶಂಕಿಸಿದರು.

           ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ, ಎಸ್.ಎಸ್.ಮಲ್ಲಿಕಾರ್ಜುನ್‍ರವರು ಸಚಿವರಾಗಿದ್ದಾಗ ರಸ್ತೆ ಅಭಿವೃದ್ಧಿ, ಗಾಜಿನ ಮನೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಮತದಾರರು ಹೇಗೆ ವೋಟು ಹಾಕಿದರು ಎಂಬುದು ಈಗಲೂ ಕಾಡುತ್ತಿದೆ. ಈಗ ಜನರಿಗೆ ಮನವರಿಕೆಯಾಗಿದೆ ಎಂದರು.

           ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 20-22 ಕ್ಷೇತ್ರಗಳಲ್ಲಿ ಗೆಲ್ಲಿಸಬೇಕೆಂಬ ಸಂಕಲ್ಪವನ್ನು ಪಕ್ಷದ ವರಿಷ್ಠರು ಮಾಡಿದ್ದಾರೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಎರಡು ಅವಧಿಯಲ್ಲಿ ಹಾಗೂ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಸಲಹೆ ನೀಡಿದರು.

          ಕೇಂದ್ರದ ಬಿಜೆಪಿ ಸುಳ್ಳು ಹೇಳುತ್ತಲೇ ಅಧಿಕಾರ ನಡೆಸುತ್ತಿದೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಮಾಡಲು ಹೊರಟಿದೆ. ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳು ಈಡೇರಿಲ್ಲ. ವಿದೇಶದಿಂದ ಕಪ್ಪು ಹಣ ವಾಪಸ್ಸು ತಂದು ರೈತರ ಖಾತೆಗೆ ಹಾಕುವುದಾಗಿ ಹೇಳಿದ್ದ ಮೋದಿ, ನುಡಿದಂತೆ ನಡೆದಿದ್ದಾರೆಯೇ ಎಂದು ಪ್ರಶ್ನಿಸಿದರು.

           ಇತ್ತೀಚೆಗೆ ನಡೆದ ಸರ್ಜಿಕಲ್‍ಸ್ಟ್ರೈಕ್ ವಿಷಯವನ್ನು ಬಿಜೆಪಿ ರಾಜಕೀಯವಾಗಿ ಬಳಸುತ್ತಿದ್ದು, ಇದಕ್ಕೆ ಯಡಿಯೂರಪ್ಪ ಈ ನಿರ್ಧಿಷ್ಟ ದಾಳಿಯಿಂದ 24 ಸ್ಥಾನಗಳಲ್ಲಿ ಗೆಲ್ಲಲು ಸಹಕಾರಿಯಾಗಲಿದೆ ಎಂಬುದೇ ಸಾಕ್ಷಿಯಾಗಿದೆ. ಇದನ್ನು ಜನತೆ ತೀವ್ರವಾಗಿ ಖಂಡಿಸಬೇಕೆಂದು ಕರೆ ನೀಡಿದರು.

          ಕಾರ್ಯಕ್ರಮದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟಿ, ಪಕ್ಷದ ಮುಖಂಡರಾದ ಖಾದರ್ ಮೊಹುದ್ದೀನ್ ಶೇಖ್, ಜಮಖಂಡಿ ರಾಜು, ಅಮೃತೇಶ್ವರ್, ಬಿ.ಕೆ.ಪರಶುರಾಮ್, ಅಯೂಬ್ ಪೈಲ್ವಾನ್, ಲಿಂಗರಾಜ್, ಚಂದ್ರಶೇಖರ್, ಯತಿರಾಜ್, ನಂಜಾ ನಾಯ್ಕ, ಅಜ್ಜಪ್ಪ ಪವಾರ್, ಮುದೇಗೌಡ್ರ ಗಿರೀಶ್, ಮಲ್ಲಿಕಾರ್ಜುನ.ಎಸ್, ಸೋಮಲಾಪುರ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.
ದಿನೇಶ್ ಕೆ. ಶೆಟ್ಟಿ ಸ್ವಾಗತಿಸಿದರು. ಎ.ನಾಗರಾಜ್ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link