ಹರಪನಹಳ್ಳಿ
ರಾಗಿ , ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಜ್ಯ ಕಾರ್ಯಧ್ಯಕ್ಷ ಎಚ್.ಎಂ.ಮಹೇಶ್ವರಸ್ವಾಮಿ, `ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ಹರಪನಹಳ್ಳಿ ಸತತ ಬರಗಾಲದಿಂದ ತತ್ತರಿಸಿದೆ. ಅಳಿದೂಳಿದ ಬೆಳೆಗಳಿಗಾದರೂ ಸರ್ಕಾರ ಸೂಕ್ತ ಬೆಲೆ ನಿಗದಿ ಮಾಡಬೇಕು.
ಮಧ್ಯವರ್ತಿಗಳ ಹಾವಳಿಗೆ ರೈತರು ಸಿಕ್ಕು ನಲುಗುವಂತಾಗಿದೆ. ಅನಿಲ ಭಾಗ್ಯ ಪಡೆದ ಬಿಪಿಎಲ್ ಕಾರ್ಡದಾರರಿಗೆ ಸೀಮೆಎಣ್ಣೆ ರದ್ದುಗೊಳಿಸುವುದು ಸಲ್ಲ. ಸಿಲೆಂಡರ್ನಿಂದ ಅಡುಗೆ ಮಾಡುವುದೇ ವಿನಹಃ ದೀಪ ಹಚ್ಚಲು ಬರುವುದಿಲ್ಲ. ಹಾಗಾಗಿ ಬಿಪಿಎಲ್ ಕಾರ್ಡ್ ಇರುವವರಿಗೆ ಸೀಮೆಎಣ್ಣೆ ನೀಡಬೇಕು’ ಎಂದು ಆಗ್ರಹಿಸಿದರು.
ಬೂದಿಹಾಳ ಕೆ.ಎನ್.ಸಿದ್ದೇಶ್, `ಗುಳೆ ಹೋಗುವ ಗ್ರಾಮಗಳ ಸಮೀಕ್ಷೆ ಮಾಡಿ ಕೂಲಿ ಕಾರ್ಮಿಕರನ್ನು ವಾಪಸ್ಸು ಕರೆ ತಂದು ಅವರಿಗೆ ಕೆಲಸ ನೀಡಬೇಕು. ನರೇಗಾ ಯೋಜನೆಯಲ್ಲಿ ಯಂತ್ರಗಳನ್ನು ಬಳಸದೆ ಕೂಲಿಕಾರರಿಗೆ, ಬಡವರಿಗೆ ಕೆಲಸ ನೀಡಿದಲ್ಲಿ ಗುಳೆ ಹೋಗುವುದು ತಪ್ಪುತ್ತದೆ’ ಎಂದರು.ಸಂಘಟನೆಯ ಮುಖಂಡರಾದ ಎಂ.ಶಫಿವುಲ್ಲಾ, ಜಿ.ಚಂದ್ರಪ್ಪ, ಟಿ.ರೇವಪ್ಪ, ಕೆ.ಕೊಟ್ರಪ್ಪ, ಕೆ.ರಮೇಶ್, ಎಚ್.ಹನುಮಂತಪ್ಪ, ಕುಲುಮಿ ಚಂದ್ರಪ್ಪ, ಬಿ.ನೀಲಪ್ಪ, ಚನ್ನಬಸಪ್ಪ, ಕರೀಂಸಾಬ್, ಎಂ.ಅಂಜಿನಪ್ಪ, ಬಿ.ಶಂಬುಲಿಂಗಪ್ಪ ಇವರೂ ಇದ್ದರು.