ಚಿತ್ರದುರ್ಗ:
ಎಲ್ಲಾ ಧರ್ಮ ಜಾತಿಯನ್ನು ಪ್ರೀತಿಸಿ ಗೌರವಿಸಿ ಜೊತೆಯಲ್ಲಿ ಕರೆದುಕೊಂಡು ಹೋಗುವುದೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮೂಲ ಉದ್ದೇಶ ಎಂದು ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಮಾಜಿ ಮುಖ್ಯ ಆಯುಕ್ತರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಎ.ಎಸ್.ಚಂದ್ರಶೇಖರ್ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ ಜಿಲ್ಲಾ ಸಂಸ್ಥೆಯಿಂದ ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ಕಾಲೇಜಿನ ಪ್ರಾಂಶುಪಾಲರು ಹಾಗೂ ರೋವರ್ಸ್, ಸ್ಕೌಟ್ ಲೀಡರ್, ರೇಂಜರ್, ಲೀಡರ್‍ಗಳಿಗೆ ಕ್ರೀಡಾಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಒಂದು ದಿನದ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮೈಮೇಲೆ ಸಮವಸ್ತ್ರವನ್ನು ಧರಿಸಲು ಇದೊಂದು ಅವಕಾಶ. ಸಮವಸ್ತ್ರಕ್ಕೆ ತನ್ನದೆ ಆದ ಮಹತ್ವವಿದೆ. ಲಾರ್ಡ್‍ಬೇಡನ್ ಪೋವೆಲ್‍ರವರು ಇಪ್ಪತ್ತನೇ ಶತಮಾನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ದೊಡ್ಡ ಚಳುವಳಿ ಹುಟ್ಟುಹಾಕಿದರು. ಮಕ್ಕಳಲ್ಲಿ ಸದಾ ಸಕಾರಾತ್ಮಕ ಗುಣಗಳನ್ನು ಬಿತ್ತಬೇಕು ಎನ್ನುವುದು ಲಾರ್ಡ್‍ಬೇಡನ್ ಪೋವೆಲ್‍ರವರ ಉದ್ದೇಶವಾಗಿತ್ತು. ಹಾಗಾಗಿ ಅವರು ಗುಂಪು ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟರು. ರಾಷ್ಟ್ರ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರ ಅತ್ಯಮೂಲ್ಯವಾದುದು. ನಾಲ್ಕು ಗೋಡೆಯ ಮಧ್ಯೆ ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಪರಿಸರ ಪ್ರಕೃತಿಯ ನಡುವೆ ಕಲಿಸುವುದು ಸಾಕಷ್ಟಿದೆ. ಕಾಡು, ಮೇಡು, ಗುಡ್ಡ, ಕೊಳ್ಳ, ನದಿ ತಿರುಗಾಡಬೇಕು. ಪ್ರಕೃತಿ ಸೌಂದರ್ಯ ನೋಡಲು ಸೌಟ್ ಅಂಡ್ ಗೈಡ್ ಸಂಸ್ಥೆಯಲ್ಲಿ ಅವಕಾಶವಿದೆ ಎಂದು ಸಂಸ್ಥೆಯ ಮಹತ್ವ ತಿಳಿಸಿದರು.
ಇನ್ನೂರಕ್ಕೂ ಹೆಚ್ಚು ದೇಶಗಳಲ್ಲಿ ಸ್ಕೌಟ್ ಅಂಡ್ ಗೈಡ್ ಸಂಸ್ಥೆ ಕೆಲಸ ಮಾಡುತ್ತಿದೆ. ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಕಾಲೇಜಿನ ಯುವಕ-ಯುವತಿಯರನ್ನು ಬಳಸಿಕೊಳ್ಳಿ. ರಾಷ್ಟ್ರಪತಿ ಬಳಿ ಹೋಗಿ ಪದಕ ಪಡೆಯುವ ಸುವರ್ಣಾವಕಾಶವಿದೆ. ಮಕ್ಕಳಿಗಾಗಿ ಸಮಯ ಮೀಸಲಿಡಿ. ಪ್ರಥಮ ಚಿಕಿತ್ಸೆ ತರಬೇತಿ ನೀವುಗಳು ಕಡ್ಡಾಯವಾಗಿ ಪಡೆದಿರಬೇಕು. ಮೂರು ವರ್ಷದಲ್ಲಿ ಕನಿಷ್ಟ ಹತ್ತು ವಿದ್ಯಾರ್ಥಿಗಳನ್ನು ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ತಯಾರು ಮಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಕರೆ ನೀಡಿದರು.
ರಾಜ್ಯ ಗೈಡ್ ವಿಭಾಗದ ತರಬೇತಿ ಆಯುಕ್ತರಾದ ಶ್ಯಾಮಲ ಮಾತನಾಡುತ್ತ ಸ್ಕೌಟ್ ಅಂಡ್ ಗೈಡ್ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಭೌದ್ದಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ, ಭಾವನಾತ್ಮಕವಾಗಿ ಮಕ್ಕಳನ್ನು ಅಣಿಗೊಳಿಸುವುದು ಸಂಸ್ಥೆಯ ಧ್ಯೇಯೋದ್ದೇಶ. ರಾಜ್ಯಾದ್ಯಂತ ಪ್ರತಿ ಕಾಲೇಜಿನಲ್ಲಿ ವಾರದಲ್ಲಿ ಒಂದು ದಿನ ಒಂದು ಗಂಟೆ ತರಬೇತಿ ನೀಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ದ ಜೀವನ ನಡೆಸಲು ನೆರವಾಗಲಿದೆ ಎಂದು ಹೇಳಿದರು.
ಜಿಲ್ಲಾ ಪುರಸ್ಕಾರ, ರಾಜ್ಯ ಪುರಸ್ಕಾರ, ರಾಷ್ಟ್ರಪತಿ ಪುರುಸ್ಕಾರ. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯವನ್ನು ಸ್ಕೌಟ್ ಅಂಡ್ ಗೈಡ್ ಸಂಸ್ಥೆಯಿಂದ ಪಡೆದುಕೊಳ್ಳಬಹುದು. 112 ವರ್ಷಗಳ ಇತಿಹಾಸವುಳ್ಳ್ಳ ಈ ಸಂಸ್ಥೆಯಿಂದ ಮಕ್ಕಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು ಬಹಳ ಮುಖ್ಯ ಎಂದರು.
ಸ್ಕೌಟ್ ಅಂಡ್ ಗೈಡ್ ಜಿಲ್ಲಾ ಮುಖ್ಯ ಆಯುಕ್ತ ಎಂ.ರೇವಣಸಿದ್ದಪ್ಪ ಮಾತನಾಡಿ ಪ್ರಾಚಾರ್ಯರಿಗೆ ಮತ್ತು ಉಪನ್ಯಾಸಕರುಗಳಿಗೆ ಕಡ್ಡಾಯವಾಗಿ ತರಬೇತಿ ಬೇಕು. ಸ್ಕೌಟ್ ಅಂಡ್ ಗೈಡ್‍ನ ಪ್ರಾಮುಖ್ಯತೆ ತಿಳಿದುಕೊಂಡರೆ ರೋವರ್ಸ್ ಅಂಡ್ ರೇಂಜರ್ಸ್‍ಗಳನ್ನು ಬೆಳೆಸುವ ಅಕವಾಶ ಸಿಗುತ್ತದೆ. ಸ್ಕೌಟ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಅಯುಕ್ತರಾದ ಪಿ.ಜಿ.ಆರ್.ಸಿಂಧ್ಯಾರವರು ಶಿಕ್ಷಣ ಇಲಾಖೆ ಸಂಸ್ಥೆ ನಡುವೆ ಹೆಚ್ಚಿನ ಬಾಂಧವ್ಯ ವೃದ್ದಿಸಿದ್ದಾರೆ.
ಸ್ವಚ್ಚತೆ, ಸಮಾಜಸೇವೆ, ಪರೋಪಕಾರ ಗುಣ ಇದರಿಂದ ಬೆಳೆಯುತ್ತದೆ ಎಂದು ತಿಳಿಸಿದರು.ರಾಜ್ಯ ಗೈಡ್ ವಿಭಾಗದ ಆಯುಕ್ತರಾದ ಶಕುಂತಲ ಮಾಹಿತಿ ಶಿಬಿರದ ಅಧ್ಯಕ್ಷತ್ಷೆ ವಹಿಸಿ ಮಾತನಾಡಿ ರಾಜ್ಯದ ಆರು ಜಿಲ್ಲೆಗಳಲ್ಲಿ ಈಗಾಗಲೇ ಸಮಾವೇಶ ಮಾಡಲಾಗಿದೆ. ಐತಿಹಾಸಿಕ ಚಿತ್ರದುರ್ಗ ಜಿಲ್ಲೆಯಲ್ಲಿ ಮಾಹಿತಿ ಶಿಬಿರ ನಡೆಸುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾದುದು. ಸ್ಕೌಟ್ ಅಂಡ್ ಗೈಡ್‍ನಲ್ಲಿ ಬದ್ದತೆ ಇದ್ದರೆ ಮಾತ್ರ ಸಂಸ್ಥೆಯನ್ನು ಬೆಳೆಸಿ ಉಳಿಸಲು ಸಾಧ್ಯ. ಅಂತರಾಷ್ಟ್ರೀಯ ಸಂಸ್ಥೆಯಾಗಿರುವುದರಿಂದ ಸಹೋದರತ್ವ, ದೇಶಪ್ರೇಮ, ಭಾತೃತ್ವ ಮೂಡಲಿದೆ ಎಂದು ಸಂಸ್ಥೆಯ ಉದ್ದೇಶ ವಿವರಿಸಿದರು.
ಜಿಲ್ಲಾ ಗೈಡ್ ಆಯುಕ್ತೆ ಸುನಿತಾಮಲ್ಲಿಕಾರ್ಜುನ್, ತಾಲೂಕು ಎ.ಡಿ.ಸಿ. ಶಶಿಕಲ ರವಿಶಂಕರ್, ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ವೇದಿಕೆಯಲ್ಲಿದ್ದರು.ಸಹ ಕಾರ್ಯದರ್ಶಿ ಡಾ.ರಹಮತ್‍ವುಲ್ಲಾ, ಎ.ಡಿ.ಸಿ. ರೇವಣ್ಣ, ಶಿಕ್ಷಕರುಗಳಾದ ರವಿ, ನೂರ್‍ಫಾತಿಮ ಈ ಸಂದರ್ಭದಲ್ಲಿ ಹಾಜರಿದ್ದರು.