ಆಯಕರ್ ಸೇವಾ ಕೇಂದ್ರಕ್ಕೆ ಚಾಲನೆ

0
3
ಚಿತ್ರದುರ್ಗ
      ದೇಶದ ಅಭಿವೃದ್ಧಿಗಾಗಿ ತೆರಿಗೆಯನ್ನು ಸಮರ್ಪಕವಾಗಿ ಪಾವತಿಸುವುದು, ಸಮಾಜದಲ್ಲಿ ಗೌರವಯುತ ಕಾರ್ಯವಾಗಿದೆ ಎಂದು ಕರ್ನಾಟಕ-ಗೋವಾ ರಾಜ್ಯಗಳ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್. ಬಾಲಕೃಷ್ಣನ್ ಅವರು ಹೇಳಿದರು.
 
      ನಗರದ ತಮಟಕಲ್ ರಸ್ತೆಯ ಆದಾಯ ತೆರಿಗೆ ಇಲಾಖೆ ಆವರಣದಲ್ಲಿ ನೂತನವಾಗಿ ಪ್ರಾರಂಭಿಸಲಾದ ಆಯಕರ್ ಸೇವಾ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
      ಆದಾಯ ತೆರಿಗೆ ಇಲಾಖೆಯು ದೇಶದ ಆರ್ಥಿಕ ಭದ್ರತೆ ಹಾಗೂ ಅಭಿವೃದ್ಧಿಯ ಉದ್ದೇಶದೊಂದಿಗೆ ಕರ ಸಂಗ್ರಹಿಸುವ ಮಹತ್ವಪೂರ್ಣ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ. ಇಲಾಖೆಯನ್ನು ಜನಸ್ನೇಹಿಯನ್ನಾಗಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಾಗರಿಕರು ಆರ್ಥಿಕ ಅಭಿವೃದ್ಧಿ ಹೊಂದುವುದರ ಜೊತೆಗೆ, ದೇಶದ ಅಭಿವೃದ್ಧಿಗೂ ಕಾನೂನಾತ್ಮಕವಾಗಿ ತೆರಿಗೆ ಪಾವತಿಸುವ ಮೂಲಕ ಕೊಡುಗೆ ನೀಡುವುದು ಅವರ ಕರ್ತವ್ಯವಾಗಿದೆ. ಸಮರ್ಪಕ ಆದಾಯ ತೆರಿಗೆ ಪಾವತಿ ಕಾರ್ಯ ಸಮಾಜದಲ್ಲಿ ಅವರನ್ನು ಅತ್ಯಂತ ಗೌರವಯುತವಾಗಿ ಕಾಣುವಂತೆ ಮಾಡುತ್ತದೆ.
      ತೆರಿಗೆ ಪಾವತಿದಾರರಿಗೆ ಉತ್ತಮ ಸೌಲಭ್ಯ ಹಾಗೂ ಪ್ರಕ್ರಿಯೆಗಳಲ್ಲಿ ಸರಳತೆ ಮತ್ತು ಪಾರದರ್ಶಕತೆ ತರಲು ಇಲಾಖೆ ನಿರಂತರವಾಗಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೆ ಆದಾಯ ತೆರಿಗೆ ಪಾವತಿ ಮತ್ತು ರಿಟನ್ರ್ಸ್ ಫೈಲ್ ಮಾಡುವುದು, ನಿಯಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಮುಂತಾದ ಪ್ರಕ್ರಿಯೆಗಳನ್ನು ಇಲಾಖೆಯ ಅಧಿಕೃತ ವೆಬ್‍ಸೈಟ್‍ಗಳಲ್ಲಿ ಸುಲಭವಾಗಿ ಕೈಗೊಳ್ಳಬಹುದಾಗಿದೆ. ಆದಾಯ ತೆರಿಗೆ ಪಾವತಿದಾರರು, ತೆರಿಗೆ ಡಿಡಕ್ಟರ್ಸ್‍ಗಳು ನಿಯಮಗಳಿಗೆ ಅನುಗುಣವಾಗಿ ಆದಾಯ ತೆರಿಗೆಯನ್ನು ನಿಗದಿತ ಕಾಲಮಿತಿಯಲ್ಲಿ ಪಾವತಿಸಬೇಕು. ತಪ್ಪಿದಲ್ಲಿ ದಂಡ ಪಾವತಿ ಹಾಗೂ ಕಾನೂನಾತ್ಮಕ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಮೊಬೈಲ್ ಆ್ಯಪ್ ಶೀಘ್ರ :
        ರಾಜ್ಯದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು, ಶಾಲೆ, ಕಾಲೇಜುಗಳು, ಸಣ್ಣ ತೆರಿಗೆದಾರರು, ವೇತನ ಆಧಾರಿತ ತೆರಿಗೆ ಕಡಿತ ಗೊಳಿಸುವವರು ಸೇರಿದಂತೆ ತೆರಿಗೆ ಪಾವತಿದಾರರು ತೆರಿಗೆ ಪಾವತಿ ಮತ್ತು ರಿಟನ್ರ್ಸ್ ಫೈಲ್ ಮಾಡಲು ತೊಂದರೆ ಎದುರಿಸುತ್ತಿದ್ದು, ನಿರೀಕ್ಷಿತ ಮಟ್ಟದಲ್ಲಿ ರಿಟನ್ರ್ಸ್ ಫೈಲ್ ಆಗುತ್ತಿಲ್ಲ. ಹೀಗಾಗಿ ಸುಲಭವಾಗಿ ತೆರಿಗೆ ಪಾವತಿ ಮತ್ತು ರಿಟನ್ರ್ಸ್ ಫೈಲ್ ಮಾಡುವುದು ಸೇರಿದಂತೆ ವಿವಿಧ ಸೇವೆಯನ್ನು ಮೊಬೈಲ್ ಮೂಲಕವೇ ಒದಗಿಸುವಂತೆ ಮಾಡಲು ಆದಾಯ ತೆರಿಗೆ ಇಲಾಖೆಯು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಒಂದು ತಿಂಗಳ ಒಳಗಾಗಿ ಸಾರ್ವಜನಿಕರ ಸೇವೆಗಾಗಿ ಬಿಡುಗಡೆಯಾಗಲಿದೆ. ತೆರಿಗೆದಾರರು, ಡಿಡಕ್ಟರ್ಸ್‍ಗಳು ಈ ಸೌಲಭ್ಯವನ್ನು ಸುಲಭವಾಗಿ ಬಳಕೆ ಮಾಡಬಹುದಾಗಿದೆ ಎಂದರು.
ಭ್ರಷ್ಟಾಚಾರ ತಡೆಗಟ್ಟುವ ಸಾಮಥ್ರ್ಯ ಇಲಾಖೆಗಿದೆ :
        ತೆರಿಗೆ ವಂಚಿಸಿ, ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಹಣ ಗಳಿಸುವವರನ್ನು ಮಟ್ಟಹಾಕಿ, ಅವರ ಮುಖವಾಡ ಬಯಲುಮಾಡುವ ಸಾಮಥ್ರ್ಯ ಆದಾಯ ತೆರಿಗೆ ಇಲಾಖೆಗಿದೆ. ರೈತರು ಕೃಷಿ ಭೂಮಿ ಖರೀದಿಸಿ, ನ್ಯಾಯಯುತವಾಗಿ ಆಸ್ತಿ ಸಂಪಾದಿಸಿದರೆ ತಪ್ಪಿಲ್ಲ. ಆದರೆ ದುರಾಸೆಯಿಂದ ಆಸ್ತಿ ಮಾಡಲು ಬೇನಾಮಿ ಆಸ್ತಿ ಮಾಡುವವರನ್ನು ಬೇನಾಮಿ ಆಸ್ತಿ ನಿಷೇಧ ಕಾಯ್ದೆಯ ಪರಿಣಾಮಕಾರಿ ಜಾರಿ ಮೂಲಕ ಕಪ್ಪುಹಣ ಹೊಂದುವುದು, ವಿದೇಶದಲ್ಲಿ ಇಂತಹ ಹಣ ಹೂಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
       ಇಲಾಖೆಯ ಮಾಹಿತಿ ಮೂಲಗಳನ್ನು ಆಧರಿಸಿ, ನಮ್ಮ ಅಧಿಕಾರಿಗಳು ನಿರ್ಭಯವಾಗಿ ಆದಾಯ ತೆರಿಗೆ ದಾಳಿ ನಡೆಸಲಾಗುತ್ತಿದ್ದಾರೆ. ಕೇವಲ ಸಣ್ಣವರ ಮೇಲೆ ಮಾತ್ರ ಆದಾಯ ತೆರಿಗೆ ದಾಳಿ ಮಾಡಲಾಗುತ್ತದೆ ಎಂಬ ಆರೋಪವನ್ನು ಇಲಾಖೆ ದೂರ ಮಾಡಿದ್ದು, ಪ್ರಭಾವಿಗಳು, ದೊಡ್ಡ ದೊಡ್ಡ ವ್ಯಕ್ತಿಗಳನ್ನು ಗುರುತಿಸಿ, ಅಂತಹರ ವಿರುದ್ಧವೂ ಅಧಿಕಾರಿಗಳು ನಿರ್ಭಯವಾಗಿ ದಾಳಿ ನಡೆಸುತ್ತಿದ್ದಾರೆ. ಇದು ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿದೆ.
 
        ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಇಲಾಖೆಯು 32 ಕೋಟಿ ರೂ. ನಗದು ಹಾಗೂ ಸುಮಾರು 7 ಕೋಟಿ ರೂ. ಚಿನ್ನಾಭರಣಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದೆ. ಕರ್ನಾಟಕ-ಗೋವಾ ವಲಯದಲ್ಲಿ ಕಳೆದ ವರ್ಷ 1.21 ಲಕ್ಷ ಕೋಟಿ ರೂ. ಆದಾಯ ತೆರಿಗೆಯನ್ನು ಸಂಗ್ರಹಿಸಿದೆ. ಕಳೆದ ಬಾರಿಗಿಂತ ಶೇ. 17 ರಷ್ಟು ಹೆಚ್ಚಿನ ಆದಾಯ ತೆರಿಗೆ ಸಂಗ್ರಹಿಸಿದ್ದು, ದೇಶದಲ್ಲಿ ಮುಂಬೈ ಮತ್ತು ದೆಹಲಿ ನಂತರ ಮೂರನೆ ಅತಿ ಹೆಚ್ಚು ಆದಾಯ ತೆರಿಗೆ ಸಂಗ್ರಹಿಸಿದ ವಲಯ ಇದಾಗಿದೆ. ರಾಜ್ಯದಲ್ಲಿ ಒಟ್ಟು 18 ಆಯಕರ್ ಸೇವಾ ಕೇಂದ್ರ ಪ್ರಾರಂಭಿಸಲಾಗಿದೆ ಎಂದರು.
       ದಾವಣಗೆರೆಯ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತ ಗೋಲಿ ಶ್ರೀನಿವಾಸ ರಾವ್ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಐತಿಹಾಸಿಕವಾಗಿ ಖ್ಯಾತಿ ಹೊಂದಿದ್ದು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು, ನಾಯಕರು ಹಾಗೂ ಹೈದರಾಲಿಯ ಆಡಳಿತಕ್ಕೆ ಒಳಪಟ್ಟಿತ್ತು. ಜಿಲ್ಲೆ ಇತ್ತೀಚೆಗೆ ಉತ್ತಮ ಅಭಿವೃದ್ಧಿಯತ್ತ ಮುನ್ನಡೆದಿದ್ದು, ಇಲ್ಲಿನ ಜನರಿಗೆ ಕೃಷಿಯೇ ಪ್ರಮುಖ ಉದ್ಯೋಗವಾಗಿದೆ. ಜಿಲ್ಲೆ ಕಳೆದ 5-6 ವರ್ಷಗಳಿಂದಲೂ ಸತತವಾಗಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಕಳೆದ ವರ್ಷ ಸುಮಾರು 35000 ತೆರಿಗೆ ಪಾವತಿದಾರರಿಂದ 23 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.
        ತೆರಿಗೆ ಪಾವತಿದಾರರಿಗೆ ಸೂಕ್ತ ಮಾಹಿತಿ ನೀಡುವುದು, ಇಲಾಖೆಯಲ್ಲಿನ ಸೇವೆ, ಸೌಲಭ್ಯಗಳ ಕುರಿತು ಕಾರ್ಯಗಾರವನ್ನು ಏರ್ಪಡಿಸುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
 
         ದಾವಣಗೆರೆಯ ಹೆಚ್ಚುವರಿ ಆಯುಕ್ತ ಸುನಿಲ್ ಕುಮಾರ್ ಅಗರವಾಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ಆದಾಯ ತೆರಿಗೆ ಇಲಾಖೆ ಮಾದರಿ ಕಾರ್ಯ ನಿರ್ವಹಿಸುತ್ತಿದ್ದು, ಆದಾಯ ತೆರಿಗೆ ಪಾವತಿದಾರರಿಗೆ ಒಂದೇ ಸೂರಿನಡಿ ಎಲ್ಲ ಸೇವೆ ಲಭ್ಯವಾಗುವಂತೆ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದ್ದು, ಆಯಕರ್ ಸೇವಾ ಕೇಂದ್ರ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯಾಗಿದೆ ಎಂದರು.
ಚಿತ್ರದುರ್ಗದ ಆದಾಯ ತೆರಿಗೆ ಇಲಾಖೆ ಅಧಿಕಾರಿ ವರಪ್ರಸಾದ್, ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ, ಲಕ್ಷ್ಮೀಕಾಂತರೆಡ್ಡಿ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಜಿಲ್ಲೆಯ ಆದಾಯ ತೆರಿಗೆ ಸಲಹೆಗಾರರು, ಲೆಕ್ಕಪರಿಶೋಧಕರು, ತೆರಿಗೆ ಪಾವತಿದಾರರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here