ಕೋಮು ದ್ವೇಷ ಬಿತ್ತುವವರನ್ನು ತಿರಸ್ಕರಿಸಿ

ದಾವಣಗೆರೆ:

       ಯುವಜನರು ದೇಶ ಕಟ್ಟುವವರನ್ನು ಬೆಂಬಲಿಸಿ, ಕೋಮು ಭಾವನೆ, ದ್ವೇಷ ಬಿತ್ತುವವರನ್ನು ತಿರಸ್ಕರಿಸಬೇಕು ಎಂದು ಆನಗೋಡು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ ಕಿವಿಮಾತು ಹೇಳಿದ್ದಾರೆ.

       ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಲ್ಕುದುರೆ ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಲೋಕಸಭಾ ಸಿದ್ಧತಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಯುವಕರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಬದಲು ದ್ವೇಷ, ಕೋಮುಭಾವನೆ ಬಿತ್ತುವ ಕೆಲಸ ನಡೆಯುತ್ತಿದೆ. ಹೀಗಾಗಿ ಅಂಥವರ ಬಗ್ಗೆ ವಿದ್ಯಾರ್ಥಿ-ಯುವಜನರು ಎಚ್ಚೆತ್ತುಕೊಳ್ಳಬೇಕೆಂದು ಸಲಹೆ ನೀಡಿದರು.

       ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯಿಸುವ ಮೂಲಕ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಜನರಿಗೆ ಬದುಕಿನ ದಾರಿ ತೋರಿಸಿದ್ದರು. 18 ವರ್ಷಕ್ಕೆ ಕಾಲಿಟ್ಟವರಿಗೆ ಮತದಾನದ ಹಕ್ಕನ್ನು ನೀಡಿದ್ದು ರಾಜೀವ್ ಗಾಂಧಿ ಎಂದು ಸ್ಮರಿಸಿದರು.

      ಬೇರೆ ದೇಶದ ಹಳೆಯ ಫೋಟೋ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿ ಬಿಡುವ ಮೂಲಕ ಒಂದು ಕೋಮಿನ ವಿರುದ್ಧ ದೇಶದ ಯುವಶಕ್ತಿಯನ್ನು ಎತ್ತಿ ಕಟ್ಟುವ ಕೆಲಸ ಮಾಡಲಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕಳೆದ ಚುನಾವಣೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ, ಇದ್ದ ಉದ್ಯೋಗವನ್ನೂ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.

      ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದವರಿಗೆ ಕೂಲಿ ಹಣ ನೀಡುವುದಕ್ಕೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಉದ್ಯೋಗ ಖಾತರಿ ಹಣವನ್ನೂ ರೈತರಿಗೆ 2 ಸಾವಿರ ರು.ಗಳನ್ನು ತುಂಬಲು ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯದ ಸಮ್ಮಿಶ್ರ ಸರ್ಕಾರವು ನಮ್ಮ ರೈತರಿಗೆ ಹಾಲಿನಲ್ಲೇ 6 ರು. ಸಬ್ಸಿಡಿ ನೀಡುತ್ತಿದೆ. ಆದರೆ, ಮೋದಿ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

       ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಸೌಲಭ್ಯ, ಅವಕಾಶ ಸಿಗುವಂತೆ ಮುಖಂಡರು, ಕ್ಷೇತ್ರದ ಮುಖಂಡರು ಗಮನ ಹರಿಸಬೇಕು. ಅನ್ಯ ಪಕ್ಷದ ಕಾರ್ಯಕರ್ತರು ಇಂದು ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅದನ್ನು ತಡೆಯುವ ಕೆಲಸವೂ ನಮ್ಮ ಪಕ್ಷದ ನಾಯಕರಿಂಗ ಆಗಬೇಕಾಗಿದೆ ಎಂದರು.

        ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭೆ ಚುನಾವಣೆಯನ್ನು ಎದುರಿಸೋಣ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್ಸೆಸ್ ಮಲ್ಲಿಕಾರ್ಜುನ ಸ್ಪರ್ಧಿಸುವುದು ನಿಶ್ಚಿತವಾಗಿದ್ದು, 3 ಸಲವೂ ಅಲ್ಪ ಮತಗಳ ಅಂತರದಲ್ಲಿ ಸೋಲನುಭವಿಸಿದ್ದ ಎಸ್ಸೆಸ ಮಲ್ಲಿಕಾರ್ಜುನರನ್ನು ಈ ಬಾರಿ ಭಾರೀ ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ರಾಜಶೇಖರ್ ರೆಡ್ಡಿ ತರಬೇತಿ ನೀಡಿದರು.

        ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಶಶಿಕಲಾ, ಗ್ರಾಪಂ ಅಧ್ಯಕ್ಷ ಬಿ.ಜಿ.ಗೌಡರು, ಜಿಪಂ ಮಾಜಿ ಸದಸ್ಯರಾದ ತ್ಯಾವಣಿಗೆ ಪಿ.ಸಿ.ಗೋವಿಂದಸ್ವಾಮಿ, ನರೇಂದ್ರ ನಾಯ್ಕ, ಹಿರಿಯ ಮುಖಂಡರಾದ ತಿಪ್ಪಣ್ಣ, ಮಹೇಶ್ವರಪ್ಪ, ಹನುಮಂತಪ್ಪ, ಜ್ಯೋತಿ ಪ್ರಕಾಶ, ಅಜ್ಜಪ್ಪ, ಸತೀಶ ಪಟೇಲ್, ಇದಾಯತ್, ವಿಶ್ವನಾಥ ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link