ಚಿತ್ರದುರ್ಗ;
ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಸನ್ನದ್ಧರಾಗಿರುವ ಭಾರತೀಯ ಜನತಾ ಪಾರ್ಟಿಯ ನಾಯಕರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ವಿಚಾರ ಹೊಸ ತಲೆನೋವು ತರಿಸಿದೆ. ಅರಂಭದಲ್ಲಿ ಬೆರಳೆಣಿಕೆಯಷ್ಟು ಮಂದಿ ಆಕಾಂಕ್ಷಿಗಳಿದ್ದರೆ, ಇದೀಗ 18ಕ್ಕೂ ಹೆಚ್ಚು ಮಂದಿ ಟಿಕೆಟ್‍ಗಾಗಿ ನಾನಾ ನಮೂನೆಯ ಕಸರತ್ತು ನಡೆಸುತ್ತಿದ್ದಾರೆ.
ಈ ಚುನಾವಣೆಯಲ್ಲಿ ದೇಶದಲ್ಲಿ 300ಕ್ಕಿಂತಲೂ ಅಧಿಕಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುವಂತ ಗೇಮ್‍ಪ್ಲಾನ್ ಮಾಡಿಕೊಂಡಿದ್ದ ಬಿಜೆಪಿ, ಸಮರ್ಥರಿಗೆ ಟಿಕೆಟ್ ಕೊಡಲು ಚಿಂತನೆ ನಡೆಸಿದೆ. ಈ ನಡುವೆ ಕೆಲವು ಪ್ರಭಾವಿ ನಾಯಕರು ದೆಹಲಿ ಮಟ್ಟದಲ್ಲಿ ಲಾಭಿ ನಡೆಸಿದ್ದರೆ, ಇನ್ನೂ ಕೆಲವರು ಕ್ಷೇತ್ರದಲ್ಲಿ ಸುತ್ತಾಟ ನಡೆಸಿ ತಾವೂ ಪ್ರಬಲ ಟಿಕೆಟ್ ಆಕಾಂಕ್ಷಿ ಎಂಬುದನ್ನು ಬಿಂಬಿಸಿಕೊಂಡಿದ್ದಾರೆ.
ಮಾಜಿ ಸಂಸದ ಜನಾರ್ಧನಾಸ್ವಾಮಿ, ಮಾಜಿ ಸಚಿವ ನಾರಾಯಣಸ್ವಾಮಿ, ಹೊಳಲ್ಕೆರೆಯ ಹಾಲಿ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘುಚಂದನ್, ಮಾಜಿ ಶಾಸಕ ಮಾನಪ್ಪ ವಜ್ಜಲ್, ನಿವೃತ್ತ ಪೊಲೀಸ್ ಅಧಿಕಾರಿ ತಿಮ್ಮಪ್ಪ, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಸೇರಿದಂತೆ ಹಲವು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಕಳೆದೆರೆಡು ತಿಂಗಳಿಂದ ಮೌನವಾಗಿದ್ದ ರಘುಚಂದನ್, ಬೋವಿ ಸಮಾವೇಶದ ಬಳಿಕ ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎನ್ನುವ ಕೂಗು ಎದ್ದಿರುವ ಬೆನ್ನಲ್ಲೇ ರಘುಚಂದನ್ ಅವರ ಹೆಸರು ಇದೀಗ ದೆಹಲಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹೀಗಾಗಿ ಕೆಲವು ಪ್ರಭಾವಿ ಆಕಾಂಕ್ಷಿಗಳಿಗೆ ಹೊಸ ತಲೆನೋವು ಉಂಟಾಗಿದೆ.
ಬೋವಿ ಸಮಾವೇಶಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಾಸಕ ಎಂ.ಚಂದ್ರಪ್ಪ ಅವರ ನಿವಾಸಕ್ಕೆ ಭೋಜನಕ್ಕೆ ಬಂದಿದ್ದ ವೇಳೆ ಸ್ವತಃ ಚಂದ್ರಪ್ಪ ಅವರೇ ವಿಷಯ ಪ್ರಸ್ಥಾಪಿಸಿ ತಮ್ಮ ಪುತ್ರನಿಗೆ ಟಿಕೆಟ್ ಕೊಟ್ಟರೆ ಕ್ಷೇತ್ರದಲ್ಲಿ ದಾಖಲೆಯ ಫಲಿತಾಂಶ ತಂದುಕೊಡುವುದಾಗಿ ಹೇಳಿದ್ದಾರೆನ್ನಲಾಗಿದೆ. ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎನ್ನುವ ವಿಚಾರ ಪಕ್ಷದಲ್ಲಿ ಚರ್ಚೆ ನಡೆಯುತ್ತಿದ್ದು, ಕ್ಷೇತ್ರದಲ್ಲಿ ಗುರ್ತಿಸಿಕೊಳ್ಳುವಂತೆ ಯಡಿಯೂರಪ್ಪ ಅವರು ರಘಚಂದನ್ ಅವರಿಗೆ ಸೂಕ್ಷ್ಮವಾಗಿ ಹೇಳಿದ್ದಾರೆನ್ನುವ ವಿಚಾರ ಹೊರಬಿದ್ದಿದೆ.
ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದ್ದು, ದಲಿತರು, ಬೋವಿ, ಲಂಬಾಣಿ ಸಮುದಾಯಗಳ ಮತದಾರರು ಅಧಿಕವಾಗಿದ್ದಾರೆ. ಹಾಲಿ ಕಾಂಗ್ರೆಸ್‍ನ ಸಂಸದರು ಮಾದಿಗ ಸಮುದಾಯಕ್ಕೆ ಸೇರಿದವರಾಗಿರುವ ಕಾರಣ ಈ ಕ್ಷೇತ್ರದಲ್ಲಿ ಬೇರೆ ಸಮುದಾಯಗಳ ಸಮರ್ಥ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಗಂಭೀರ ಚಿಂತನೆ ನಡೆಸುತ್ತಿದೆ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರದಲ್ಲಿದ್ದು, ಈ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ ಎನ್ನುವ ಭಾವನೆ ಜನರಲ್ಲಿ ಮೂಡುತ್ತಿದೆ. ಮೋದಿ ಹವಾ ಬಯಲು ಸೀಮೆಯಲ್ಲಿಯೂ ಜೋರಾಗಿದೆ. ಈ ಕಾರಣಕ್ಕಾಗಿ ಬಿಜೆಪಿಯಿಂದ ಸ್ಪರ್ದಿಸಲು ಸಾಕಷ್ಟು ಮಂದಿ ಪ್ರಯತ್ನ ಮಾಡುತ್ತಿದ್ದಾರೆ.
ಉನ್ನತ ಮೂಲಗಳ ಪ್ರಕಾರ ಜಿಲ್ಲಾ ಸಮಿತಿಯಿಂದ ರವಾನೆಯಾಗಿರುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಸಂಸದ ಜನಾರ್ಧನಾಸ್ವಾಮಿ, ಮಾನಪ್ಪ ವಜ್ಜಲ್, ನಾರಾಯಣಸ್ವಾಮಿ ಹಾಗೂ ರಘುಚಂದನ್ ಅವರ ಹೆಸರು ಮುಂಚೂಣಿಯಲ್ಲಿದೆ.2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ದಿಸಿ ಗೆಲುವು ಸಾಧಿಸಿದ್ದ ಜನಾರ್ಧನಾಸ್ವಾಮಿ ಅವರು, ಕ್ಷೇತ್ರದಲ್ಲಿ ಒಂದಿಷ್ಟು ಉತ್ತಮ ಕೆಲಸ ಮಾಡಿದ್ದರು. ತಮ್ಮಲ್ಲಿನ ಪ್ರತಿಭೆ ದಕ್ಷತೆಯ ಮೂಲಕ ರಾಷ್ಟ್ರ ಮಟ್ಟದ ನಾಯಕರ ವಿಶ್ವಾಸವನ್ನೂ ಗಳಿಸಿ ವರ್ಚಸ್ಸು ಬೆಳೆಸಿಕೊಂಡಿದ್ದರು. ಜಿಲ್ಲೆಯಲ್ಲಿಯೂ ಉತ್ತಮ ಹೆಸರು ಇತ್ತು. ಕಳೆದ ಚುನಾವಣೆಯಲ್ಲಿ ಮೋದಿ ಹವಾ ಇದ್ದರೂ ಸೋತಿದ್ದರು. ಬಳಿಕ ಪಕ್ಷದ ಚಟುವಟಿಕೆಯಿಂದ ದೂರ ಸರಿದಿದ್ದರು. ಈ ಕಾರಣಕ್ಕಾಗಿ ಸ್ಥಳೀಯ ಮುಖಂಡರಲ್ಲಿ ಅವರ ಬಗ್ಗೆ ಒಂದಿಷ್ಟು ಅಸಮಧಾನ ಇದ್ದರೂ ಅಂತಿಮ ಕ್ಷಣದಲ್ಲಿ ವರಿಷ್ಟರು ಟಿಕೆಟ್ ಕೊಟ್ಟರೂ ಅಚ್ಚರಿ ಪಡಬೇಕಿಲ್ಲ.
ಮಾಜಿ ಸಚಿವ ಅನೇಕಲ್ ನಾರಾಯಣಸ್ವಾಮಿ ಅವರೂ ಪ್ರಬಲ ಆಕಾಂಕ್ಷಿಗಳಾಗಿದ್ದು, ಉನ್ನತ ಮಟ್ಟದಲ್ಲಿ ಟಿಕೆಟ್‍ಗೆ ಲಾಭಿ ಶುರುವಿಟ್ಟುಕೊಂಡಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿಯೂ ಕೆಲವಡೆ ಸುತ್ತಾಡಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ದಲಿತರು, ಲಂಭಾಣಿ, ಬೋವಿ ಮತ್ತು ಛಲವಾದಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಸುಮಾರು 3.50 ಲಕ್ಷದಷ್ಟು ಮಾದಿಗ ಸಮಾಜದ ಮತದಾರರು ಇದ್ದಾರೆ. ಈ ಕಾರಣಕ್ಕಾಗಿ ಮಾದಿಗರಿಗೆ ಟಿಕೆಟ್ ಕೊಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಮಾದಿಗರಿಗೆ ಟಿಕೆಟ್ ಕೊಡಲು ಹೈಕಮಾಂಡ್ ನಿರ್ಧರಿಸಿದರೆ ನಾರಾಯಣಸ್ವಾಮಿ ಅವರಿಗೆ ಯೋಗವಿದೆ.
ಈ ನಡುವೆ ಲಿಂಗಸೂರಿನ ಮಾಜಿ ಶಾಸಕ ಬೋವಿ ಸಮಾಜದ ಮಾನಪ್ಪ ವಜ್ಜಲ್ ಅವರು ಕೂಡಾ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದು, ಕ್ಷೇತ್ರದಲ್ಲಿ ಕಳೆದ ಎರಡು ತಿಂಗಳಿಂದ ಪ್ರವಾಸ ಮಾಡುತ್ತಿದ್ದಾರೆ. ಮೊನ್ನೆ ಚಿತ್ರದುರ್ಗದಲ್ಲಿ ನಡೆದ ಬೋವಿ ಸಮಾವೇಶದ ಮೂಲಕ ಯಡಿಯೂರಪ್ಪ ಅವರ ಮೇಲೆ ಟಿಕೆಟ್‍ಗಾಗಿ ಒತ್ತಡ ತಂದಿದ್ದಾರೆನ್ನಲಾಗಿದೆ.