ನವದೆಹಲಿ:

ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಮುಂಚೂಣಿ ರಾಷ್ಟ್ರವಾಗಿದ್ದ ಭಾರತ ಇದೀಗ 2ನೇ ಸ್ಥಾನಕ್ಕೆ ಕುಸಿದಿದ್ದು, ಸೌದಿ ಅರೇಬಿಯಾ ಇದೀಗ ಅಗ್ರ ಸ್ಥಾನಕ್ಕೇರಿದೆ.
ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್(ಎಸ್ಐಪಿಆರ್ಐ) ಸೋಮವಾರ ಪ್ರಕಟಿಸಿರುವ ವರದಿಯಲ್ಲಿ ಈ ಅಂಶ ತಿಳಿದು ಬಂದಿದೆ. 2009–13 ಮತ್ತು 2014–18ರ ನಡುವೆ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ 24ರಷ್ಟು ಇಳಿಕೆಯಾಗಿದೆ. ವರದಿ ಪ್ರಕಾರ, ರಷ್ಯಾದಿಂದ 2001ರಲ್ಲಿ ಯುದ್ಧ ವಿಮಾನಗಳಿಗೆ ಹಾಗೂ 2008ರಲ್ಲಿ ಫ್ರಾನ್ಸ್ನಿಂದ ಸಬ್ಮರೀನ್ಗಳ ಖರೀದಿಗೆ ಇಡಲಾದ ಬೇಡಿಕೆ ಪೂರೈಕೆಯಾಗುವಲ್ಲಿ ನಿಧಾನವಾಗಿರುವ ಕಾರಣದಿಂದಲೂ ಆಮದು ಪ್ರಮಾಣ ಕಡಿತಗೊಂಡಿದೆ.

ಜಾಗತಿಕ ಖರೀದಿ ಪ್ರಮಾಣದಲ್ಲಿ ಶೇ 2.7ರಷ್ಟು ಪಾಲು ಹೊಂದಿರುವ ಪಾಕಿಸ್ತಾನ, ಆಮದು ಪ್ರಮಾಣದಲ್ಲಿ ವಿಶ್ವದಲ್ಲಿ 11ನೇ ಸ್ಥಾನದಲ್ಲಿದೆ. ಚೀನಾದಿಂದ ಅತಿ ಹೆಚ್ಚು, ಶೇ 70ರಷ್ಟು ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಆಮದು ಮಾಡಿಕೊಳ್ಳುತ್ತಿದೆ. ಇದರೊಂದಿಗೆ ಅಮೆರಿಕದಿಂದ ಶೇ 8.9 ಹಾಗೂ ರಷ್ಯಾದಿಂದ ಶೇ 6ರಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತದೆ.
ಅಂತೆಯೇ ಮೇಕ್ ಇನ್ ಇಂಡಿಯಾ ಎಫೆಕ್ಟ್ ಮತ್ತು ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಬಳಕೆಗೆ ಮುಂದಾಗಿರುವ ಭಾರತ ಸರ್ಕಾರದ ನಡೆ ಕೂಡ ಈ ಪ್ರಮಾಣದಲ್ಲಿ ಅಲ್ಪ ಪ್ರಮಾಣದ ಪ್ರಭಾವ ಬೀರಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








