ಚಳ್ಳಕೆರೆ 
ಕಳೆದ ನೂರಾರು ವರ್ಷಗಳಿಂದ ರಾಷ್ಟ್ರದ ಬಡ ಜನರ, ಅಲ್ಪಸಂಖ್ಯಾತರ, ಶೋಷಿತರ ಮತ್ತು ಹಿಂದುಳಿದ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ ಮಾತ್ರ. ರಾಷ್ಟ್ರದ ಹಿತಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಂಡ ದಿವಂಗತ ಇಂದಿರಾಗಾಂಧಿ, ರಾಜೀವಗಾಂಧಿ ಮತ್ತು ಸಂಜಯ್ ಗಾಂಧಿ ಎಂದಿಗೂ ಆದರ್ಶಪ್ರಾಯರು. ಆದರೆ, ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ ರಾಷ್ಟ್ರದ ಹಿತಕ್ಕಾಗಿ ಯಾರಾದರೂ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ಧಾರೆಯೇ ಎಂದು ಪ್ರಶ್ನಿಸಿದ್ದು, ಚಿತ್ರದುರ್ಗ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ.
ಅವರು, ಬುಧವಾರ ಇಲ್ಲಿನ ಶಾಸಕರ ನಿವಾಸದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕವನ್ನು ಗುರುತು ಪಡಿಸಿದ್ದು, ಎಲ್ಲೆಡೆ ಚುನಾವಣಾ ಕಾರ್ಯ ಬರದಿಂದ ಸಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪಕ್ಷದ ವರಿಷ್ಠರ ಸೂಚನೆಯಂತೆ ಎರಡನೇ ಬಾರಿಗೆ ಈ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶವನ್ನು ನನಗೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಈ ಬಾರಿ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಬೇಕಿದೆ. ಕಾಂಗ್ರೆಸ್ ಪಕ್ಷ ಕಳೆದ ಹಲವಾರು ವರ್ಷಗಳಿಂದ ಎಲ್ಲಾ ಸಮುದಾಯಗಳಿಗೂ ಮತ್ತು ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡುತ್ತಾ ಬಂದಿದೆ.
ಇತ್ತೀಚಿಗೆ ತಾನೇ ಕೆಲವೆಡೆ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷ ತಮ್ಮಗೇನು ಮಾಡಿಲ್ಲವೆಂಬ ಸುಳ್ಳು ಪ್ರಚಾರವನ್ನು ಮಾಡುತ್ತಿದ್ದು, ಇದು ವಾಸ್ತವಾಗಿ ಸತ್ಯಕ್ಕೆ ದೂರವಾದ ಸಂಗತಿ. ವೀರೇಂದ್ರಪಾಟೇಲ್, ಬಿಡಿಜತ್ತಿ, ರಾಜಶೇಖರಯ್ಯ, ಕೆ.ಎಚ್.ಪಾಟೇಲ್, ಶಾಮನೂರು ಶಿವಶಂಕರಪ್ಪ, ಎಚ್.ಕೆ.ಪಾಟೇಲ್, ಎ.ಬಿ.ಪಾಟೇಲ್ ಮುಂತಾದ ಲಿಂಗಾಯತ ಸಮುದಾಯದ ಮುಖಂಡರು ಸಚಿವರಾಗಿ ಆಡಳಿತ ನಡೆಸಿದ್ಧಾರೆ. ಆದರೆ, ಪಕ್ಷದ ಮೇಲೆ ಕೆಲವರು ಸುಳ್ಳು ಆರೋಪ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆಂದು ತಮ್ಮ ಅಸಮದಾನ ವ್ಯಕ್ತ ಪಡಿಸಿದರು.
ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಬಿಜೆಪಿ ಪಕ್ಷದ ಹಲವಾರು ದುರೀಣರು ಮತ್ತು ಅವರ ಅನುಯಾಯಿಗಳು ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಪಕ್ಷದ ಶಕ್ತಿಯನ್ನು ಹೆಚ್ಚಿಸಿದ್ದು, ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವುದು ನಿಶ್ಚಿತವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಇತ್ತೀಚಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷ ರಾಷ್ಟ್ರದ ಕೆಲವೊಂದು ಪ್ರಮುಖ ಘಟನೆಗಳನ್ನು ಮುಂದಿಟ್ಟುಕೊಂಡು ಮತದಾರರನನ್ನು ಭಾವನಾತ್ಮಕವಾಗಿ ನಂಬಿಸಿ ಮತ ಪಡೆಯುವ ಉದ್ದೇಶವನ್ನು ಹೊಂದಿದೆ. ಆದರೆ, ಅವರ ಉದ್ದೇಶ ಈಡೇರುವುದಿಲ್ಲ. ಕಾರಣ ಪ್ರಸ್ತುತ ಇಂದಿನ ಯುವಕರು, ಯುವತಿಯರು ರಾಷ್ಟ್ರದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷದ ಬಡವರ ಪರ ಹೋರಾಟಗಳ ಬಗ್ಗೆ ಹೆಚ್ಚು ತಿಳಿದಿದ್ದಾರೆ. ದೇಶದ ಒಳಿತಿಗಾಗಿ ನೆಹರೂ ಕುಟುಂಬದ ಹಲವಾರು ಸದಸ್ಯರು ಪ್ರಾಣಾ ತ್ಯಾಗ ಮಾಡಬೇಕಾಗಿ ಬಂತು.
ಆದರೆ, ಬಿಜೆಪಿಯವರು ಮಾತ್ರ ಈ ದೇಶಕ್ಕೆ ಕಾಂಗ್ರೆಸ್ ಪಕ್ಷ ಏನೂ ಮಾಡಿಲ್ಲವೆಂಬ ಸುಳ್ಳು ಪ್ರಚಾರವನ್ನೇ ನಿರಂತರವಾಗಿ ಮಾಡುತ್ತಿದ್ದು, ಈ ಬಗ್ಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಜಾಗೃತರಾಗಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಸರ್ಕಾರ ಉತ್ತಮ ಆಡಳಿತವನ್ನು ನೀಡಿದ್ದು, ಲೋಕಸಭಾ ಚುನಾವಣೆಯಲ್ಲೂ ಸಹ ಎರಡೂ ಪಕ್ಷಗಳ ಹೊಂದಾಣಿಕೆ ಇದ್ದು, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ. ಚುನಾವಣಾ ಸಂದರ್ಭದಲ್ಲಿ ಕಾರ್ಯಕರ್ತರು ಅಪಪ್ರಚಾರಗಳಿಗೆ ಕಿವಿಗೊಡದೆ ಪಕ್ಷದ ಗೆಲುವಿನ ನಿಟ್ಟಿನಲ್ಲಿ ಮಾತ್ರ ಸಕರಾತ್ಮಕವಾಗಿ ಕಾರ್ಯನಿರ್ವಹಿಸಬೇಕಿದೆ. ಕೇಂದ್ರದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರ ಪಡೆಯಲಿರುವ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿಯನ್ನಾಗಿಸುವ ಪಕ್ಷದ ಕನಸನ್ನು ನನಸು ಮಾಡಲು ಎಲ್ಲರೂ ಶ್ರಮಿಸಬೇಕೆಂದು ತಿಳಿಸಿದರು.
ಪ್ರಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್.ಎಚ್.ಸೈಯದ್, ಎಲ್ಲೆಡೆ ಭಾರತೀಯ ಜನತಾ ಪಕ್ಷದ ಹವಾ ಇದೇ ಎಂದು ಜನರು ಮಾತನಾಡಿಕೊಳ್ಳುವ ಸಂದರ್ಭದಲ್ಲಿ ಕ್ಷೇತ್ರದ ನೂರಾರು ಸಂಖ್ಯೆಯ ಬಿಜೆಪಿ ಅಭಿಮಾನಿಗಳು ಹಾಗೂ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ಧಾರೆ. ಈ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲಲ್ಲು ಸಾಧ್ಯವಿಲ್ಲ. ಕಾರಣ, ಚಿತ್ರದುರ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, ಕಾರ್ಯಕರ್ತರು ದೃತಿಗೆಡದೆ ಕಾರ್ಯನಿರ್ವಹಿಸಬೇಕೆಂದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಟಿ.ಪ್ರಭುದೇವ್, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್ಮೂರ್ತಿ, ಮಾಜಿ ಸದಸ್ಯ ರವಿಕುಮಾರ್, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್ಗೌಡ, ಎಂ.ಜೆ.ರಾಘವೇಂದ್ರ, ಎಂ.ಸಾವಿತ್ರಿ, ವೈ.ಪ್ರಕಾಶ್, ಜೈತುಂಬಿ, ವಿರೂಪಾಕ್ಷ, ಟಿ.ಚಳ್ಳಕೆರೆಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜಿ.ವೀರೇಶ್, ಟಿ.ಗಿರಿಯಪ್ಪ, ಎಚ್.ಆಂಜನೇಯ, ತಿಮ್ಮಣ್ಣ, ಎಚ್.ಡಿ.ಭೂತಲಿಂಗಪ್ಪ, ಗೀತಾಬಾಯಿ, ಕಿರಣ್ಶಂಕರ್, ಶಿವಕುಮಾರಸ್ವಾಮಿ, ಪರೀದ್ಖಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಅನ್ವರ್ ಮಾಸ್ಟರ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








