ಬಿಜೆಪಿ ಅಚಲ, ಮೈತ್ರಿಗೆ ಇನ್ನೂ ಕಗ್ಗಂಟು

ದಾವಣಗೆರೆ

       ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಷಯದಲ್ಲಿ ಬಿಜೆಪಿ ಅಚಲವಾಗಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಅಭ್ಯರ್ಥಿಯ ವಿಚಾರ ಕಗ್ಗಂಟಾಗಿಯೇ ಮುಂದುವರೆದಿದೆ.

ಕಾರ್ಯಕರ್ತರಲ್ಲಿ ಗೊಂದಲ:

         ಹೌದು… ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಮರಳಿ ಆಯ್ಕೆ ಬಯಸಿ ಸ್ಪರ್ಧಿಸಲು ಎಲ್ಲ ತಯಾರಿ ನಡೆಸಿದ್ದು, ಭಾಜಪ ಕಾರ್ಯಕರ್ತರು ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರ ರೂಪಿಸಲು ಮುಂದಾಗಿದ್ದಾರೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಯಾರಾಗಬಹುದೆಂಬುದು ಇನ್ನೂ ಸ್ಪಷ್ಟವಾಗದ ಕಾರಣ ಗೊಂದಲದಲ್ಲಿಯೇ ಇದ್ದಾರೆ.

ಉತ್ಸಾಹ ತೋರದ ಎಸ್ಸೆಸ್ಸೆಂ:

        ಮೈತ್ರಿ ಒಪ್ಪಂದದ ಪ್ರಕಾರ ದಾವಣಗೆರೆ ಕ್ಷೇತ್ರವನ್ನು ಜೆಡಿಎಸ್ ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದೆ. ಆದರೆ, ಈ ವರೆಗೂ ಕಾಂಗ್ರೆಸ್ ಅಭ್ಯರ್ಥಿ ಎಂಬುದಾಗಿಯೇ ಬಿಂಬಿಸಿಕೊಂಡು ಬಂದಿದ್ದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರವರು 2004, 2009 ಹಾಗೂ 2014ರ ಲೋಕಸಭಾ ಚುನಾವಣೆಗಳಲ್ಲಿ ಪರಾಭವಗೊಂಡಿರುವುದು ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಅನಿರೀಕ್ಷಿತ ಫಲಿತಾಂಶದಿಂದ ಕಂಗೆಟ್ಟು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಉತ್ಸಾಹ ತೋರುತ್ತಿಲ್ಲ. ಅಲ್ಲದೆ, ಪಕ್ಷದ ಕಾರ್ಯಕರ್ತರ ಸಭೆ, ಕ್ಷೇತ್ರದ ಭೇಟಿ ಇವುಗಳಿಂದ ದೂರ ಉಳಿದುಕೊಂಡಿದ್ದಾರೆ.

ದಿನಕ್ಕೊಬ್ಬರ ಹೆಸರು ಮುನ್ನೆಲೆಗೆ:

      ಮಲ್ಲಿಕಾರ್ಜುನ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇನ್ನೂ ನಿರ್ಧರಿಸದ ಕಾರಣ ಅವರು ಅಭ್ಯರ್ಥಿ ಆಗಬಹುದೇ, ಇವರು ಅಭ್ಯರ್ಥಿ ಆಗಬಹುದೇ ಎಂಬ ಕುರಿತು ವದಂತಿ, ಊಹಾಪೋಹಗಳು ಜಿಲ್ಲಾದ್ಯಂತ ಹರದಾಡುತ್ತಿವೆ. ಮಲ್ಲಿಕಾರ್ಜುನ್‍ರವರ ಬದಲು ಅವರ ತಂದೆಯಾಗಿರುವ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಕಣ್ಣಕ್ಕಿಳಿಯಲಿದ್ದಾರಂತೆ, ಇವರಿಬ್ಬರೂ ಚುನಾವಣಗೆ ಆಸಕ್ತಿ ತೋರದಿದ್ದರೆ, ಅಹಿಂದ ನಾಯಕರಲ್ಲೊಬ್ಬರಾದ ಹೆಚ್.ಎಂ.ರೇವಣ್ಣನವರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈಗ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನರವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರುಗಳು ಸಹ ಮುನ್ನೆಲೆಗೆ ಬಂದಿವೆ. ಆದ್ದರಿಂದ ಕಾಂಗ್ರೆಸ್ ಕಾರ್ಯತರ್ಕರಲ್ಲಿ ತಮ್ಮ ಪಕ್ಷದ ಅಂತಿಮ ಅಭ್ಯರ್ಥಿ ಯಾರಾಗಬಹುದೆಂಬ ಗೊಂದಲ ಮನೆ ಮಾಡಿದೆ.

ಜೆಡಿಎಸ್ ಉರಳಿಸಿದ ದಾಳ:

       ಇನ್ನೂ ಮೈತ್ರಿ ಪಕ್ಷದ ಭಾಗವಾಗಿರುವ ಜೆಡಿಎಸ್ ಮುಖಂಡರು ಸಭೆ ಸೇರಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕರು ಅಷ್ಟು ಆಸಕ್ತಿ ವಹಿಸಿಲ್ಲ. ಆದ್ದರಿಂದ ದಾವಣಗೆರೆ ಕ್ಷೇತ್ರವನ್ನು ಜೆಡಿಎಸ್‍ಗೆ ಉಳಿಸಿಕೊಂಡು, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕೆಂಬ ದಾಳ ಉರುಳಿಸಿದ್ದಾರೆ. ಈ ಮಧ್ಯೆ ಜೆಡಿಎಸ್ ಸಮಾನ ಮನಸ್ಕರು ಸಭೆ ಸೇರಿ ಹಿರಿಯ ವಕೀಲ, ಪ್ರಗತಿಪರ ಹೋರಾಟಗಾರ ಅನೀಸ್ ಪಾಷಾ ಅವರಿಗೆ ಜೆಡಿಎಸ್ ಟಿಕೇಟ್ ನೀಡಬೇಕೆಂಬುದಾಗಿ ಒತ್ತಾಯಿಸಿದಲ್ಲದೇ, ನಿಯೋಗವೊಂದು ಬೆಂಗಳೂರಿಗೆ ತೆರಳಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿಯೂ ಮನವಿ ಸಲ್ಲಿಸಿದೆ.

ನಿರುತ್ಸಾಹ:

         ಈ ಎಲ್ಲಾ ಕಾರಣಗಳಿಂದಾಗಿ ಮೈತ್ರಿ ಪಕ್ಷಗಳಾಗಿರುವ ಕಾಂಗ್ರೆಸ್-ಜೆಡಿಎಸ್‍ನಲ್ಲಿ ಅಭ್ಯರ್ಥಿ ಯಾರೆಂಬ ಕಗ್ಗಂಟು ಮುಂದುವರೆದಿದೆ. ಹೀಗಾಗಿ ಈ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ನಿರುತ್ಸಾಹವೂ ಮನೆ ಮಾಡಿದ್ದು, ಯಾರು ಚುನಾವಣೆಗೆ ನಿಂತರೂ ನಮಗೇನಂತೇ ಎಂಬ ನಿರುತ್ಸಾಹ ಭಾವನೆ ಮನೆ ಮಾಡಿದೆ.

ಬಿಜೆಪಿ ಅಚಲ:

       ಇನ್ನೂ ಪ್ರಸ್ತುತ ದಾವಣಗೆರೆ ಲೋಕಸಭಾ ಕ್ಷೇತ್ರವು ಬಿಜೆಪಿ ವಶದಲ್ಲಿದ್ದು, ಸತತ ಮೂರು ಬಾರಿ ಆಯ್ಕೆಯಾಗಿರುವ ಸಂಸದ ಜಿ.ಎಂ.ಸಿದ್ದೇಶ್ವರ್ ಅವರೇ ನಾಲ್ಕನೇಯ ಬಾರಿಯೂ ಮರು ಆಯ್ಕೆ ಬಯಸಿ, ಬಿಜೆಪಿಯಿಂದ ಕಣಕ್ಕಿಳಿಯಲು ಎಲ್ಲಾ ರೀತಿಯ ಸಿದ್ಧತೆ ನಡೆಸಿಕೊಂಡಿದ್ದು, ಇವರೇ ಅಂತಿಮ ಆಗುವ ಮುನ್ಸೂಚನೆಗಳಿವೆ. ಹೀಗಾಗಿ ಸಂಸದ ಸಿದ್ದೇಶ್ವರ್ ಹಾಗೂ ಬಿಜೆಪಿ ತಂಡ ಭಾರೀ ಸಿದ್ಧತೆಯಲ್ಲಿ ತೊಡಗಿದ್ದು, ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡುತ್ತಾ, ಕೇಂದ್ರ ಬಿಜೆಪಿ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯದಲ್ಲಿ ಮಗ್ನರಾಗಿದ್ದು, ಶತಾಯಗತಾಯ ಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link