ಅಂತರ್‍ರಾಜ್ಯ ಗಡಿ ಬಳಿ 11 ಚೆಕ್‍ಪೋಸ್ಟ್‍ಗಳ ಸ್ಥಾಪನೆ : ಡಾ.ವಿ.ರಾಮ್ ಪ್ರಸಾತ್

ಬಳ್ಳಾರಿ

       ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಸುವ್ಯವಸ್ಥಿತವಾಗಿ ಜರುಗಿಸುವ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಈಗಾಗಲೇ ಕೈಗೊಂಡಿದ್ದು, ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕರ್ನೂಲ್ ಮತ್ತು ಅನಂತಪುರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ 11 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ ಮತ್ತು ಸಂಚರಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.

       ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಮತ್ತು ಆಂಧ್ರಪ್ರದೇಶದ ಅಂತರ್‍ರಾಜ್ಯ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಹಾಗೂ ನಮ್ಮದೇ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರವು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಜಿಲ್ಲೆಯಲ್ಲಿ ಒಟ್ಟು 10 ತಾಲೂಕುಗಳಿದ್ದು,ಅದರಲ್ಲಿ ಬಳ್ಳಾರಿ ಮತ್ತು ಸಂಡೂರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ಮತ್ತು ಸಿರಗುಪ್ಪ ತಾಲೂಕು ಆಂಧ್ರದ ಕರ್ನೂಲ್ ಜಿಲ್ಲೆಗೆ ಗಡಿಯನ್ನು ಹಂಚಿಕೊಂಡಿದೆ ಎಂದರು.

        ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 36 ಚೆಕ್‍ಪೋಸ್ಟ್‍ಗಳನ್ನು ಈಗಾಗಲೇ ಸ್ಥಾಪಿಸಲಾಗಿದ್ದು,ಅದರಲ್ಲಿ ಜಿಲ್ಲಾ ಹೆದ್ದಾರಿಗಳಲ್ಲಿ 25 ಚೆಕ್‍ಪೋಸ್ಟ್‍ಗಳು ಮತ್ತು 11 ಅಂತರ್‍ರಾಜ್ಯ ಸಂಪರ್ಕ ಕಲ್ಪಿಸುವ ಗಡಿರಸ್ತೆಗಳಲ್ಲಿ ಚೆಕ್‍ಪೋಸ್ಟ್‍ಗಳು ಸ್ಥಾಪಿಸಿ ಮದ್ಯ,ಹಣ ಸೇರಿದಂತೆ ಇನ್ನೀತರ ಸಾಗಾಣಿಕೆ ವಸ್ತುಗಳ ಮೇಲೆ ಕಣ್ಣಿಡಲಾಗಿದೆ ಎಂದು ಅವರು ವಿವರಿಸಿದರು.

       ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಇಡೀ ರಾಜ್ಯದಲ್ಲಿಯೇ ಅತ್ಯಂತ ಗಮನಸೆಳೆಯುವಂತದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ಯಾವುದೇ ರೀತಿಯಲ್ಲಿ ತೊಂದರೆಗಳಾಗದಂತೆ ನಡೆಸುವ ನಿಟ್ಟಿನಲ್ಲಿ ಬಳ್ಳಾರಿ ಜತೆಗೆ ಗಡಿ ಹಂಚಿಕೊಂಡಿರುವ ತಮ್ಮ ಸಹಕಾರ ಅಗತ್ಯವಾಗಿದ್ದು, ನೀಡುವಂತೆ ಅನಂತಪುರ ಮತ್ತು ಕರ್ನೂಲ್ ಕಂದಾಯ ,ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳಲ್ಲಿ ಅವರು ಮನವಿ ಮಾಡಿದರು.

        ಮದ್ಯ ಮತ್ತು ಹಣ ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುವ ಸಾಧ್ಯತೆ ಇದ್ದು, ತಾವು ಕಡಿವಾಣ ಹಾಕುವ ನಿಟ್ಟಿನಲ್ಲಿ ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಅವಶ್ಯವಿರುವ ಕಡೆ ಚೆಕ್‍ಪೋಸ್ಟ್ ಹಾಗೂ ಇನ್ನೀತರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಾ.ವಿ.ರಾಮ್ ಪ್ರಸಾತ್ ಅವರು ಸೂಚನೆ ನೀಡಿದರು.

           ಗಡಿಯಲ್ಲಿ ಮದ್ಯ ಮಾರಾಟದಲ್ಲಿ ಹೆಚ್ಚಳ ಮತ್ತು ಸಾಗಾಣಿಕೆ ಪ್ರಮಾಣದಲ್ಲಿ ಹೆಚ್ಚಳದ ಕುರಿತು ಅನಂತಪುರ,ಕರ್ನೂಲ್ ಮತ್ತು ಬಳ್ಳಾರಿ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳು ಪ್ರತಿನಿತ್ಯ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಮತ್ತು ಇದಕ್ಕೆ ತಕ್ಕ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದ ಅವರು ಪ್ರತಿನಿತ್ಯ ಮಾಹಿತಿ ವಿನಿಮಯ ಮಾಡಿಕೊಳ್ಳುವ ನಿಟ್ಟಿನಲ್ಲಿ ವಾಟ್ಸ್‍ಆಪ್ ಗ್ರೂಫ್ ರಚಿಸುವಂತೆ ಅವರು ಸೂಚಿಸಿದರು.

          ಬಳ್ಳಾರಿ ಜಿಲ್ಲೆಯು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಆಂಧ್ರಪ್ರದೇಶದೊಂದಿಗೆ ಬಹಳಷ್ಟು ಸಂಬಂಧ ಹೊಂದಿದ್ದು, ಬಳ್ಳಾರಿ ಲೋಕಸಭಾ ಉಪಚುನಾವಣೆ ಸೂಸುತ್ರವಾಗಿ ಜರುಗಿಸುವ ನಿಟ್ಟಿನಲ್ಲಿ ಮಾಹಿತಿ ವಿನಿಮಯ, ಚೆಕ್‍ಪೋಸ್ಟ್ ಆರಂಭ, ಚಿತ್ರ ಸಮೇತ ರೌಡಿಶೀಟರ್‍ಗಳ ವಿವರ ಸೇರಿದಂತೆ ಇನ್ನೀತರ ಮಾಹಿತಿಗಳನ್ನು ಬಳ್ಳಾರಿ ಜಿಲ್ಲೆಯ ಅಧಿಕಾರಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಸಭೆಗೆ ಆಗಮಿಸಿದ್ದ ಅನಂತಪುರ,ಕರ್ನೂಲ್ ಜಿಲ್ಲೆಯ ಅಬಕಾರಿ,ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹೇಳಿದರು.

          ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಕರ್ನೂಲ್,ಅನಂತಪುರ ಮತ್ತು ಬಳ್ಳಾರಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆಗಳ ಅಧಿಕಾರಿಗಳು ಪ್ರತ್ಯೇಕ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿದರೇ ಅನುಕೂಲವಾಗಲಿದ್ದು, ಇದರಿಂದ ಕ್ಷೀಪ್ರ ಮಾಹಿತಿ ವಿನಿಮಯ ಮಾಡಿಕೊಳ್ಳಲಿಕ್ಕೆ ಮತ್ತು ಅಗತ್ಯಕ್ರಮಕೈಗೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದು ವಿವರಿಸಿದ ಬಳ್ಳಾರಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಕೂಡಲೇ ರಚಿಸಿ ಎಂದರು.

          ಅಂತರ್‍ರಾಜ್ಯ ಗಡಿ ಬಳಿ 11 ಚೆಕ್‍ಪೋಸ್ಟ್‍ಗಳಿವು: ಸಿರಗುಪ್ಪ ತಾಲೂಕಿನಲ್ಲಿ ಕೆ.ಬೆಳಗಲ್ಲು, ಇಟಗಿಹಾಳ್, ವತ್ತುಮುರಣಿ, ಮಾಟಸೂಗುರ. ಬಳ್ಳಾರಿ ತಾಲೂಕಿನ ಹಲಕುಂದಿ, ಎತ್ತಿನಬೂದಿಹಾಳ್, ರೂಪನಗುಡಿ, ,ಜೋಳದರಾಶಿ,ಕರೆಕಲ್ಲು, ಸಿಂಧುವಾಳ. ಸಂಡೂರು ತಾಲೂಕಿನ ಎಂ.ಗಂಗಲಾಪುರ(ದಿಕ್ಕಲದಿನ್ನಿ)ದಲ್ಲಿ ಚೆಕ್‍ಪೋಸ್ಟ್‍ಗಳು ಸ್ಥಾಪಿಸಿ ಆಂಧ್ರದ ಕಡೆಯಿಂದ ಬರುವ ವಾಹನಗಳ ಮೇಲೆ ಹದ್ದಿನಕಣ್ಣೀಡಲಾಗಿದೆ ಎಂದು ಡಿಸಿ ರಾಮ್ ಪ್ರಸಾತ್ ವಿವರಿಸಿದರು.

           ಆಂಧ್ರಪ್ರದೇಶದೊಂದಿಗೆ 72 ನಮ್ಮ ಜಿಲ್ಲೆಯ ಹಳ್ಳಿಗಳು ಗಡಿ ಹಂಚಿಕೊಂಡಿದ್ದು, ಇಲ್ಲೆಲ್ಲಾ ನಾವು ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡಿದ್ದೇವೆ. ತಮ್ಮ ಸಹಕಾರವು ಅಗತ್ಯವಾಗಿದೆ ಎಂದು ಕರ್ನೂಲ್ ಮತ್ತು ಅನಂತಪುರ ಜಿಲ್ಲೆಯ ಅಧಿಕಾರಿಗಳಿಗೆ ಹೇಳಿದರು.

ರೌಡಿಶೀಟರ್‍ಗಳ ಮಾಹಿತಿ ವಿನಿಮಯ:

          ಜಿಲ್ಲೆಯ ಗಡಿಹಳ್ಳಿಗಳ ಮೂಲಕ ಆಂಧ್ರಪ್ರದೇಶದ ರೌಡಿಶೀಟರ್‍ಗಳು ನುಸುಳಿ ಇಲ್ಲಿನ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಹಾಗೂ ಶಾಂತಿಯುತ ಚುನಾವಣೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದ ಎಸ್ಪಿ ಅರುಣ ರಂಗರಾಜನ್ ಅವರು, ಕೂಡಲೇ ತಾವು ತಮ್ಮ ಜಿಲ್ಲೆಗಳ ರೌಡಿಶೀಟರ್‍ಗಳ ಮಾಹಿತಿಯನ್ನು ಚಿತ್ರಸಮೇತ ವಿನಿಮಯ ಮಾಡಿಕೊಳ್ಳಬೇಕು ಹಾಗೂ ನಮ್ಮ ಜಿಲ್ಲೆಯ ಗಡಿ ಬಳಿಯ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್ ಪಟ್ಟಿಯಲ್ಲಿರುವವರ ಹೆಸರನ್ನು ಆಂಧ್ರದ ಅಧಿಕಾರಿಗಳೊಂದಿಗೆ ವಿನಿಮಯ ಮಾಡಿಕೊಳ್ಳಿ ಎಂದು ಸೂಚಿಸಿದರು.

           ತಮ್ಮ ರೌಡಿಶೀಟರ್‍ಗಳ ಮಾಹಿತಿಯನ್ನು ಚೆಕ್‍ಪೋಸ್ಟ್‍ಗಳಲ್ಲಿನ ನಮ್ಮ ಟೀಂಗಳಿಗೆ ನೀಡಿ ಅವರು ಬರದಂತೆ ಹದ್ದಿನಕಣ್ಣೀಡಲಾಗುವುದು ಎಂದರು. ಇದಕ್ಕೆ ಉತ್ತರಿಸಿದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳ ಅಧಿಕಾರಿಗಳು ಕೂಡಲೇ ತಮಗೆ ಒದಗಿಸಲಾಗುವುದು ಎಂದರು.

         ಮತದಾನದ ದಿನ ಮತ್ತು ಮತಎಣಿಕೆ ದಿನ ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಳಿಯ ಗಡಿಗಳಲ್ಲಿರುವ ಮದ್ಯದ ಅಂಗಡಿಗಳನ್ನು ಬಂದ್ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಿ ಮತ್ತು ಮದ್ಯದ ಅಂಗಡಿಗಳ ವಿವರ ಕೂಡ ಸಲ್ಲಿಸುವಂತೆ ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಬಳ್ಳಾರಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ,ಅಪರ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಬಳ್ಳಾರಿ ಅಬಕಾರಿ ಉಪ ಅಧೀಕ್ಷಕ ವಿನೋದ ಡಾಂಗೆ, ಬಳ್ಳಾರಿ, ಅನಂತಪುರ,ಕರ್ನೂಲ್ ಜಿಲ್ಲೆಗಳ ಪೊಲೀಸ್,ಕಂದಾಯ,ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link