ಬ್ಯಾಡಗಿ:
ಹಣ ಬಿಡಿಸಿಕೊಡು ಎಂದು ಕೇಳಿದ ಮಹಿಳೆಯ, ಎಟಿಎಂ ಕಾರ್ಡನ್ನೇ ಬದಲಾಯಿಸಿ ಸುಮಾರು 1 ಲಕ್ಷ ರೂ.ಹಣವನ್ನು ದೋಚಿಕೊಂಡ ಘಟನೆ ಪಟ್ಟಣದ ಮುಖ್ಯರಸ್ತೆಯಲ್ಲಿ ಎಸ್ಬಿಐ ಎಟಿಎಂನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಎಟಿಎಂ ನಿಂದ ಹಣ ಪಡೆಯಲು ಹೋದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವುದೂ ಸೇರಿದಂತೆ ಅದೆಷ್ಟೋ ಸೆಕ್ಯೂರಿಟಿ ಗಾರ್ಡಗಳನ್ನು ಕೊಲೆ ಮಾಡಿ ಹಣ ದೋಚಿದ ಪ್ರಕರಣಗಳನ್ನು ಕಂಡಿದ್ದೇವೆ ಕೇಳಿದ್ದೇವೆ, ಆದರೆ ಇಲ್ಲೊಬ್ಬ ನಯ ವಂಚಕ ಕಾರ್ಡ ಹಿಡಿದುಕೊಂಡು ಎಟಿಎಂಗಳಿಗೆ ಅನಕ್ಷರಸ್ಥರನ್ನೇ ಗುರ್ತಿಸಿ ಸುಲಭವಾಗಿ ಹಣ ದೊಚುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ.
ಆಗಿದ್ದೇನು..?:
ಪಟ್ಟಣದ ಹೊಂಡದ ಓಣಿ ನಿವಾಸಿ ಸುನಂದಾ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ, ವೇತನ ಪಡೆಯಲೆಂದೇ ಇಲ್ಲಿನ ಎಸ್ಬಿಐ ಶಾಖೆಯಲ್ಲಿ ಉಳಿತಾಯ ಖಾತೆ (ಎಸ್.ಬಿ. ಎ/ಸಿ) ಅಕೌಂಟ್ ಹೊಂದಿದ್ದು ಇದಕ್ಕೊಂದು ಎಟಿಎಂ ಕಾರ್ಡ ಕೂಡ ಲಭಿಸಿತ್ತು, ಆದರೆ ಕೇವಲ ನಾಲ್ಕನೇ ತರಗತಿ ಓದಿರುವ ಸುನಂದಾಳಿಗೆ ಅಷ್ಟೊಂದು ಇಂಗ್ಲೀಷ್ ಜ್ಞಾನ ಹೊಂದಿಲ್ಲವಾದ್ದರಿಂದ ಪ್ರತಿ ಬಾರಿ ಹಣ ತೆಗೆಸುವಾಗಲೂ ಬೆರೋಬ್ಬರ ಬಳಿ ಎಟಿಎಂ ಕೊಟ್ಟು ಹಣ ಪಡೆದು ಕೊಳ್ಳುತ್ತಿದ್ದಳು.
ಬೇರೆ ಎಟಿಎಂ ಕಾರ್ಡ ಕೈಗಿಟ್ಟ ಭೂಪ:
ಎಂದಿನಂತೆ ಕಳೆದ ಮಾ.11 ರಂದು ಹಣ ತೆಗೆಸಲೆಂದೇ ಸುನಂದಾ ಎಟಿಎಂ ಬಂದಿದ್ದಾಳೆ, ಸಹಜವಾಗಿ ಹಣ ಬಿಡಿಸಿಕೊಡುವಂತೆ ಕೇಳಿದಾಗ 4 ಸಾವಿರ ರೂ.ಗಳನ್ನು ಬಿಡಿಸಿಕೊಟ್ಟ ನಯವಂಚಕ ಬಳಿಕ ಅದರಲ್ಲಿ 1 ಲಕ್ಷಕ್ಕೂ ಅಧಿಕ ಹಣವಿರುವ ಬಗ್ಗೆ ಖಾತರಿಪಡಿಸಿಕೊಂಡು, ಆಕೆಗೆ ಬೇರೊಬ್ಬರ ಎಟಿಎಂ ಕಾರ್ಡ ಕೊಟ್ಟು ಅದನ್ನು ಇಟ್ಟುಕೊಳ್ಳುವಂತೆ ತಿಳಿಸಿದ್ದಾನೆ, ಆತ ಕೊಟ್ಟಿರುವ ಎಟಿಎಂ ಕಾರ್ಡ ತನ್ನದೇ ಎಂದು ಭಾವಿಸಿಕೊಂಡ ಸುನಂದಾ ಹಣ ಪಡೆದು ಮನೆಗೆ ತೆರಳಿದ್ದಾಳೆ.
ಖಾತೆಯಲ್ಲಿದ್ದ ಹಣವೆಲ್ಲಾ ಖಾಲಿ:
ಮಾ.15 ರಂದು ಎಟಿಎಂನಿಂದ ಹಣ ಬರುತ್ತಿಲ್ಲ ಎಂದು ವ್ಯವಸ್ಥಾಪಕರ ಬಳಿ ದೂರು ಸಲ್ಲಿಸಿದಾಗ, ಆಕೆಯ ಖಾತೆಯಲ್ಲಿ ಕೇವಲ 45 ರೂ. ಮಾತ್ರ ಉಳಿದಿರುವುದಾಗಿ ತಿಳಿಸಿದ್ದಾರೆ, ಇದರಿಂದ ಕಂಗಾಲಾದ ಸುನಂದಾ ನನ್ನ ಖಾತೆಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಹಣವಿರಬೇಕು ಸರ್ ಎನಾಯಿತು..? ನೋಡಿ ಎಂದು ಅಳುತ್ತಾ ಮನವಿ ಮಾಡಿಕೊಂಡಿದ್ದಾಳೆ..
ಬಯಲಾಯಿತು ವಂಚಕನ ಕೈಚಳಕ:
ಸುನಂದಾಳ ಪಾಸ್ ಬುಕ್ ಎಂಟ್ರಿ ಮಾಡಿ ನೋಡಿದಾಗ ವಂಚಕನ ಕೈಚಳಕ ಬಯಲಾಗಿದೆ, ರಾಜ್ಯದ ಬಳ್ಳಾರಿ ಜಿಲ್ಲೆಯ ವಿವಿಧೆಡೆಗಳಲ್ಲಿ ಎಟಿಎಂಗಳಿಂದ ಹಣ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸದರಿ ಎಟಿಎಂ ಬಳಸಿ ಬಳ್ಳಾರಿಯ ನಗರದ ಖಜಾನಾ ಜ್ಯೂವೆಲರಿ ಶಾಪ್ನಲ್ಲಿ ರೂ.16800 ಮೊತ್ತದ ಬಂಗಾರದ ಆಭರಣಗಳನ್ನು ಖರೀದಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ, ಇಂತಹದ್ದೇ ಕೆಲಸ ಮಾಡುವಂತಹ ವ್ಯವಸ್ಥಿತ ಜಾಲವೊಂದು ಪಟ್ಟಣದಲ್ಲಿ ಬೀಡು ಬಿಟ್ಟಿರಬಹುದೆಂದು ಶಂಕೆ ವ್ಯಕ್ತಪಡಿಸಿರುವ ಪೋಲಿಸರು ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದಾರೆ..
![](https://prajapragathi.com/wp-content/uploads/2019/03/15BYD1-1.gif)