ಹರಿಹರ:
ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳವರ ಸಭೆ, ಸಮಾರಂಬಗಳಿಗೆ ಅನುಮತಿ ನೀಡಲು ತಾಲೂಕು ಕಚೇರಿಯಲ್ಲಿ ಸುವಿಧಾ ಸೆಲ್ ತಂತ್ರಾಂಶದಡಿ ಏಕಗವಾಕ್ಷಿ (ಸಿಂಗಲ್ ವಿಂಡೋ) ಸೌಲಭ್ಯ ರೂಪಿಸಲಾಗಿದೆ ಎಂದು ತಹಸೀಲ್ದಾರ್ ಯು.ನಾಗರಾಜ್ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಕಚೇರಿಯ ಆಹಾರ ಶಾಖೆ ಕೊಠಡಿಯಲ್ಲಿ ಏಕಗವಾಕ್ಷಿ ಸೌಲಭ್ಯ ಇದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಂತರ ನಡೆಯುವ ಸಭೆ, ಕಾರ್ಯಕ್ರಮ ಆಯೋಜಿಸುವ ರಾಜಕೀಯ ಪಕ್ಷದವರು 24 ಗಂಟೆ ಮುಂಚೆ ಸೂಕ್ತ ಅರ್ಜಿ, ದಾಖಲೆಗಳನ್ನು ನೀಡಿ ಅನುಮತಿ ಪಡೆಯಬಹುದು. ಇದರಿಂದ ಅವರು ಹಲವು ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ ಎಂದರು.
205541 ಮತದಾರರು: 103181 ಪುರುಷ, 102344 ಮಹಿಳಾ, 16 ಇತರೆಯವರು ಸೇರಿ ತಾಲೂಕಿನಲ್ಲಿ 205541 ಮತದಾರರಿದ್ದಾರೆ. ಈ ಪೈಕಿ ಸೇನೆ, ಅರೆ ಸೇನಾಪಡೆಯಲ್ಲಿರುವÀÀ 68 ಸೇವಾ ಮತದಾರರಿದ್ದಾರೆ. ಇಟಿಪಿಬಿಎಸ್ (ಎಲೆಕ್ಟ್ರಾನಿಕ್ ಪೊಲಿಂಗ್ ಬ್ಯಾಲೆಟ್ ಸರ್ವಿಸ್) ಮೂಲಕ ಅವರು ಅವರಿರುವ ಜಾಗದಿಂದಲೆ ಕ್ಷಣಾರ್ಧದಲ್ಲಿ ಮತದಾನ ಮಾಡಬಹುದು. ಹಿಂದಿನ ಪೋಸ್ಟಲ್ ಮತದಾನದ ಬದಲು ಈ ಸೌಲಭ್ಯ ಚುನಾವಣಾ ಆಯೋಗ ಈ ಬಾರಿ ಜಾರಿ ಮಾಡಿದೆ.
ತಾಲೂಕಿನಲ್ಲಿ 240 ಮತಗಟ್ಟೆಗಳಿವೆ. ಈ ಪೈಕಿ 85 ಮತಗಟ್ಟೆಗಳನ್ನು ಕ್ಲಿಷ್ಟಕರ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಕ್ಲಿಷ್ಟಕರ ಮತಗಟ್ಟೆಗಳಿಗೆ ಸೂಕ್ಷ್ಮ ವೀಕ್ಷಕ ಅಥವಾ ವೀಡಿಯೋ ಗ್ರಾಫರ್ ಅಥವಾ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗುತ್ತದೆ. ಕುಡಿಯುವ ನೀರು, ಶೌಚಾಲಯ, ಗಾಳಿ, ಬೆಳಕು, ಫ್ಯಾನ್ ವ್ಯವಸ್ಥೆ ಮತಗಟ್ಟೆಯಲ್ಲಿರುತ್ತವೆ.
ಮಾ.20ರವರೆಗೆ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ. ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೋ ಇಲ್ಲವೂ ಎಂಬುದನ್ನು ಮತದಾರರು ಡಬ್ಲ್ಯುಡಬ್ಲ್ಯುಡಬ್ಲ್ಯು ಡಾಟ್ ಸಿಇಒ ಕರ್ನಾಟಕ ಡಾಟ್‍ಕೆಎಆರ್‍ಡಾಟ್‍ಎನ್‍ಐಸಿಡಾಟ್‍ಇನ್ ವೆಬ್‍ಸೈಟಿನಲ್ಲಿ ಮಾಹಿತಿ ಪಡೆಯಬಹುದೆಂದರು.
ಐದು ಚೆಕ್ ಪೋಸ್ಟ್: ನಗರದ ರಾಘವೇಂದ್ರ ಮಠದ ಸಮೀಪ, ಕುರುಬರಹಳ್ಳಿ, ಹಲಸಬಾಳು, ಕೊಮಾರನಹಳ್ಳಿ ಮತ್ತು ನಂದಿಗುಡಿಯಲ್ಲಿ ತಲಾ ಒಂದು ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ. 26 ಜನರನ್ನು ಸೆಕ್ಟರ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಒಂದು ಸೆಕ್ಟರ್‍ಗೆ 10 ಮತಗಟ್ಟೆಗಳು ಒಳಪಡುತ್ತವೆ. 6 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ. ಮದ್ಯ, ಹಣ, ಗೃಹೋಪಯೋಗಿ ವಸ್ತುಗಳ ಸಾಗಣೆ ಮೇಲೆ ನಿಗಾ ಇಡಲಾಗಿದೆ ಎಂದರು.ಸಿಪಿಐ ಐ.ಎಸ್.ಗುರುನಾಥ್, ಸಹಾಯಕ ಚುನಾವಣಾಧಿಕಾರಿ ರಾಮಾಂಜನೇಯ, ಚುನಾವಣಾ ಶಿರಸ್ತೆದಾರ್ ಬದರೀನಾಥ್, ಉಮೇಶ್ ಜಿ.ಬಿ. ಇತರರಿದ್ದರು