ಹುಳಿಯಾರು
ಕನ್ನಡ ಕಾವ್ಯ ಕ್ಷೇತ್ರದಲ್ಲಿ ಅತ್ಯುತ್ತಮವಾದ ಕವಿತೆಗಳು ಹೊರಹೊಮ್ಮುತ್ತಿವೆ. ಆದರೆ ಕೇಳುಗರ ಕೊರತೆ ಇದೆ ಎಂದು ಸಾಹಿತಿ ಬೆಳಗುಲಿ ಶಶಿಭೂಷಣ್ ಬೇಸರ ವ್ಯಕ್ತ ಪಡಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಲೆಗಾರನೊಬ್ಬ ಸೊಗಸಾದ ಹೂಮಾಲೆ ಕಟ್ಟಬಹುದು. ಆದರೆ ಮಾಲೆ ಅಲಂಕರಿಸುವವರಿಲ್ಲದಿದ್ದರೆ ಮಾಲೆಗಾರದ ಶ್ರಮ ವ್ಯರ್ಥ. ಹಾಗಾಗಿ ಕವಿಗಳ ಶ್ರಮ ಸಾರ್ಥಕತೆ ಪಡೆಯಬೇಕೆಂದಿದ್ದರೆ ಕೇಳುಗರು ಬೇಕು. ಈ ನಿಟ್ಟಿನಲ್ಲಿ ಕಾಲೇಜು ಮಟ್ಟದಲ್ಲಿ ಕವಿಗೋಷ್ಠಿ ಏರ್ಪಡಿಸಿ ಕೇಳುವ ಮನಸ್ಸುಗಳನ್ನು ಹುಟ್ಟುಹಾಕುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.
ಹುಟ್ಟಿದ ತಕ್ಷಣ ಯಾರೂ ಓಡುವುದಿಲ್ಲ. ಅಂಬೇಗಾಲಿಟ್ಟು, ಬಿದ್ದು ಎದ್ದು ಓಡುವುದನ್ನು ಕಲಿಯುತ್ತೇವೆ. ಗಂಟಿಲ್ಲದಂತೆ ಯಾರೂ ಮೊದಲ ಬಾರಿ ಮುದ್ದೆ ಮಾಡಲಾರರು. ಮುದ್ದೆ ಮಾಡುತ್ತಾ, ಮಾಡುತ್ತಾ ಪಕ್ವತೆ ಬರುತ್ತದೆ. ಹಾಗಾಗಿ ಕವಿತೆ ಬರೆಯುವ ಆಸಕ್ತಿ ಚಿಗುರೊಡೆದ ತಕ್ಷಣ ತಪ್ಪೋ ಒಪ್ಪೋ ಬರೆಯಲು ಆರಂಭಿಸಿ. ಪತ್ರಿಕೆಗಳಿಗೆ ಕಳುಹಿಸಿ, ಕವಿಗೋಷ್ಠಿಯಲ್ಲಿ ಭಾಗವಹಿಸಿ, ಕವಿಗಳ ಒಡನಾಟವಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಹುಟ್ಟಿದ ಭಾವನೆಗೆ ಅಕ್ಷರ ರೂಪ ನೀಡುವುದೇ ಕವಿತೆಯಾಗಿದ್ದು ಕವಿ ಅನುಭವಿಸುವ ಅನುಭವ, ಬೆಳೆಯುವ ಪರಿಸರ, ಓದುವ ಸಾಹಿತ್ಯ, ಓದಿದನ್ನು ಗ್ರಹಿಸುವ ಸಾಮಥ್ರ್ಯದ ಮೇಲೆ ಕಾವ್ಯ ನಿರ್ಧಾರವಾಗುತ್ತದೆ. ಅಲ್ಲದೆ ಕಾವ್ಯದ ವಸ್ತು ಆಯ್ಕೆಯೂ ಸಹ ಬಾಲ್ಯ, ಯೌವನ, ವೃದ್ಧಾಪ್ಯದ ಹಂತಗಳಲ್ಲದೆ ಪರಿಸರ ಬೀರುವ ಪ್ರಭಾವದಿಂದಲೂ ಬದಲಾಗುತ್ತಾ ಹೋಗುತ್ತದೆ. ಹಾಗಾಗಿ ನಿಮಗೇನು ತೋಚುತ್ತದೆಯೋ ಅದನ್ನು ಬರೆಯುತ್ತಾ ಹೋಗಿ, ಬರೆಯುತ್ತಾ ಬರೆಯುತ್ತಾ ಪಕ್ವತೆ ಬರುತ್ತದೆ ಎಂದರು.
ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಆರ್.ವಲಿ ಮತ್ತಿತರರು ಇದ್ದರು. ಕಂಟಲಗೆರೆ ಗುರುಪ್ರಸಾದ್, ದೇವರಹಳ್ಳಿ ಶ್ರೀಧರ್, ಟಿ.ಆರ್.ವರಮಹಾಲಕ್ಷ್ಮಿ, ಸಿ.ಆರ್.ಶೋಭಾರಾಣಿ, ಕೆ.ವಿ.ಸರ್ವಮಂಗಳ, ನಂದಿಹಳ್ಳಿ ಬಸವರಾಜು, ಚಿಕ್ಕಬ್ಯಾಲದಕೆರೆ ಸಿದ್ಧರಾಜು, ಶ್ರೀರಾಂಪುರ ಬಿಂಧುಶ್ರೀ, ಉಪ್ಪಾರಹಳ್ಳಿ ಲಾವಣ್ಯ, ಕೆ.ಸಿ.ಪಾಳ್ಯ ಯಶಸ್ವಿನಿ, ಕೆಂಕೆರೆ ಚನ್ನಬಸಮ್ಮ, ಹುಳಿಯಾರ್ ಸಲ್ಮಾ, ತಮ್ಮಡಿಹಳ್ಳಿ ಭಾರತಿ, ಆರ್.ಕಾವ್ಯ, ಆರ್ಶಿಯಾಬಾನು, ಗುಂಡಾನಾಯ್ಕ ಅವರುಗಳು ತಮ್ಮ ಸ್ವರಚಿತ ಕವನ ವಾಚಿಸಿದರು.