2 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಎಸ್.ಪಿ.ಮುದ್ದಹನುಮೆಗೌಡ

ತುಮಕೂರು
         ತುಮಕೂರು ಲೋಕಸಭಾ ಕ್ಷೇತ್ರದ ಸಂಸದರ ಅನುದಾನದ ಅಡಿಯಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಸುಮಾರು 26 ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೆಗೌಡ ತಿಳಿಸಿದರು.
 
       ನಗರದ ದೇವರಾಯಪಟ್ಟಣ ಬಡಾವಣೆಯಲ್ಲಿ ಅಂದಾಜು 4 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು, ದೇವಮೂಲೆಯಾದ ದೇವರಾಯಪಟ್ಟಣದಲ್ಲಿ ನೀರಿನ ಘಟಕ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಲಾಗಿದೆ. ಎರಡ್ಮೂರು ದಿನಗಳ ವಿವಿಧ ಕ್ಷೇತ್ರಗಳಲ್ಲಿ ಸುಮಾರು 26 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅಂದಾಜು 2 ಕೋಟಿ ಅನುದಾನದ ಕಾಮಗಾರಿಗಳಲ್ಲಿ ಇದು ಒಂದಾಗಿದೆ ಎಂದರು.
       ಸಂಸದರ ಅನುದಾನ ಹೆಚ್ಚಿನದಾಗಿ ಕುಡಿಯುವ ನೀರಿಗಾಗಿ ಬಳಕೆ ಮಾಡಲಾಗುತ್ತಿದೆ. ನಗರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಆರಂಭ ಮಾಡಲು ಈ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾಮಗಾರಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ವೇಳೆಯಷ್ಟರಲ್ಲಿ ಪೂರ್ಣ ಮಾಡಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಇದು ಕೇವಲ ಚುನಾವಣೆಗಾಗಿ ಕಾಮಗಾರಿಗಳ ಗುದ್ದಲಿ  ಪೂಜೆ ಮಾಡಲಾಗಿದೆ ಎನ್ನುವಂತೆ ಆಗಬಾರದು. ಈಗಾಗಲೇ 5 ವರ್ಷಕ್ಕೆ ಬೇಕಾದ ಅನುದಾನ ನಮಗೆ ನೀಡಿದ್ದಾರೆ. ಜನರ ಅಭಿಪ್ರಾಯಗಳಂತೆ, ಜನರ ಬೇಡಿಕೆಯಂತೆ ಅವರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡುತ್ತಿದ್ದೇನೆ. ಈ ಹಣವನ್ನು ಜನರದ್ದು, ಅವರ ಸಮಸ್ಯೆಗಳಿಗೆ ಪರಿಹಾರ ದೊರಕಬೇಕು ಎಂದು ತಿಳಿಸಿದರು.
         ಈಗಾಗಲೇ ಕಳೆದ ನಾಲ್ಕು ಮುಕ್ಕಾಲು ವರ್ಷದಲ್ಲಿ ಮಾಡಿದ ಸಾಧನೆಗಳನ್ನು ಒಂದು ಪುಸ್ತಕದ ರೂಪದಲ್ಲಿ ಹೊರ ತಂದು ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಲಿದ್ದೇನೆ. ತಿಪಟೂರು ಬಳಿಯ ನಾಲ್ಕು ಪಥ ರಸ್ತೆ, ಇಸ್ರೋ ಶಾಖೆ, ಪಾಸ್‍ಪೋರ್ಟ್ ಸೇವಾ ಕೇಂದ್ರ, ಎಚ್‍ಎಎಲ್ ಘಟಕ ಸೇರಿದಂತೆ ಆಡಳಿತ ಅವಧಿಯಲ್ಲಿ ಮಾಡಲಾದ ಅಭಿವೃದ್ಧಿ ಕಾರ್ಯಗಳನ್ನು, ಯೋಜನೆಗಳನ್ನು ಪುಸ್ತಕದ ರೂಪದಲ್ಲಿ ಜನರಿಗೆ ಮಾಹಿತಿ ನೀಡುವ ಕೆಲಸ ಶೀಘ್ರದಲ್ಲೇ ಮಾಡುತ್ತೇನೆ ಎಂದರು.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ನಿವಾಸಿಗಳು ಉಪಸ್ಥಿತರಿದ್ದರು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ