ತುಮಕೂರಿನಲ್ಲಿ ಸ್ಪರ್ಧಿಸಲು ದೇವೇಗೌಡರಿಗೆ ಮನವಿ ಮಾಡಿದ ಜಿಲ್ಲಾ ಜೆಡಿಎಸ್..!!

ತುಮಕೂರು

      ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಚುನಾವಣಾ ಅಖಾಡಕ್ಕೆ ಇಳಿಯಬೇಕೆಂದು ಜೆಡಿಎಸ್‍ನ ನೂರಾರು ಕಾರ್ಯಕರ್ತರು ಬೆಂಗಳೂರಿಗೆ ತೆರಳಿ ಮನವಿ ಮಾಡಿದ್ದೇವೆ ಎಂದು ಜೆಡಿಎಸ್ ರಾಜ್ಯ ವಕ್ತಾರ ರಮೇಶ್‍ಬಾಬು ತಿಳಿಸಿದರು.

       ನಗರದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ರಾಜಕಾರಣ ಬದಲಾಗಬೇಕಾದ ಸಮಯ ಇದಾಗಿದ್ದು, ಈ ಹಿಂದೆ ಪ್ರಧಾನಿಯಾಗಿದ್ದಂತಹ ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸಿ ಜಯಭೇರಿ ಗಳಿಸಬೇಕೆಂಬ ಉದ್ದೇಶದಿಂದ ವರಿಷ್ಠರ ಬಳಿಗೆ ತೆರಳಿ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಗುರುವಾರ ಸಂಜೆ ತುಮಕೂರು ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರ ಸಭೆ ಕರೆಯಲಾಗಿದೆ. ಇವರೊಂದಿಗೆ ಚರ್ಚೆ ಮಾಡಿದ ನಂತರ ದೇವೆಗೌಡರು ತಮ್ಮ ನಿಲುವನ್ನು ವ್ಯಕ್ತ ಪಡಿಸಲಿದ್ದಾರೆ ಎಂದು ತಿಳಿಸಿದರು.

      ಮೈತ್ರಿ ಪಕ್ಷಗಳ ಸೈದ್ದಾಂತಿಕ ಹಾಗೂ ಜಾತ್ಯಾತೀತ ನೆಲೆಯಲ್ಲಿ ಎದುರಿಸುತ್ತಿರುವ ಮೊದಲ ಚುನಾವಣೆಯಾಗಿದ್ದು, ಈ ಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡುವಂತೆ ಮನವಿ ಮಾಡಲಾಗಿತ್ತು. ಆದರೆ ಹಲವು ಚರ್ಚೆಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ 20 ಕ್ಷೇತ್ರಗಳು ಹಾಗೂ ಜೆಡಿಎಸ್ ಪಕ್ಷಕ್ಕೆ 8 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ.

      ಈ ಎಂಟು ಕ್ಷೇತ್ರಗಳ ಪೈಕಿ ತುಮಕೂರು ಕ್ಷೇತ್ರ ಜೆಡಿಎಸ್‍ಗೆ ಬಿಟ್ಟುಕೊಡುವಂತೆ ಕೇಳಲಾಗಿತ್ತು. ಅಂತೆಯೇ ಜೆಡಿಎಸ್‍ಗೆ ಈ ಕ್ಷೇತ್ರ ಬಿಟ್ಟುಕೊಡಲಾಗಿದೆ. ಇದರಲ್ಲಿ ಮತ್ತೆ ಹೊಂದಾಣಿಕೆ ಮಾಡಿಕೊಳ್ಳುವುದು ಏನಿಲ್ಲ ಎಂದರು.ಜೆಡಿಎಸ್ ಪಕ್ಷವು ಪ್ರಾದೇಶಿಕ ಪಕ್ಷವಾಗಿದ್ದು, ರಾಷ್ಟ್ರೀಯ ಪಕ್ಷಗಳೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಅದರಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನಿಂದ ಮಂಡ್ಯ, ಹಾಸನ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ತುಮಕೂರು ಕ್ಷೇತ್ರಕ್ಕೆ ದೇವೇಗೌಡರ ಬರುವ ನಿರೀಕ್ಷೆಗಳಿವೆ. ಅದು ಗುರುವಾರ ಸಂಜೆ ಅಂತ್ಯಗೊಳ್ಳಲಿದೆ. ಈಗಾಗಲೇ ತುಮಕೂರಿನಲ್ಲಿ ಜೆಡಿಎಸ್ ಪಕ್ಷದಿಂದ ನಾಲ್ವರು ಆಕಾಂಕ್ಷಿಗಳಿದ್ದು, ಅವರ ಪೈಕಿ ದೇವೇಗೌಡರೇ ಸ್ಪರ್ಧೆ ಮಾಡಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು.

       ಈಗಾಗಲೇ ಪಕ್ಷ ಗೆಲುವಿಗೆ ಬೇಕಾದ ಕಾರ್ಯಚಟುವಟಿಕೆಗಳನ್ನು ಹಾಕಿಕೊಳ್ಳಲಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 20 ರಿಂದ 24 ಕ್ಷೇತ್ರಗಳನ್ನು ಗೆಲ್ಲುವ ಭರವಸೆ ನಮಗಿದೆ. ಈ ಚುನಾವಣೆಯು ಬಿಜೆಪಿ ವರ್ಸಸ್ ಮೈತ್ರಿ ಪಕ್ಷಗಳ ಹೋರಾಟವಾಗಿದೆ. ಮುದ್ದಹನುಮೆಗೌಡರು ಹಾಲಿ ಸಂಸದರಾಗಿರುವುದರಿಂದ ತಾವು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಮಾಡುತ್ತಿರುವು ಪ್ರಯತ್ನ ಸಾಮಾನ್ಯವಾದುದು. ಅದಕ್ಕೆ ನಮ್ಮ ವಿರೋಧವೇನಿಲ್ಲ. ಆದರೆ ಈಗಾಗಲೇ ಕ್ಷೇತ್ರವು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದರಿಂದ ಸಾಮಾನ್ಯವಾಗಿ ಕಾಂಗ್ರೆಸ್ ನಾಯಕರು ನಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದರು.

         ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಲಿಂಗಯ್ಯ, ಎಸ್‍ಟಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಕ್ಬಾಲ್ ಅಹಮ್ಮದ್, ಎಸ್.ಸಿ.ಘಟಕದ ಅಧ್ಯಕ್ಷ ಮಾರುತಿ ಗಂಗಹನುಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಚಲುವರಾಜ್, ಬೆಳ್ಳಿ ಲೋಕೇಶ್, ಯುವ ವಿಭಾಗದ ಮಂಜು, ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

 ಮಾ.25ರಂದು ನಾಮಪತ್ರ ಸಲ್ಲಿಕೆ

       ನಾಮಪತ್ರ ಸಲ್ಲಿಸಲು ಮಾ.26 ಕೊನೆಯ ದಿನವಾದ್ದರಿಂದ ಅಭ್ಯಥಿಯ ಘೋಷಣೆಗಾಗಿ ಕಾಯುತ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿ ದೇವೇಗೌಡರೇ ಸ್ಪರ್ಧೆ ಮಾಡಲಿ ಎಂಬುದು ನಮ್ಮ ನಿರೀಕ್ಷೆಯಾಗಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನಡೆಯಲಿರುವ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ. ತುಮಕೂರಿಗೆ ದೇವೇಗೌಡರೇ ಅಭ್ಯರ್ಥಿಯಾದಲ್ಲಿ ಮಾ.25 ಸೋಮವಾರದಂದು ನಾಮಪತ್ರ ಸಲ್ಲಿಸಲಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link