ತತ್ವರಿತವಾಗಿ ಚೆಕ್ ಪೋಸ್ಟ್‍ಗಳಲ್ಲಿ ಸಿಸಿಕ್ಯಾಮರಾ ಅಳವಡಿಸಲು ಕರೆ

ಹಾವೇರಿ

       ಲೋಕಸಭಾ ಚುನಾವಣೆಯ ನೀತಿ ಸಂಹಿತೆಗಳ ಉಲ್ಲಂಘನೆಯಾಗದಂತೆ ಚಲನವಲನಗಳ ಬಗ್ಗೆ ನಿಗಾವಹಿಸಲು ರಚಿಸಲಾಗಿರುವ ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವಲೆನ್ಸ್ ತಂಡಗಳ ವಾಹನಗಳಿಗೆ ತ್ವರಿತವಾಗಿ ಜಿ.ಪಿ.ಎಸ್. ಅಳವಡಿಸಿ ಚಲನವಲನಗಳ ಬಗ್ಗೆ ನಿಗಾ ವಹಿಸಲು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚಿಸಿದರು.

       ಬುಧವಾರ ಬೆಳಿಗ್ಗೆ ಎಲ್ಲ ತಾಲೂಕಾ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರ ಜೊತೆಗೆ ವಿಡಿಯೋ ಸಂವಾದ ನಡೆಸಿದ ಅವರು ಜಿ.ಪಿ.ಎಸ್. ಅಳವಡಿಕೆ ಕುರಿತಂತೆ ತ್ವರಿತವಾಗಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ವಾಹನಗಳಿಗೆ ಜಿ.ಪಿ.ಎಸ್. ಅಳವಡಿಸಿ ಕೇಂದ್ರೀಕೃತ ವ್ಯವಸ್ತೆಯಲ್ಲಿ ತಂಡಗಳ ಸದಸ್ಯರು ಹಾಗೂ ವಾಹನಗಳ ಚಲನವಲನಗಳ ನಿಗಾವಹಿಸಿ. ಸತತವಾಗಿ ವಾಹನಗಳು ನಿರಂತರವಾಗಿ ಚಟುವಟಿಕೆಯಲ್ಲಿ ಇರಬೇಕು. ಯಾವುದೇ ಒಂದು ಸ್ಥಳದಲ್ಲಿ ನಿಲ್ಲಬಾರದು. ಈ ಕುರಿತಂತೆ ಸ್ಪಷ್ಟ ಸೂಚನೆಗಳನ್ನು ತಂಡಗಳ ಮುಖ್ಯಸ್ಥರಿಗೆ ನೀಡಿ ಎಂದು ಹೇಳಿದರು.

       ಜಿಲ್ಲೆಯ 23 ಚೆಕ್‍ಪೋಸ್ಟ್‍ಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಚಲನವಲನಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿ. ಚೆಕ್‍ಪೋಸ್ಟ್‍ಗಳನ್ನು ಉತ್ತಮವಾಗಿ ಅಲಂಕರಿಸಿ. ಪ್ರತಿ ಚೆಕ್‍ಪೋಸ್ಟ್‍ನಲ್ಲಿ ಕುಡಿಯುವ ನೀರು, ಶೌಚಾಲಯ, ಬೆಳಕಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿ.

       ಈ ದಿನವೇ ಎಲ್ಲ ತಹಶೀಲ್ದಾರಗಳು ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಎಲ್ಲ ಚೆಕ್ ಪೋಸ್ಟ್‍ಗಳಲ್ಲೂ ಸಿಜರ್ ಕಮೀಟಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಮೊಬೈಲ್ ಸಂಖ್ಯೆ, ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರಗಳ ಮೊಬೈಲ್ ಸಂಖ್ಯೆಯನ್ನೊಳಗೊಂಡ ಪ್ರದರ್ಶನ ಫಲಕವನ್ನು ಹಾಕಿ ಸಾರ್ವಜನಿಕರ ಗನಕ್ಕೆ ತನ್ನಿ ಎಂದು ಸೂಚಿಸಿದರು.

        ಸ್ಟ್ರಾಂಗ್ ರೂಂ: ಈಗಾಗಲೇ ಎಲ್ಲ ತಾಲೂಕುಗಳಲ್ಲಿ ಸ್ಟ್ರಾಂಗ್ ರೂಂ ಸ್ಥಳಗಳನ್ನು ಗುರುತಿಸಿದ್ದೀರಿ. ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ವ್ಯವಸ್ಥೆ, ಮತಪೆಟ್ಟಿಗೆಗಳ ದಾಸ್ತಾನು ಕೊಠಡಿಗಳನ್ನು ಭಾರತ ಚುನಾವಣಾ ಆಯೋಗದ ಸ್ಟ್ಯಾಂರ್ಡ್ ಆಫರೇಷನ್ ಸಿಸ್ಟಂ ಮಾರ್ಗಸೂಚಿಯಂತೆ ಭದ್ರತಾ ವ್ಯವಸ್ಥೆ ಸಿಸಿ ಕ್ಯಾಮರಾ ಅಳವಡಿಕೆ, ಮಳೆ ಗಾಳಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣಾ ವ್ಯವಸ್ಥೆ, ಬೆಂಕಿ ಇತರ ಅವಘಡಗಳ ಸಂರಕ್ಷಣೆಯ ಸುರಕ್ಷತೆ ಸೇರಿದಂತೆ ಗರಿಷ್ಠ ಭದ್ರತಾ ಕ್ರಮಗಳನ್ನು ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದರು. ಮತದಾನದ ನಂತರ ಮತ ಎಣಿಕೆಗಾಗಿ ಜಿಲ್ಲಾ ಕೇಂದ್ರಕ್ಕೆ ಇವಿಎಂಗಳ ಸಾಗಾಣಿಕೆ ವ್ಯವಸ್ಥೆ ಭದ್ರತೆ ಕುರಿತಂತೆ ಯೋಜಿತವಾಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.
ಎಪಿಕ್ ವಿತರಿಸಿ:

       ಹೊಸದಾಗಿ ಮತದಾರರ ನೋಂದಣಿಗೆ ಸ್ವೀಕರಿಸಿರುವ ಅರ್ಜಿ ನಮೂನೆ 6 ಹಾಗೂ ವರ್ಗಾವಣೆ, ತಿದ್ದುಪಡಿಸಿಗಾಗಿ ಸ್ವೀಕರಿಸಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಿ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾನದ ದಿನದ ಹಿಂದಿನ 10 ದಿನಗಳವರೆಗೆ ಮತದಾರರ ಸೇರ್ಪಡೆಗೆ ಅವಕಾಶವಿದ್ದು, ಅರ್ಜಿಗಳನ್ನು ಸ್ವೀಕರಿಸಿ ಜನವರಿ ನಂತರ ಸ್ವೀಕರಿಸಿ ವಿಲೇವಾರಿ ಮಾಡಿದ ಮತದಾರರಿಗೆ ಎಪಿಕ್ ಕಾರ್ಡ್‍ಗಳನ್ನು ವಿತರಿಸಿ ಎಂದು ಸೂಚಿಸಿದರು.

ತರಬೇತಿ

       ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಸುತ್ತಿನ ತರಬೇತಿಗೆ ಸಿದ್ಧತೆಮಾಡಿಕೊಳ್ಳಿ. ಎಪ್ರಿಲ್ 7 ರಂದು ತರಬೇತಿಗೆ ದಿನಾಂಕ ನಿಗದಿಪಡಿಸಲಾಗುವುದು. ಸಂಪನ್ಮೂಲ ವ್ಯಕ್ತಿಗಳು ಶಾಲಾ ಕೊಠಡಿಗಳನ್ನು ಗುರುತಿಸಿಕೊಂಡು ಆಯಾ ವಿಧಾನಸಭಾ ವ್ಯಾಪ್ತಿಯಲ್ಲಿ ಮೊದಲ ಸುತ್ತಿನ ತರಬೇತಿಗೆ ವ್ಯವಸ್ಥೆಮಾಡಿಕೊಳ್ಳಲು ಸೂಚಿಸಿದರು.

       ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಎಚ್. ಚಂದ್ರಶೇಖರ, ಉಪ ವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ, ಹಿರೇಕೆರೂರು ಸಹಾಯಕ ಚುನಾವಣಾಧಿಕಾರಿ ವಿನೋದ ಹೆಗ್ಗಳಗಿ, ಚುನಾವಣೆಯ ವಿವಿಧ ಸಮಿತಿಯ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link