ತುಮಕೂರು:
ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಯಿಂದಾಗಿ ತುಮಕೂರು ರಾಷ್ಟ್ರದ ಗಮನ ಸೆಳೆಯಲಿದೆ. ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ದೇವೇಗೌಡರು ಶನಿವಾರ ಮಧ್ಯಾಹ್ನ ಪ್ರಕಟಿಸುತ್ತಿದ್ದಂತೆಯೇ ಎಲ್ಲರ ಕಣ್ಣು ಇತ್ತ ಕೇಂದ್ರೀಕೃತವಾಗುತ್ತಿದೆ. ಇಲ್ಲಿ ಸ್ಪರ್ಧಿಸುವರೋ? ಇಲ್ಲ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವರೋ ಎಂಬ ಹಲವು ಅನುಮಾನಗಳಿಗೆ ದೇವೇಗೌಡರೇ ತೆರೆ ಎಳೆದಿದ್ದಾರೆ. ಆ ಮೂಲಕ ಇಲ್ಲೊಂದು ಹೊಸ ಹವಾ ಸೃಷ್ಟಿಸಿದ್ದಾರೆ.
ಈಗಾಗಲೇ ನಿಗದಿಯಾಗಿರುವಂತೆ ಇಂದು ದೇವೇಗೌಡರು ನಾಮಪತ್ರ ಸಲ್ಲಿಸುವುದರೊಂದಿಗೆ ಈ ಕ್ಷೇತ್ರ ರಾಷ್ಟ್ರದ ಗಮನ ಸೆಳೆಯುವ ಕ್ಷೇತ್ರಗಳಲ್ಲಿ ಒಂದಾಗಿ ಗುರುತು ಪಡೆಯಲಿದೆ. ಜೆಡಿಎಸ್ ಸ್ಪರ್ಧೆಯನ್ನು ವಿರೋಧಿಸುತ್ತಿದ್ದವರು ಈಗ ಪಕ್ಷದ ಆದೇಶ ಹೊತ್ತು ಅನಿವಾರ್ಯವಾಗಿ ಪ್ರಚಾರಕ್ಕೆ ಇಳಿಯಬೇಕಿದೆ. ಅಳೆದು ತೂಗಿ ಕೊನೇ ಘಳಿಗೆಯಲ್ಲಿ ತುಮಕೂರನ್ನೇ ಆಯ್ಕೆ ಮಾಡಿಕೊಳ್ಳುವ ಹಿಂದೆ ದೇವೇಗೌಡರಲ್ಲಿ ತನ್ನದೇ ಆದ ಲೆಕ್ಕಾಚಾರಗಳು ಇವೆ.
ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಹಳೆಯ ಮೈಸೂರು ಭಾಗವಾಗಿರುವ ತುಮಕೂರು ಕ್ಷೇತ್ರದ ಕೆಲವು ವಿಧಾನಸಭಾ ಕ್ಷೇತ್ರಗಳು ಜೆಡಿಎಸ್ ಭದ್ರಕೋಟೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸಾಧನೆ ಅಷ್ಟಕ್ಕಷ್ಟೆ. 10 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ ಇಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಅಭ್ಯರ್ಥಿಗಳು ಕಳೆದ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಕಳೆದ ಬಾರಿ ಜಾತಿ ಸಮೀಕರಣದ ಅಂಶ ಇಟ್ಟುಕೊಂಡೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎ.ಕೃಷ್ಣಪ್ಪ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ಇತಿಹಾಸ ಸೃಷ್ಟಿಸಿದ ಭಾಸ್ಕರಪ್ಪ ಗೆಲುವು
1996 ರಲ್ಲಿ ಸಿ.ಎನ್.ಭಾಸ್ಕರಪ್ಪ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಅದೇ ಪ್ರಥಮ ಬಾರಿಗೆ ಹಿಂದುಳಿದ ವರ್ಗಗಳ ಮತಗಳ ಕ್ರೋಢೀಕೃತವಾಗಿದ್ದವು. ಆಗ ಹೆಚ್.ಡಿ.ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು.
ವಕ್ಕಲಿಗ ಮತ್ತು ಹಿಂದುಳಿದ ವರ್ಗಗಳ ಜಾತಿ ಸಮೀಕರಣ ಅಂದಿನ ಫಲಿತಾಂಶದಲ್ಲಿ ಹೊರಬಿದ್ದಿತ್ತು. ಇದನ್ನು ಹೊರತುಪಡಿಸಿದರೆ ಮತ್ತಿನ್ನಾವ ಚುನಾವಣೆಯಲ್ಲಿಯೂ ಜೆಡಿಎಸ್ ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಆದರೆ ಜೆಡಿಎಸ್‍ನಿಂದ ಸಿಡಿದು ಹೊರಬಂದವರು ಗೆಲುವು ಸಾಧಿಸಿರುವ ಇತಿಹಾಸವಿದೆ.
2013 ರಲ್ಲಿ ಎಸ್.ಪಿ.ಮುದ್ದಹನುಮೇಗೌಡ ಅವರು ಜೆಡಿಎಸ್‍ನಿಂದ ವಿಧಾನಸಭಾ ಚುನಾವಣೆಯ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಕುಣಿಗಲ್‍ನಿಂದ ಟಿಕೆಟ್ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಟಿಕೆಟ್ ಕೈತಪ್ಪಿದಾಗ ಕಾಂಗ್ರೆಸ್ ಸೇರ್ಪಡೆಯಾದರು.
2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯನ್ನು ಪರಾಭವಗೊಳಿಸಿದರು. ಆಗ ಜೆಡಿಎಸ್ (ಎ.ಕೃಷ್ಣಪ್ಪ) ಮೂರನೇ ಸ್ಥಾನಕ್ಕೆ ಸೀಮಿತವಾಯಿತು. ಇದಕ್ಕೂ ಹಿಂದೆ ಅಂದರೆ 2009ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುದ್ದಹನುಮೇಗೌಡರು ಜೆಡಿಎಸ್‍ನಲ್ಲೇ ಇದ್ದರು. ಜೆಡಿಎಸ್‍ನಿಂದಲೇ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆಗ ಜಿ.ಎಸ್.ಬಸವರಾಜು ವಿರುದ್ಧ ಮುದ್ದಹನುಮೇಗೌಡರು ಪರಾಭವಗೊಂಡಿದ್ದರು.
ತುಮಕೂರಿನಿಂದ ಸ್ಪರ್ಧಿಸುತ್ತಿರುವ ದೇವೇಗೌಡರಿಗೆ ತುಮಕೂರು ಅಪರಿಚಿತವೇನಲ್ಲ. ಈ ಹಿಂದಿನಿಂದಲೂ ಕ್ಷೇತ್ರದಲ್ಲಿ ಸಂಪರ್ಕವಿಟ್ಟುಕೊಂಡೇ ಬಂದಿದ್ದಾರೆ. ಅಷ್ಟೇ ಏಕೆ ದೇವೇಗೌಡರ ಕುಟುಂಬದವರೇ ಜಿಲ್ಲೆಗೆ ಬಂದು ಗೆದ್ದು ಹೋಗಿದ್ದಾರೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿಯಿಂದ ಡಿ.ಸಿ. ಗೌರಿಶಂಕರ್ ಜೆಡಿಎಸ್‍ನಿಂದಲೇ ಆರಿಸಿ ಬಂದಿದ್ದರು.
ಬಿಜೆಪಿ ಆಪರೇಷನ್ ಕಮಲಕ್ಕೆ ಅವರು ಒಳಗಾದ ನಂತರ ಅನಿತಾ ಕುಮಾರಸ್ವಾಮಿ ಅವರನ್ನು ಉಪ ಚುನಾವಣೆಯಲ್ಲಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡ ಇತಿಹಾಸ ಗೌಡರ ಕುಟುಂಬಕ್ಕಿದೆ. ಹೀಗಾಗಿ ಜಿಲ್ಲೆಯ ರಾಜಕೀಯ ನಂಟು ಹೊಂದಿರುವ ಗೌಡರಿಗೆ ಇಲ್ಲಿನ ರಾಜಕಾರಣ ಗೊತ್ತಿಲ್ಲದೇ ಏನಿಲ್ಲ. ಇವೆಲ್ಲವನ್ನೂ ಬಲ್ಲ ಗೌಡರು ಒಂದು ಕೈ ನೋಡೇಬಿಡೋಣ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ.
ಹೈಕಮಾಂಡ್ ನಿರ್ದೇಶನ ಹಾಗೂ ಮೈತ್ರಿಯ ಅನಿವಾರ್ಯ ಧರ್ಮ ಸಂಕಟಕ್ಕೆ ಸಿಲುಕಿರುವ ಕಾಂಗ್ರೆಸ್ ಮುಖಂಡರೀಗ ಅನಿವಾರ್ಯವಾಗಿ ದೇವೇಗೌಡರ ಜೊತೆ ಹೆಜ್ಜೆ ಹಾಕಲೇಬೇಕಿದೆ. ಇಲ್ಲಿರುವ ಅಸಮಾಧಾನವನ್ನು ನಿವಾರಿಸುವ ತಂತ್ರಗಾರಿಕೆ ಜೆಡಿಎಸ್ ವರಿಷ್ಠರಿಗೆ ಹೊಸದೇನಲ್ಲ. ಅವೆಲ್ಲವನ್ನೂ ಶಮನಗೊಳಿಸಿಕೊಂಡೇ ಮುಂದೆ ಹೋಗಬೇಕಾದ ಅನಿವಾರ್ಯತೆ ಈಗ ಮೈತ್ರಿ ಪಕ್ಷಕ್ಕಿದೆ.
ಮುದ್ದಹನುಮೇಗೌಡರು ತನಗೆ ಅನ್ಯಾಯವಾಗಿದೆ, ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇನೆ ಎಂಬುದಾಗಿ ಹಿತೈಷಿಗಳ ಸಭೆಯಲ್ಲಿ ಗರಂ ಆಗಿಯೇ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಆದರೆ ಅದೀಗ ಸಾಧ್ಯವಾಗದ ಮಾತು. ಈಗಾಗಲೇ ನಾಮಪತ್ರಕ್ಕೆ ಸಿದ್ಧತೆ ಮಾಡಿಕೊಂಡಿರುವ ದೇವೇಗೌಡರು ಈ ಕ್ಷೇತ್ರವನ್ನು ಮರಳಿ ಕಾಂಗ್ರೆಸ್‍ಗೆ ನೀಡುವರೆಂಬ ನಂಬಿಕೆಗಳನ್ನು ಯಾರೂ ಉಳಿಸಿಕೊಂಡಿಲ್ಲ.
ಮುದ್ದಹನುಮೇಗೌಡರು ಮಾತ್ರವಲ್ಲ, ಕೆ.ಎನ್.ರಾಜಣ್ಣ ಅವರು ಕೂಡಾ ಅಸಮಾಧಾನಿತರು. ಅವರು ಇಂದು ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಅಸಮಾಧಾನಿತರ ಪಡೆಯನ್ನು ಶಮನಗೊಳಿಸುವುದೇ ಕಾಂಗ್ರೆಸ್ ಮುಖಂಡರಿಗೆ ಇರುವ ಒಂದು ಸವಾಲು. ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರ ಕಳೆಗಟ್ಟಿದಾಗ ಹಾಗೂ ಆನಂತರದ ಬೆಳವಣಿಗೆಗಳು ಈಗಿನ ಪರಿಸ್ಥಿತಿಯನ್ನು ಬದಲಾಯಿಸಬಲ್ಲವು. ಏಕೆಂದರೆ ಇದೆಲ್ಲವು ರಾಜಕಾರಣ. ಇಲ್ಲಿ ಏನು ಬೇಕಾದರೂ ಆಗಬಹುದು.
ಮೈತ್ರಿಯಲ್ಲಿನ ಈ ಎಲ್ಲ ನಡೆಗಳನ್ನು ಗಮನಿಸುತ್ತಿರುವ ಬಿಜೆಪಿ ಮಾತ್ರ ತನ್ನ ಎಲ್ಲ ಅಸಮಾಧಾನಗಳನ್ನು ಹೊರ ಹಾಕದೆ ಮೌನಿಯಾಗಿಯೇ ರಾಜಕಾರಣ ಗಮನಿಸುತ್ತಿದೆ. ಮೈತ್ರಿಯ ಒಡಕಿನ ಲಾಭ ಪಡೆಯಲು ಯತ್ನಿಸುತ್ತಿದೆ. ಈಗಾಗಲೇ ಪ್ರಚಾರದ ಕಾರ್ಯತಂತ್ರಗಳನ್ನು ಯೋಜಿಸಿದೆ.
ಬಿಜೆಪಿಯನ್ನು ಸೋಲಿಸುವ ಕಾರಣಕ್ಕಾಗಿ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಮೈತ್ರಿ ಧರ್ಮ ಪಾಲಿಸಲು ನಾವೆಲ್ಲರೂ ಒಗ್ಗಟ್ಟಾಗಲೇಬೇಕಿದೆ. ಮೈತ್ರಿಯ ಅಭ್ಯರ್ಥಿ ಗೆಲುವು ನಮಗೆ ಮುಖ್ಯ. ಹೀಗಾಗಿ ಅಸಮಾಧಾನಗೊಂಡಿರುವ ಎಸ್.ಪಿ.ಮುದ್ದಹನುಮೇಗೌಡರು ಹಾಗೂ ಕೆ.ಎನ್.ರಾಜಣ್ಣ ಅವರನ್ನು ಸಮಾಧಾನಗೊಳಿಸಲಾಗುವುದು ಎಂದೇನೋ ಪರಮೇಶ್ವರ ಹೇಳಿದ್ದಾರೆ. ಒಂದು ಕಡೆ ಅಸಮಾಧಾನಿತರ ನಡೆ. ಮತ್ತೊಂದೆಡೆ ಮೈತ್ರಿ ಧರ್ಮ. ಇವೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ಈಗ ಪರಮೇಶ್ವರ್ ಮೇಲಿದೆ. ಹೇಗೆ ನಿಭಾಯಿಸುತ್ತಾರೆಂಬುದನ್ನು ಕಾದು ನೋಡಬೇಕು.