ಬ್ಯಾಡಗಿ:
ಭಾರತದಂತಹ ಸಹೃದಯಿ ರಾಷ್ಟ್ರಕ್ಕೆ ಇಂದು ಸಾರ್ವಭೌಮತ್ವದ ಪ್ರಶ್ನೆ ಎದುರಾಗಿದೆ, ದೇಶದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸಬೇಕಾಗಿದ್ದು ಎಲ್ಲರೂ ಒಗ್ಗಾಟ್ಟಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸ ಬೇಕಾಗಿದೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಮನವಿ ಮಾಡಿದರು.
ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಭಾಷಣವನ್ನುದ್ದೇಶಿಸಿ ಮಾತನಾಡಿದ ಅವರು, ದೇಶ ಮೊದಲು ಎಂಬ ವಾದವನ್ನು ಬಿಜೆಪಿ ಮಂಡಿಸುತ್ತಿದೆ, ದೇಶ ಸುಭೀಕ್ಷವಾಗಿದ್ದರೇ ನಾವೆಲ್ಲರೂ ಸುರಕ್ಷಿತ ಅದನ್ನು ಕೆಲ ರಾಜಕೀಯ ಪಕ್ಷಗಳು ಒಪ್ಪಿಕೊಳ್ಳುತ್ತಿಲ್ಲ ಹೀಗಾಗಿ ಇದಕ್ಕೆಲ್ಲಾ ಕೇವಲ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷವೊಂದೇ ಅಂತಿಮ ಪರಿಹಾರವೊಂದೇ ಎಂದರು.
ಆರ್ಥಿಕ ದಿವಾಳಿ ಎಬ್ಬಿಸಿದವರಿಗೆ ಪಾಠ ಕಲಿಸಿ: ಕಳೆದ ಆರು ದಶಕಗಳಿಂದ ದೇಶವನ್ನಾಳಿದವರು, ಸ್ವಾರ್ಥ ಸಾಧನೆಗಾಗಿ ಇಡೀ ದೇಶವನ್ನೇ ಆರ್ಥಿಕ ದಿವಾಳಿತನಕ್ಕೆ ನೂಕಿದವರನ್ನು ದೇಶ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ, ದೇಶದ ಜನರಿಗೆ ಪುಕ್ಕಟೆ ಸೌಲಭ್ಯಗಳನ್ನು ಕೊಟ್ಟು ಅದನ್ನೇ ತನ್ನ ಪಕ್ಷದ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿರುವ ಪಕ್ಷವನ್ನು ತಿರಸ್ಕರಿಸಿ ‘ಸರ್ವೇ ಜನಾ: ಸುಖಿನೋ ಭವಂತು’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
50 ವರ್ಷದಲ್ಲಿ ಆಗದಿದ್ದನ್ನು ಐದೇ ವರ್ಷದಲ್ಲಿ ಸಾಧಿಸಿದ್ದೇವೆ: ಶಿಗ್ಗಾಂವ ಸವಣೂರು ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಕಳೆದ 50 ವರ್ಷದಲ್ಲಿ ಕಾಂಗ್ರೆಸ್ ಮಾಡದಿರುವ ಸಾಧನೆಯನ್ನು ಕೇವಲ 5 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಧಿಸಿದೆ, ಇದೀಗ ವಿಶ್ವವೇ ದೇಶದ ವಿರುದ್ಧ ತಲೆ ಎತ್ತದಂತೆ ಮಾಡಿದ್ದೇವೆ ಹೀಗಾಗಿ ಮತ್ತೊಮ್ಮೆ ಮೋದಿಯವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಇದಕ್ಕೂ ಮುನ್ನ ಅಭ್ಯರ್ಥಿ ಶಿವಕುಮಾರ ಉದಾಸಿ ಕದರಮಂಡಲಗಿಯ ಶ್ರೀ ಕಾಂತೇಶ (ಆಂಜನೇಯ ಸ್ವಾಮಿ)ದೇವರ ದರ್ಶನಾಶೀರ್ವಾದ ಪಡೆದು ಬಳಿಕ ಚುನಾವಣಾ ಪ್ರಚಾರ ಆರಂಭಿಸಿದರು. ಈ ಸಂದರ್ಭದಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಬಿಜೆಪಿ ಮುಖಂಡರಾದ ಶಂಕ್ರಣ್ಣ ಮಾತನವರ, ರವೀಂದ್ರ ಪಟ್ಟಣಶೆಟ್ಟಿ, ಸಿದ್ಧರಾಜ ಕಲಕೋಟಿ, ಸುರೇಶ ಯತ್ನಳ್ಳಿ, ಹನುಮಂತಪ್ಪ ನಾಯ್ಕರ್, ಸುರೇಶ ಯತ್ನಳ್ಳಿ, ಚನ್ನವೀರಗೌಡ ಬುಡ್ಡನಗೌಡ್ರ, ಎಸ್.ಎನ್.ಯಮನಕ್ಕನವರ, ದ್ರಾಕ್ಷಾಯಣಮ್ಮ ಪಾಟೀಲ, ಸುಧಾ ಕಳ್ಳಿಹಾಳ, ವಿಶ್ವನಾಥ ಕೊಂಚಿಗೇರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.