ಎಸ್‍ಯುಸಿಐ(ಸಿ) ಅಭ್ಯರ್ಥಿಯಾಗಿ ಮಧು ಕಣಕ್ಕೆ

ದಾವಣಗೆರೆ:

       ಲೋಕಸಭಾ ಚುನಾವಣೆಯಲ್ಲಿ ಸೊಷಲಿಸ್ಟ್ ಯೂನಿಟಿ ಆಫ್ ಇಂಡಿಯಾ (ಕಮ್ಯುನಿಷ್ಟ್) ಪಕ್ಷವು ರಾಜ್ಯದ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ದಾವಣಗೆರೆ ಕ್ಷೇತ್ರದಿಂದ ನಮ್ಮ ಪಕ್ಷದಿಂದ ಎಐಡಿವೈಒ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಕಣಕ್ಕಿಳಿಯಲಿದ್ದಾರೆಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಡಾ.ಸುನಿತ್‍ಕುಮಾರ್ ಟಿ.ಎಸ್. ತಿಳಿಸಿದ್ದಾರೆ.

        ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಸ್‍ಯುಸಿಐ(ಸಿ) ಪಕ್ಷವು ರಾಜ್ಯದ ಮೈಸೂರು-ಕೊಡಗು, ಬೆಂಗಳೂರು ಗ್ರಾಮೀಣ, ದಾವಣಗೆರೆ, ಬಳ್ಳಾರಿ, ಧಾರವಾಡ, ರಾಯಚೂರು-ಯಾದಗಿರಿ, ಕಲಬುರಗಿ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸುತ್ತಿದೆ ಎಂದು ಹೇಳಿದರು.

        ಸ್ವಾತಂತ್ರ್ಯದ ನಂತರ ಭಾರತದಲ್ಲಿ ಹಲವು ಚುನಾವಣೆಗಳು ಬಂದಿವೆ. ಸಂಸತ್ತು ಪುನರ್ ರಚನೆಯಾಗಿದೆ. ಆದರೂ ಸಹ ಜನರ ಸಮಸ್ಯೆ ಬಗೆಹರಿದಿಲ್ಲ. ವಿದ್ಯಾರ್ಥಿ-ಯುವಜನರ, ರೈತ-ಕಾರ್ಮಿಕರ ಸಮಸ್ಯೆಗಳು ದಿನೇ, ದಿನೇ ಉಲ್ಭಣಗೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಈ ವರೆಗೂ ದೇಶವನ್ನು ಆಳಿದ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟವಾಗಲಿ, ಬಿಜೆಪಿ ನೇತೃತ್ವದ ಎನ್‍ಡಿಎ ಕೂಟವಾಗಲಿ ಜನರ ಸಮಸ್ಯೆಯನ್ನು ಪರಿಹರಿಸುವ ಗೋಜಿಗೆ ಹೋಗಿಲ್ಲ. ಬಂಡವಾಳಶಾಹಿ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ವೈಚಾರಿಕವಾಗಿ ಯಾವುದೇ ಭಿನ್ನತೆಗಳಿಲ್ಲ. ಹೀಗಾಗಿಯೇ ಎರಡೂ ಪಕ್ಷಗಳು ಆಡಳಿತ ನಡೆಸಿದ ಸಂದರ್ಭಗಳಲ್ಲಿ ಬಂಡವಾಳಿಶಾಹಿಗಳಿಗೆ ಪೂರಕವಾದ ನೀತಿಗಳನ್ನೇ ರೂಪಿಸಿಕೊಂಡು ಬಂದಿವೆಯೇ ಹೊರತು, ಜನಪರ ಕಾಳಜಿಯಿಂದ ಯಾವುದೇ ನೀತಿಗಳನ್ನು ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು.

        ಕಳೆದ ನಾಲ್ಕು ಮುಕ್ಕಾಲು ವರ್ಷಗಳ ಕಾಲ ಆಡಳಿತ ನೀಡಿದ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಜನರ ಮುಂದಿರುವ ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಈ ದೇಶದ ಜನಸಾಮಾನ್ಯರ ಸಮಸ್ಯೆಗಳು ಬಗೆಹರಿಯಬೇಕಾದರೆ, ಮೂಲಭೂತ ಬದಲಾವಣೆ ಆಗಬೇಕಾಗಿದೆ. ಇದು ಸಾಕಾರಗೊಳ್ಳಬೇಕಾದರೆ, ದುಡಿಯುವ ವರ್ಗದ ಜನರ ಕ್ರಾಂತಿ ಆಗುವುದರ ಜೊತೆಗೆ, ಜನ ಹೋರಾಟವೇ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಬೇಕೆಂದು ಆಶಿಸಿದರು.

        ಜನ ಹೋರಾಟವನ್ನೇ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಸಬೇಕೆಂಬ ಉದ್ದೇಶದಿಂದಲೇ ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಿ, ನಮ್ಮ ವಿಚಾರಗಳನ್ನು ಜನರ ಮುಂದಿಡಲಿದ್ದೇವೆ. ಮತದಾರರು ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಮಧು ತೊಗಲೇರಿ ಅವರನ್ನು ಗೆಲ್ಲಿಸಿದರೇ, ಜನರ ಸಮಸ್ಯೆಗಳನ್ನು ಸಂಸತ್‍ನಲ್ಲಿ ಪ್ರತಿಧ್ವನಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

        ನಮ್ಮ ಎಸ್‍ಯುಸಿಐ ಪಕ್ಷ ಹಾಗೂ ಅದರ ಸಹಭಾಗಿತ್ವದ ಸಂಗಟನೆಗಳು ಕಳೆದ 15 ವರ್ಷಗಳಿಂದ ಜಿಲ್ಲೆಯಲ್ಲಿ ಜನರಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದು, ಅದರಲ್ಲಿ ಪ್ರಮುಖವಾಗಿ 22 ಕೆರೆಗಳ ಏತ ನೀರಾವರಿ ಹೋರಾಟ ಸಹ ಒಂದಾಗಿದ್ದು, ಇಂದು ಜಗಳೂರು ತಾಲೂಕಿನ ತುಪ್ಪದಹಳ್ಳಿ ಕೆರೆಯ ವರೆಗೂ 22 ಕರೆಗಳಿಗೆ ನೀರು ಹರಿಯುತ್ತಿದೆ ಏಂದರೆ, ಅದು ನಮ್ಮ ಹೋರಾಟದ ಪ್ರತಿಫಲವೇ ಆಗಿದೆ ಎಂದು ನುಡಿದರು.

         ಬೀರೂರು-ಸಮ್ಮಸಗಿ ರಸ್ತೆ ಅಭಿವೃದ್ಧಿ ಯೋಜನೆಗೆ ರೈತರ ಭೂಮಿ ಸ್ವಾಧೀನ ಪಡೆಸಿಕೊಂಡ ಸರ್ಕಾರವು ರೈತರಿಗೆ ಪರಿಹಾರ ನೀಡರಲಿಲ್ಲ ಹಾಗೂ ವೇಗವಾಗಿಯೂ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಿರಲಿಲ್ಲ. ಆದರೆ, ಎಸ್‍ಯುಸಿಐ ಹೋರಾಟದ ಫಲವಾಗಿ ಆ ಭಾಗದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರವೂ ದೊರೆಯುವುರದ ಜೊತೆಗೆ ರಸ್ತೆ ಅಭಿವೃದ್ಧಿಯೂ ಪೂರ್ಣಗೊಂಡಿದೆ ಎಂದರು.
ಐಟಿಐ ಶಿಕ್ಷಣದಲ್ಲಿ ಸೆಮಿಸ್ಟರ್ ಪದ್ಧತಿ ಜಾರಿ ಮಾಡಿದ ಕಾರಣಕ್ಕೆ ಐಟಿಐ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ದೊರೆಯುತ್ತಿರಲಿಲ್ಲ.

         ಆದರ ನಮ್ಮ ಪಕ್ಷದ ಅಂಗ ಸಂಸ್ಥೆಯಾಗಿರುವ ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆಯ ಹೋರಾಟದಿಂದ ಈಗ ನಿರಂತರವಾಗಿ ಸ್ಟೈಫಂಡ್ ಬರುತ್ತಿದೆ. ಅಲ್ಲದೇ, ದಾವಣಗೆರೆ ನಗರದ ಕಬ್ಬೂರು ಬಸಪ್ಪ ನಗರ, ಕೆಟಿಜೆ ನಗರ, ಯಲ್ಲಮ್ಮ ನಗರ ಸೇರಿದಂತೆ ಹಲವು ಕೊಳಗೇರಿಗಳಲ್ಲಿ ಸಮರ್ಪಕ ಪಡಿತರ ವಿತರಣೆ, ನೀರು ಪೂರೈಕೆ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳಿಗಾಗಿ ಹೋರಾಟ ನಡೆಸಿ, ನಾಗರೀಕರಿಗೆ ಸೌಲಭ್ಯಗಳನ್ನು ತಲುಪಿಸುವಲ್ಲಿಯೂ ಯಶಸ್ವಿಯಾಗಿದೆ. ಈ ಎಲ್ಲಾ ಹೋರಾಟಗಳಲ್ಲಿ ನಮ್ಮ ಅಭ್ಯರ್ಥಿ ಮಧು ತೊಗಲೇರಿ ಸಕ್ರಿಯವಾಗಿ ಭಾಗವಹಿಸಿದ್ದು, ಕ್ಷೇತ್ರದ ಮತದಾರರು ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಿ, ಸಂಸತ್‍ನಲ್ಲಿ ಜನರ ದನಿಯಾಗಲು ಸಹಕರಿಸಬೇಕೆಂದು ಮನವಿ ಮಾಡಿದರು.

       ಎಸ್‍ಯುಸಿಐ(ಸಿ) ಅಭ್ಯರ್ಥಿ ಮಧು ತೊಗಲೇರಿ ಮಾತನಾಡಿ, ಕಾರ್ಮಿಕರ ಚಳವಳಿಯ ಇತಿಹಾಸವಿರುವ ದಾವಣಗೆರೆಯಲ್ಲಿ ಇತ್ತೀಚೆಗೆ ಐಟಿಐ, ಬಿ.ಇ. ಕಾಲೇಜುಗಳಿವೆ. ಆದರೆ, ಈ ವರೆಗೂ ಕ್ಷೇತ್ರವನ್ನು ಪ್ರತಿನಿಧಿಸಿರುವ ಜನಪ್ರತಿನಿಧಿಗಳು ಶ್ರಮಾಧಾರಿತ ಕಾರ್ಖಾನೆ ತರಲು ಯಾರೂ ಪ್ರಯತ್ನಿಸಿಲ್ಲ. ಹೋರಾಟದ ಹಿನ್ನೆಲೆ ಹೊಂದಿರುವ ನನ್ನನ್ನು ಕ್ಷೇತ್ರದ ಮತದಾರರು ಗೆಲ್ಲಿಸಿದರೆ, ಸಂಸತ್‍ನಲ್ಲಿ ಜನರ ಸಮಸ್ಯೆಗೆ ಧ್ವನಿಯಾಗುವುದರ ಜೊತೆಗೆ ಶ್ರಮಾಧಾರಿತ ಕಾರ್ಖಾನೆ ತಂದು, ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತೇನೆ ಎಂದರು.

        ಪಕ್ಷದ ಮುಖಂಡ ಮಂಜುನಾಥ್ ಕೈದಾಳೆ ಮಾತನಾಡಿ, 1998ರಿಂದಲೂ ಎಸ್‍ಯುಸಿಐ ಪಕ್ಷ ದಾವಣಗೆರೆಯ ಜ್ವಲಂತ ಸಮಸ್ಯೆಗಳಿಗೆ ಪ್ರಗತಿಶೀಲ ಹೋರಾಟವನ್ನು ಕಟ್ಟಿಕೊಂಡು ಬಂದಿದೆ. ಹಣ ಸಂಪಾದನೆಗಾಗಿಯೇ ಚುನಾವಣೆಗೆ ನಿಲ್ಲುವ ಶ್ರೀಮಂತರ ನಡುವೆ ಸಾಮಾಜಿಕ ಹೋರಾಟಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ನಮ್ಮ ಅಭ್ಯರ್ಥಿ ಮಧು ತೊಗಲೇರಿಯವರನ್ನು ಕ್ಷೇತ್ರದ ಮತದಾರರು ಗೆಲ್ಲಿಸಿಕೊಂಡು ಬರಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಪರ್ಣ ಬಿ.ಆರ್, ಮಂಜುನಾಥ್ ಕುಕ್ಕುವಾಡ, ತಿಪ್ಪೇಸ್ವಾಮಿ, ಜ್ಯೋತಿ ಕುಂದುವಾಡ, ಬನಶ್ರೀ ಜಿ.ಎಸ್, ಸೌಮ್ಯ, ವಸಂತಕುಮಾರ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link