ಎಂಸಿಎಂಸಿ ಸಮಿತಿ ಸದಸ್ಯರು, ಸಿಬ್ಬಂದಿಗೆ ಕಾರ್ಯಾಗಾರ

ಬಳ್ಳಾರಿ

        ಲೋಕಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಈಗಾಗಲೇ ಸಕಲ ಕ್ರಮಗಳನ್ನು ಕೈಗೊಂಡಿದ್ದು, ಅದರ ಸೂಚನೆ ಅನ್ವಯ ಬಳ್ಳಾರಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಭವನದಲ್ಲಿ ಮಾಧ್ಯಮ ಕಣ್ಗಾವಲು ಮತ್ತು ಮಾಧ್ಯಮ ಪ್ರಮಾಣೀಕರಣ ಸಮಿತಿ ರಚಿಸಲಾಗಿದ್ದು, ಅದರ ಮೂಲಕ ಎಲ್ಲ ಮಾಧ್ಯಮಗಳ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಪೇಡ್ ನ್ಯೂಸ್‍ಗಳ ಮೇಲೆ ಕಣ್ಣೀಡಲಾಗಿದೆ ಎಂದು ಎಂಸಿಎಂಸಿ ನೋಡಲ್ ಅಧಿಕಾರಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಹೇಳಿದರು.

         ನಗರದ ವಾರ್ತಾಭವನದಲ್ಲಿ ಎಂಸಿಎಂಸಿ ಸಮಿತಿ ಸದಸ್ಯರಿಗೆ ಹಾಗೂ ಮಾಧ್ಯಮ ಕಣ್ಗಾವಲು ಸಿಬ್ಬಂದಿಗೆ ಮಂಗಳವಾರ ಆಯೋಜಿಸಿದ್ದ ಎಂಸಿಎಂಸಿ ಸಮಿತಿ ಕಾರ್ಯವೈಖರಿ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.“ಪೇಡ್ ನ್ಯೂಸ್” ತಡೆಗಟ್ಟುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ಮಾಧ್ಯಮ ಸಂಬಂಧಿತ ಅರ್ಜಿಗಳು ಹಾಗೂ ಅನುಮತಿಗಳನ್ನು ಸರಾಗವಾಗಿ ನೀಡುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದ್ದು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ, ಕೇಬಲ್ ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದೆ ಎಂದರು.

       ಎಂ.ಸಿ.ಎಂ.ಸಿ. ಸಮಿತಿಗೆ ನೆರವಾಗಲು ದಿನಪತ್ರಿಕೆಗಳನ್ನು ಹಾಗೂ ಸ್ಥಳೀಯ ಕೇಬಲ್ ವಾಹಿನಿಗಳನ್ನು ವೀಕ್ಷಿಸಲು, ಮಾಧ್ಯಮ ಪ್ರಮಾಣೀಕರಣಕ್ಕೆ ಒಟ್ಟು 20 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರವಾರು ಸಹ ಇದೇ ರೀತಿಯ ಸಮಿತಿಗಳನ್ನು ರಚಿಸಲಾಗಿದೆ. ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ವಿದ್ಯುನ್ಮಾನ ವಾಹಿನಿಗಳು, ಮುದ್ರಣ ಮಾಧ್ಯಮ ಹಾಗೂ ಕೇಬಲ್ ವಾಹಿನಿಗಳಲ್ಲಿ ಪ್ರಸಾರವಾಗುವ ಪ್ರತಿ ಕಾರ್ಯಕ್ರಮವನ್ನು ಪರಿಶೀಲಿಸಲಾಗುತ್ತದೆ. ಉಲ್ಲಂಘನೆ ಹಾಗೂ ಸಂಶಯಾಸ್ಪದ ಕಾಸಿಗಾಗಿ ಸುದ್ದಿಗಳು ಪ್ರಸಾರವಾದಲ್ಲಿ ಅವುಗಳನ್ನು ರೆಕಾರ್ಡ್ ಮಾಡಿ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದರು.

          ಮತದಾನಕ್ಕೆ ಇನ್ನೂ ನಾಲ್ಕು ದಿನಗಳಿದೆ ಎಂದ ಸಂದರ್ಭದಲ್ಲಿ ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನುಮತಿ ಅಗತ್ಯವಿಲ್ಲ. ವಿದ್ಯುನ್ಮಾನ ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಸಾರ ಮಾಡುವುದಕ್ಕೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಲೇಬೇಕು. ಒಂದು ವೇಳೆ ನಿರ್ಲಕ್ಷಿಸಿ ಪ್ರಸಾರ ಮಾಡಿದರೇ ವಾಹಿನಿಗಳು ಹಾಗೂ ಸಂಬಂಧಿಸಿದ ಅಭ್ಯರ್ಥಿಗಳ ಮೇಲೆ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಲಿದ್ದಾರೆ ಎಂದರು.

         ಸ್ಥಳೀಯ ಕೇಬಲ್ ವಾಹಿನಿಗಳು ಚುನಾವಣಾ ಜಾಹೀರಾತು ಪ್ರಸಾರಕ್ಕೂ ಮುನ್ನ ರಾಜಕೀಯ ಪಕ್ಷಗಳು/ ಅಭ್ಯರ್ಥಿಗಳು ಎಂ.ಸಿ.ಎಂ.ಸಿ. ಸಮಿತಿಯಿಂದ ಪೂರ್ವಾನುಮತಿ ಪಡೆದುಕೊಂಡಿವೆ ಎಂಬುದನ್ನು ಖಾತ್ರಿಪಡಿಸಕೊಂಡು ಜಾಹೀರಾತು ಪ್ರಸಾರ ಮಾಡಬೇಕು. ಒಂದು ವೇಳೆ ಈ ನಿಯಮ ಉಲ್ಲಂಘಿಸಿದ್ದಲ್ಲಿ ಕೇಬಲ್ ವಾಹಿನಿಗಳ ಉಪಕರಣಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ಜಪ್ತಿ ಮಾಡಿ ಕೇಸ್ ದಾಖಲಿಸಲಿದ್ದಾರೆ ಎಂದರು.

         ಪತ್ರಿಕೆಗಳಲ್ಲಿ ಪ್ರಕಟವಾಗುವ ಚುನಾವಣೆಗೆ ಸಂಬಂಧಿಸಿದ ಜಾಹೀರಾತುಗಳನ್ನು ಗಮನಿಸಿ ಆ ಜಾಹೀರಾತಿಗೆ ತಗಲುವ ವೆಚ್ಚವನ್ನು ಜಾಹೀರಾತು ನೀಡಿದ ಪಕ್ಷ/ ಅಭ್ಯರ್ಥಿಯ ವೆಚ್ಚದ ಖಾತೆಗೆ ಜಮಾ ಮಾಡಿ ಚುನಾವಣೆಯ ಖರ್ಚು –ವೆಚ್ಚ ಶಾಖೆಗೆ ಮಾಹಿತಿ ನೀಡಲಾಗುತ್ತದೆ. ಎಲ್ಲಾ ಪತ್ರಿಕೆಗಳ ವಾಣಿಜ್ಯ ಜಾಹೀರಾತು ದರ ಪಟ್ಟಿ ವಾರ್ತಾ ಇಲಾಖೆ ಬಳಿಯಿದ್ದು, ಅದರನ್ವಯ ಜಾಹೀರಾತು ದರವನ್ನು ನಿಗದಿಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

         ಈ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿ ಸದಸ್ಯರಾದ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಎಂಜನಿಯರ್ ಕಾಳಪ್ಪ ಅವರು ಮಾತನಾಡಿ ಚುನಾವಣಾ ಸಂದರ್ಭದಲ್ಲಿ ನಮ್ಮ ಸಮಿತಿ ಸಿಬ್ಬಂದಿ ವಹಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.ಆಹಾರ ಇಲಾಖೆಯ ಆಹಾರ ನಿರೀಕ್ಷಕ ರವಿಕುಮಾರ್ ರಾಥೋರ್, ಸಣ್ಣ ಉಳಿತಾಯ ಹಾಗೂ ಆಸ್ತ ಋಣ ನಿರ್ವಹಣಾ ಇಲಾಖೆಯ ಅಭಿವೃದ್ಧಿ ಅಧಿಕಾರಿ ಟಿ.ಹೊನ್ನೂರಪ್ಪ, ವಾರ್ತಾ ಇಲಾಖೆಯ ಪ್ರ.ದ.ಸ ವಿ.ಸಿ.ಗುರುರಾಜ್ ಸೇರಿದಂತೆ ಎಂ.ಸಿ.ಎಂ.ಸಿ ತಂಡದ ಸದಸ್ಯರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link