ಮೈತ್ರಿಕೂಟದ ನಡುವೆ ಹೊಂದಾಣಿಕೆ ಆಗದಿದ್ದರೆ ಬಿಜೆಪಿಗೆ ಅನುಕೂಲ

ಬೆಂಗಳೂರು

      ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಡುವೆ ನಿರೀಕ್ಷಿತ ಹೊಂದಾಣಿಕೆ ಸಾಧ್ಯವಾಗದಿದ್ದರೆ ಇದರಿಂದ ಬಿಜೆಪಿಗೆ ಅನುಕೂಲವಾಗಬಹುದು ಎನ್ನುವ ವರದಿ ಮೈತ್ರಿ ಕೂಟದ ನಾಯಕರನ್ನು ಕೆಂಗೆಡಿಸಿದೆ.

        ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಖಾಸಗಿ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಪ್ರಮುಖರು ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಮಾಹಿತಿ ಸಂಗ್ರಹಿಸಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಪ್ರಾಥಮಿಕ ವರದಿ ಸಿದ್ಧಪಡಿಸಿದೆ. ಅದರ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಎರಡಂಕಿ ದಾಟಲಿವೆ. ಆದರೆ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಮಾಹಿತಿ ನೀಡಿದೆ.

        ಮೈತ್ರಿಕೂಟದ ನಡುವೆ ಸಾಧಿತವಾದ ಹೊಂದಾಣಿಕೆ ಪ್ರಾಮಾಣಿಕವಾಗಿ ಕಾರ್ಯಗತವಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಮೈತ್ರಿ ಸಾಧನೆಯಿಂದ ಅಧರ್ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬ ಕನಸು ಭಗ್ನವಾಗುವ ಲಕ್ಷಣಗಳಿವೆ ಎಂದು ಹೇಳಿದೆ.

       ಮೈತ್ರಿಕೂಟ ಅದ್ಭುತ ಯಶಸ್ಸು ಸಾಧಿಸಿದರೆ ಮುಂದಿನ ನಾಲ್ಕು ವರ್ಷಗಳ ಕಾಲ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮುಂದುವರಿಯಲಿದೆ. ಹಾಗೇನಾದರೂ ತಮ್ಮ ರಾಜಕೀಯ ಭವಿಷ್ಯ ಕೊನೆಗೊಳ್ಳಲಿದೆ ಎಂಬ ಆತಂಕ ಹಲವು ಕಾಂಗ್ರೆಸ್ ನಾಯಕರನ್ನು ಕಾಡುತ್ತಿದ್ದು, ಈ ಹಿನ್ನೆಲೆಯಲಿ ಬಹುತೇಕ ಎಲ್ಲ ಕಡೆ ಜೆಡಿಎಸ್‍ಗೆ ಉಲ್ಟಾ ಒಡೆಯಲು ಸಜ್ಜಾಗಿದ್ದಾರೆ.

        ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಾಗಿ ಗೆದ್ದರೆ ಸಹಜವಾಗಿಯೇ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚಾಗುತ್ತದೆ. ಆದರೆ ಹಾಗಾಗುವುದು ಜೆಡಿಎಸ್‍ನ ಸ್ಥಳೀಯ ಕಾರ್ಯಕರ್ತರಿಗೆ ಹಾಗೂ ಜೆಡಿಎಸ್ ಪಕ್ಷದ ಮೂಲ ಮತಬ್ಯಾಂಕ್‍ಗೆ ಇಷ್ಟವಿಲ್ಲ. ಆದರೂ ಬಹಿರಂಗ ಮೈತ್ರಿಯ ಕಾರಣಕ್ಕಾಗಿ ಕೆಲವರು ಬೆಂಬಲ ನೀಡಿದರೂ, ಒಟ್ಟಾರೆಯಾಗಿ ಆದ್ದರಿಂದ ಕಾಂಗ್ರೆಸ್‍ಗೆ ಲಾಭವಾಗುವುದು ಕಡಿಮೆ. ಚಿಕ್ಕಬಳ್ಳಾಪುರ, ಮೈಸೂರಿನಲ್ಲಿ ಜೆಡಿಎಸ್ ಒಳ ಏಟು ನೀಡುವ ಆತಂಕ ಕಾಂಗ್ರೆಸ್‍ನಲ್ಲಿದೆ.

         ವಾಸ್ತವವಾಗಿ ಪ್ರಧಾನಿ ನರೇಂದ್ರಮೋದಿ ಅವರ ಅಲೆ ಕರ್ನಾಟಕದಲ್ಲಿ ಇಲ್ಲ. ಈ ಅಲೆ ಸಾಮಾಜಿಕ ಜಾಲತಾಣದಲ್ಲಿ ಕಾಣುತ್ತಿದೆಯಾದರೂ, ಅದಕ್ಕೆ ಪ್ರತಿ ಅಲೆಯೂ ಸಾಮಾಜಿಕ ಜಾಲತಾಣದಲ್ಲೇ ಸೃಷ್ಟಿಯಾಗಿದೆ.

        ಮತ್ತೊಂದೆಡೆ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಮೂಲೆಗುಂಪು ಮಾಡಲಿದೆ ಎಂಬ ಮಾತು ಲಿಂಗಾಯತ ಸಮುದಾಯದ ಮೇಲೆ ಪ್ರಭಾವ ಬೀರಿದೆಯಾದರೂ ಸ್ವತಃ ಯಡಿಯೂರಪ್ಪ ಅವರು ಅಂತಹ ಅಪಾಯವೇನೂ ಇಲ್ಲ ಎಂದು ಸಮುದಾಯಕ್ಕೆ ಸಂದೇಶ ರವಾನಿಸಿರುವುದರಿಂದ ಇದು ಬಿಜೆಪಿಗೆ ಲಾಭವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

        ಸಾಲದೆಂಬಂತೆ ಯಡಿಯೂರಪ್ಪ ಅವರನ್ನು ಭವಿಷ್ಯದ ಮುಖ್ಯಮಂತ್ರಿ ಹುದ್ದೆಗೆ ತಂದು ಕೂರಿಸಲು ಕಾಂಗ್ರೆಸ್‍ನ ಪ್ರಭಾವಿ ನಾಯಕರೇ ಮಾಸ್ಟರ್ ಪ್ಲಾನ್ ರೂಪಿಸಿದ್ದು ಜೂನ್ ವೇಳೆಗೆ ಇದು ಅನುಷ್ಠಾನವಾಗುವ ಸಾಧ್ಯತೆಗಳು ಸಹ ಕಾಣಿಸಿಕೊಂಡಿವೆ.

         ಹೀಗಾಗಿ ಬಿಜೆಪಿ ಹೈಕಮಾಂಡ್ ಅಷ್ಟು ಸುಲಭವಾಗಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ ಲಿಂಗಾಯತ ಸಮುದಾಯದಲ್ಲೂ ಮೂಡುತ್ತಿದ್ದು, ಪರಿಣಾಮವಾಗಿ ಆ ಸಮುದಾಯ ಬಿಜೆಪಿಗೆ ತಿರುಗೇಟು ಒಡೆಯದೇ ಇರಲು ನಿರ್ಧರಿಸಿದೆ.

         ಹೀಗಾಗಿ ಮೈತ್ರಿಕೂಟದ ಅಂಗಪಕ್ಷಗಳು ಕೆಲ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ಕಡೆ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ಮಾನಸಿಕವಾಗಿ ಸಜ್ಜಾಗಿವೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಬಹುದೊಡ್ಡ ಲಾಭ ಪಡೆಯುವ ಶಕ್ತಿಯಾಗಿ ಬಿಜೆಪಿ ಹೊರಹೊಮ್ಮಬಹುದು ಎನ್ನುವ ಮಾಹಿತಿ ಮೈತ್ರಿ ಪಕ್ಷಗಳಲ್ಲಿ ಆತಂಕ ಸೃಷ್ಟಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link