ದಾವಣಗೆರೆ:
ಮಾನವ ಹಕ್ಕುಗಳ ಜಾಗೃತಿಯ ಕೊರತೆ ಕಾರಣಕ್ಕಾಗಿ ಜನರು ಗೌರವಯುತ ಬದುಕು ನಡೆಸುವುದು ಇಂದಿಗೂ ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್ ಕುಮಾರ್ ದತ್ತ ಕಳವಳ ವ್ಯಕ್ತಪಡಿಸಿದರು.
ಸಮೀಪದ ದಾವಣಗೆರೆ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ‘ಮಾನವ ಹಕ್ಕುಗಳು-ಸಮಕಾಲಿನ ಜಗತ್ತಿನ ವಿಚಾರಗಳು ಮತ್ತು ಪ್ರವೃತ್ತಿಗಳು’ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಯುವಜನತೆಯಲ್ಲಿ ಮಾನವ ಹಕ್ಕುಗಳ ಅಗತ್ಯತೆಯ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದ್ದು, ಇವುಗಳ ಬಗ್ಗೆ ಜಾಗೃತಿ ಇಲ್ಲದ ಕಾರಣಕ್ಕಾಗಿ ಇಂದಿಗೂ ಮನುಷ್ಯ ಪರಸ್ಪರ ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.ಶಾಂತಿಯುತ ಜೀವನಕ್ಕೆ ಸಮಾನತೆಯೇ ಅಡಿಪಾಯ, ಆ ಮೂಲಕ ಸಹಬಾಳ್ವೆ ಸಾಧಿಸುವ ಮನಸ್ಥಿತಿ ನಮ್ಮಲ್ಲಿ ಮೂಡಬೇಕಾಗಿದೆ. ‘ವಸುದೈವ ಕುಟುಂಬಕಂ’ ಎಂಬ ಪರಿಕಲ್ಪನೆಯಲ್ಲಿರುವ ನಾವು ಎಲ್ಲರನ್ನೂ ಸಮಾನವಾಗಿ ಕಾಣಬೇಕು, ತಾರತಮ್ಯ ಇಲ್ಲದ ಮನಸ್ಥಿತಿಯೇ ಸಮಾನತೆಯಾಗಿದ್ದು ಅದನ್ನು ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಸಮಾನತೆ, ಶಿಕ್ಷಣ, ಅಭಿವ್ಯಕ್ತಿ, ಉದ್ಯೋಗ, ಧರ್ಮ ಪರಿಪಾಲನೆ ಹೀಗೆ ಪ್ರತಿ ವಿಷಯದ ಆಯ್ಕೆಯಲ್ಲೂ ನಮಗೆ ಸಂವಿಧಾನದತ್ತವಾಗಿ ಸ್ವಾತಂತ್ರ್ಯವಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕೊನೆಯಾಗಬೇಕೆಂದು ಆಶಿಸಿದರು.
ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಮಾನವ ಹಕ್ಕುಗಳ ಬಗ್ಗೆ ಅವುಗಳ ಪ್ರಸ್ತುತತೆಯ ಬಗ್ಗೆ ಜಾಗೃತರಾಗಬೇಕೆಂದು ಸಲಹೆ ನೀಡಿದರು.
ದಾವಣಗೆರೆ ವಿವಿ ಕುಲಪತಿ ಪ್ರೊ.ಎಸ್.ವಿ ಹಲಸೆ ಮಾತನಾಡಿ, ಮಾನವ ಹಕ್ಕುಗಳು ನಮ್ಮ ಸರ್ವತೋಮುಖ ಅಭಿವೃದ್ಧಿಗಾಗಿ ಇದ್ದರೂ ನಾವು ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಮುನ್ನ ನಮ್ಮ ಕರ್ತವ್ಯಗಳನ್ನು ಮರೆಯಬಾರದು. ಮಾನವ ಹಕ್ಕುಗಳ ಬಗೆಗಿನ ಅರಿವನ್ನು ಹೊಂದುವ ಮೂಲಕ ಅವುಗಳ ಅಗತ್ಯತೆಯನ್ನು ಸಮಾಜಕ್ಕೆ ತಿಳಿಸುವ ಕಾರ್ಯವಾಗಬೇಕು. ಆಗ ಮಾತ್ರ ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಸಾಧ್ಯವಾಗಲಿದೆ ಎಂದರು.
ಕುಲಸಚಿವ ಪ್ರೊ.ಪಿ ಕಣ್ಣನ್ ಮಾತನಾಡಿ, ನಮ್ಮ ಪರಿಸರದಲ್ಲಿ ನಾವು ಮೂರು ವರ್ಗಗಳಲ್ಲಿ ಜೀವರಾಶಿಗಳನ್ನು ವಿಭಾಗೀಕರಿಸಬಹುದು. ಪ್ರಾಣಿ-ಪಕ್ಷಿ, ಮರ-ಗಿಡ ಹಾಗೂ ಮಾನವ ಸಂಕುಲ ಸೇರಿದಂತೆ ಎಲ್ಲ ಜೀವರಾಶಿಗಳಿಗೂ ತಮ್ಮದೇ ಆದ ಹಕ್ಕುಗಳಿವೆ. ಬೇರೆಯವರ ಹಕ್ಕುಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ನಡೆದುಕೊಂಡಾಗ ಮಾತ್ರ ಸಹಬಾಳ್ವೆ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಯಚೂರು ವಿವಿ ವಿಶೇಷ ಅಧಿಕಾರಿ .ಮುಜಾಫರ್ ಅಸ್ಸಾದಿ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ . ಕೆ.ಬಿ.ರಂಗಪ್ಪ ಇತರರಿದ್ದರು.