ತುರುವೇಕೆರೆ
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಬೆಂಗಳೂರು ಹಾಗೂ ತಾಲ್ಲೂಕು ನ್ಯಾಯವಾದಿಗಳ ಸಂಘ, ತುರುವೇಕೆರೆ ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಕಾನೂನು ಕಾರ್ಯಾಗಾರ ಕಾರ್ಯಕ್ರಮವನ್ನು ಪಟ್ಟಣದ ವಕೀಲರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ನಾವುಗಳು ಅದರ ಬೆನ್ನತ್ತಬೇಕಷ್ಟೆ. ನ್ಯಾಯಾಧೀಶರು ಮತ್ತು ವಕೀಲರ ಮಧ್ಯೆ ಸಂಬಂಧ ಬೆಸೆಯುವ ಕಾರ್ಯಾಗಾರ ಇದಾಗಿದ್ದು 193 ವಕೀಲರ ಸಂಘಗಳು ಒಗ್ಗೂಡಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ವಕೀಲರ ರಕ್ಷಣೆ, ಮ್ಯಾಚಿಂಗ್ ಫಂಡ್, ಗುಂಪು ವಿಮೆ ಸೇರಿದಂತೆ ವಕೀಲರ ಆಗುಹೋಗುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಘ ಒತ್ತು ನೀಡುತ್ತಿದೆ. ಇಂತಹ ಕಾರ್ಯಾಗಾರಗಳಿಂದ ಹೊಸ ವಕೀಲರುಗಳಿಗೆ ಅನುಕೂಲವಾಗಲಿದ್ದು ಇದರ ಪ್ರಯೋಜನ ಹೆಚ್ಚು ಪಡೆದುಕೊಳ್ಳಿ ಎಂದರು.
ಸಿವಿಲ್ ನ್ಯಾಯಾಧೀಶರಾದ ವಿ.ವಿಜೇತ್ ಅವರು ಮಾತನಾಡಿ, ಕಕ್ಷಿದಾರ ತನ್ನ ಮಾನ ಪ್ರಾಣಗಳೆರಡನ್ನೂ ನೀಡಿದ ಅವರಿಗೆ ನಾವುಗಳು ಕಾನೂನಿನಡಿಯಲ್ಲಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕಾದ್ದು ನಮ್ಮಗಳ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ನಾವು ನಿಷ್ಟೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರುಗಳಾದ ಎಸ್.ಬಸವರಾಜು, ಎಂ.ಎನ್. ಮಧುಸೂದನ್ ಸಂಘದಿಂದ ದೊರೆಯುವ ಅನುಕೂಲಗಳ ಬಗ್ಗೆ ತಿಳಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸಿದ್ದರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರೇಶ್‍ಬಾಬು, ನಾಗರಾಜು ಉಪಸ್ಥಿತರಿದ್ದರು. ವಕೀಲ ಧನಪಾಲ್ ಸ್ವಾಗತಿಸಿ, ಕೆ.ಬಿ.ಶೇಖರ್ ನಿರೂಪಿಸಿ, ದೇವರಾಜು ವಂದಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ನಟರಾಜು, ಉಪಾಧ್ಯಕ್ಷ ಕೆ.ನಾಗೇಶ್, ಖಜಾಂಚಿ ನಾಗಭೂಷಣ್, ಗಂಗರಂಗಯ್ಯ, ಹಿರಿಯ ವಕೀಲರುಗಳಾದ ಶಿವಕುಮಾರಸ್ವಾಮಿ, ಡಿ.ಟಿ.ರಾಜಶೇಖರ್, ಚನ್ನಕೇಶವಸ್ವಾಮಿ, ನಂಜೇಗೌಡ, ಉದಯಶಂಕರ್, ಶಿವಮೂರ್ತಿ, ಪ್ರಸನ್ನ, ನಂದೀಶ್, ನವೀನ್, ಉಮೇಶ್, ಶೇಖರ್ ಸೇರಿದಂತೆ ಇತರರು ಇದ್ದರು. ಮೂರು ದಿನಗಳವರೆಗೆ ಕಾರ್ಯಾಗಾರ ನಡೆಯಲಿದ್ದು ಅನೇಕ ಸಂಪನ್ಮೂಲ ವ್ಯಕ್ತಿಗಳಿಂದ ಅನೇಕ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಯಲಿವೆ.