22 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ : ಆರ್.ಅಶೋಕ್ ವಿಶ್ವಾಸ

ಚಿತ್ರದುರ್ಗ;

       ರಾಜ್ಯದ 22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಭಾರತೀಯ ಜನತಾ ಪಾರ್ಟಿ ಗುರಿ ಹೊಂದಿದ್ದು, ಈ ಗುರಿಯನ್ನು ದಾಟಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ

      ಚಿತ್ರದುರ್ಗದ ಜೆಸಿಆರ್ ಬಡಾವಣೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಚುನಾವಣೆಯನ್ನು ದೇಶದ ಹಿತಾದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲ್ಲುವ ಭರವಸೆ ಮೂಡಿದೆ ಎಂದರು

        ನರೇಂದ್ರ ಮೋದಿ ಅವರು ಈ ದೇಶದ ಪ್ರಬಲ ನಾಯಕರಾಗಿದ್ದು, ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕಾಗಿ ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ನಾವು ಕಾರ್ಯತಂತ್ರ ರೂಪಿಸಿದ್ದೇವೆ. ಚಿತ್ರದುರ್ಗದಲ್ಲಿಯೂ ನಮ್ಮ ಅಭ್ಯರ್ಥಿ ಎ.ನಾರಾಯಣಸ್ವಾಮಿ ಅವರು ಗೆಲ್ಲುತ್ತಾರೆ ಎಂದರು

         ಮಂಡ್ಯ, ಹಾಸನ ಮತ್ತು ತುಮಕೂರು ಈ ಮೂರು ಕ್ಷೇತ್ರಗಳಲ್ಲಿ ಹೆಚ್.ಡಿ.ದೇವೇಗೌಡ ಮತ್ತು ಅವರ ಮೊಮ್ಮಕ್ಕಳು ಸ್ಪರ್ದಿಸಿದ್ದಾರೆ. ಮಂಡ್ಯದಲ್ಲಿ ತೀವ್ರ ಸ್ಪರ್ದೆ ಇದೆ. ಮಂಡ್ಯದಲ್ಲಿ ಸುಮಲತಾ ಅವರಿಗೆ ನಾವು ಬೆಂಬಲ ಘೋಷಿಸಿದ್ದೇವೆ. ಈ ಮೂರು ಕ್ಷೇತ್ರಗಳಲ್ಲಿ ನಮ್ಮ ಪರವಾದ ವಾತಾವರಣ ನಿರ್ಮಾಣವಾಗಿದೆ ಎಂದರು

         ಮಂಡ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಭಯ ಹುಟ್ಟಿದೆ. ಈ ಕಾರಣಕ್ಕಾಗಿ ಸುಮಲತಾ ಹೆಸರಿನಲ್ಲಿ ಮೂರು-ನಾಲ್ಕು ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. ಸುಮಲತಾ ಅಂಬರೀಷ್ ಅವರಿಗೆ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ. ಇಲ್ಲಿ ಒಬ್ಬ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರುಗಳು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಒಬ್ಬ ಮಹಿಳೆ ಎದುರಿಸುತ್ತಿದ್ದಾರೆ ಎಂದರು

       ಬೆಂಗಳೂರಿನ ಲೋಕಸಭಾ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಲು ನಾವು ಶಿಫಾರಸ್ಸು ಮಾಡಿದ್ದು, ಪಕ್ಷದ ವರಿಷ್ಟರು ಬೇರೆಯವರಿಗೆ ಟಿಕೆಟ್ ಕೊಟ್ಟಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ದರಾಗಬೇಕಾಗಿದ್ದು, ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಶ್ರಮಿಸುತ್ತೇವೆ. ತೇಜಸ್ವಿನಿ ಅವರ ಜೊತೆ ನಾನು ಸೇರಿದಂತೆ ಮುಖಂಡರು ಮಾತನಾಡಿದ್ದೇವೆ. ಬಹುತೇಕ ಸಮಸ್ಯೆ ಬಗೆಹರಿದಿದ್ದು, ಅವರು ಸಹ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದರು

     ರಾಜ್ಯ ಸಮ್ಮಿಶ್ರ ಸರ್ಕಾರ ಗೊಂದಲದ ಗೂಡಾಗಿರುವುದರಿಂದ ಬಂಡಾಯದ ಕೂಗು ಎದ್ದಿದೆ. ಕಾಂಗ್ರೆಸ್ ಭಾವುಟ ಹಿಡಿದು ಕಾರ್ಯಕರ್ತರು  ಜೆಡಿಎಸ್.ಪರ ಪ್ರಚಾರ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಎರಡು ಪಕ್ಷಗಳ ಮುಖಂಡರುಗಳು ಹೊಂದಾಣಿಕೆ ಮಾಡಿಕೊಂಡಿದ್ದಾರೆಯೇ ವಿನಃ ಕಾರ್ಯಕರ್ತರಿಗೆ ಯಾರಿಗೂ ಮೈತ್ರಿ ಇಷ್ಟವಿಲ್ಲ ಎಂದರು

7 ಕಡೆ ಮೋದಿ ರ್ಯಾಲಿ;

       ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಳು ಕಡೆ ರ್ಯಾಲಿ ನಿಗಧಿಯಾಗಿದೆ. ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಏಪ್ರಿಲ್ 8ರಂದು ದಿನಾಂಕ ನಿಗಧಿಯಾಗಿದೆ. ಏಪ್ರಿಲ್ 10,11 ಮತ್ತು 12ರಂದು ಮೂರು ದಿನಗಳ ಪ್ರವಾಸ ಇದ್ದು, ಇನ್ನು ಸ್ಥಳ ನಿಗಧಿಯಾಗಬೇಕಿದೆ

      ಚಿತ್ರದುರ್ಗದಲ್ಲಿ ನಡೆಯುವ ಮೋದಿ ಅವರ ರ್ಯಾಲಿಗೆ ಸುಮಾರು 1.50 ಲಕ್ಷದಿಂದ ಎರಡು ಲಕ್ಷದಷ್ಟು ಜನ ಸೇರುವ ನಿರೀಕ್ಷೆ ಇದೆ. ರ್ಯಾಲಿಯನ್ನು ಯಶಸ್ವಿಗೊಳಿಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಶಾಸಕರುಗಳು ಮತ್ತು ಮುಖಂಡರುಗಳ ಜೊತೆಗೂ ಚರ್ಚೆ ಮಾಡಲಾಗುತ್ತಿದೆ ಎಂದು ಆರ್.ಅಶೋಕ್ ತಿಳಿಸಿದರು

       ಸ್ವಚ್ಚ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವ ಪ್ರಧಾನಿ ಮೋದಿರವರು ಚೀನ ಹಾಗೂ ಪಾಕಿಸ್ತಾನ ಉಗ್ರರ ವಿರುದ್ದ ಕೈಗೊಂಡ ದಿಟ್ಟ ಕ್ರಮ ದೇಶದ ಜನರಿಗೆ ಮೆಚ್ಚಿಗೆಯಾಗಿರುವುದರಿಂದ ಎಲ್ಲೆಡೆ ಮೋದಿ ಅಲೆ ಎದ್ದಿದೆ. 31 ರಂದು ದೇಶದ 543 ಲೋಕಸಭಾ ಕ್ಷೇತ್ರಗಳಲ್ಲಿಯೂ ಮೋದಿರವರು ನೇರವಾಗಿ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಜನತೆಯನ್ನು ಕುರಿತು ಮಾತನಾಡಲಿದ್ದಾರೆ ಎಂದರು

      ಬಿ.ಎಸ್.ಯಡಿಯೂರಪ್ಪನವರ ಜೊತೆ ಅವರ ಪುತ್ರ ಬಿ.ವೈ.ರಾಘವೇಂದ್ರ ಸುಮಾರು ಇಪ್ಪತ್ತು ವರ್ಷಗಳ ಕಾಲ ಚುನಾವಣೆಯಲ್ಲಿ ಏಜೆಂಟರಾಗಿ ಸುತ್ತಾಡಿ ಪಕ್ಷಕ್ಕಾಗಿ ದುಡಿದಿರುವುರಿಂದ ಲೋಕಸಭಾ ಸದಸ್ಯರಾದರು. ಅದೇ ಜೆಡಿಎಸ್.ನ ಹೆಚ್.ಡಿ.ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್, ನಿಖಿಲ್ ಇವರುಗಳು ಒಂದು ದಿನವೂ ಪಕ್ಷದಲ್ಲಿ ಕಾಣಿಸಿಕೊಂಡವರಲ್ಲ. ದಿಢೀರನೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರೆ ಮತದಾರರಾದರೂ ಹೇಗೆ ಸ್ವೀಕರಿಸಿಯಾರು ಎಂದು ಪ್ರಶ್ನಿಸಿದರು.

       ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಅಭ್ಯರ್ಥಿ ಅನೇಕಲ್ ನಾರಾಯಣಸ್ವಾಮಿ, ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap