ಚಿತ್ರದುರ್ಗ:
ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಿಲ್ಲೆಯ ಎಲ್ಲ ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹದ ದುಷ್ಪರಿಣಾಮಗಳು, ಕಾನೂನು ಹಾಗೂ ಮಕ್ಕಳ ಹಕ್ಕುಗಳ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಈ ಕುರಿತ ಕಿರು ಹೊತ್ತಿಗೆಯನ್ನು ಸಿದ್ಧಪಡಿಸಿ ಎಲ್ಲ ಶಾಲಾ ಮಕ್ಕಳಿಗೆ ವಿತರಿಸಬೇಕು ಎಂದು ಹೇಳಿದರು
ಶಿಕ್ಷಕರು ಬಾಲ್ಯ ವಿವಾಹದ ದುಷ್ಪರಿಣಾಮಗಳು, ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು, ಮಕ್ಕಳ ಹಕ್ಕುಗಳ ಬಗ್ಗೆ ಪುಸ್ತಕದಲ್ಲಿರುವ ಅಂಶಗಳನ್ನು ಮಕ್ಕಳಿಗೆ ಬೋಧಿಸಿದರೆ ಮಕ್ಕಳಲ್ಲಿ ಅರಿವು ಮೂಡುತ್ತದೆ. ಎಲ್ಲ ಶಾಲೆಯ ಕಾಂಪೌಂಡ್‍ಗಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕಾನೂನು, ಶಿಕ್ಷೆ, ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಮಕ್ಕಳ ಸಹಾಯವಾಣಿ ಹೀಗೆ ಎಲ್ಲ ವಿವರಗಳನ್ನು ಗೋಡೆ ಬರಹದ ಮೇಲೆ ಬರೆಯಿಸಬೇಕು.
ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂಬ ಫಲಕ ಇರಬೇಕು. ಅಲ್ಲದೆ ಶಾಲಾ ಕೊಠಡಿಯೊಳಗೂ ಮಾಹಿತಿ ಫಲಕ ಇರಬೇಕು. ಶಾಲೆಯ ಪ್ರಾರ್ಥನೆ ಸಂದರ್ಭದಲ್ಲಿ ಮಕ್ಕಳಿಂದ ಬಾಲ್ಯ ವಿವಾಹವಾಗುವುದಿಲ್ಲ ಎಂಬ ಪ್ರತಿಜ್ಞಾ ವಿಧಿ ಸ್ವೀಕಾರದಂತಹ ಕಾರ್ಯಕ್ರಮ ತಪ್ಪದೆ ನಡೆಯಬೇಕು, ಇದರಿಂದ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯವಿದೆ ಎಂದು ಡಿಡಿಪಿಐ ಅಂಥೋನಿ ಅವರಿಗೆ ತಿಳಿಸಿದರು.
ಎಲ್ಲ ಗ್ರಾಮಗಳಲ್ಲಿ ಕಡ್ಡಾಯವಾಗಿ ಮಕ್ಕಳ ಹಕ್ಕುಗಳ ಸಭೆಗಳು, ತಾಲ್ಲೂಕು ಮಟ್ಟದ ಸಮಿತಿ ಸಭೆಗಳು, ಜಾಗೃತಿ ಕಾರ್ಯಕ್ರಮಗಳನ್ನು ಆಯಾ ಸಿಡಿಪಿಒ ಗಳು ಕಡ್ಡಾಯವಾಗಿ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಅಧಿಕಾರಿಗಳಿಗೆ ತಾಕೀತು
ಕೆಲವು ಹಳ್ಳಿಗಳಲ್ಲಿ ಪೋಷಕರು ಬಡತನ ಹಾಗೂ ಆರ್ಥಿಕ ಪರಿಸ್ಥಿತಿಯ ನೆಪವೊಡ್ಡಿ ಜಾತ್ರೆಗಳು ನಡೆಯುವ ಸಂದರ್ಭದಲ್ಲಿ ಬಾಲ್ಯ ವಿವಾಹಗಳನ್ನು ಮಾಡುತ್ತಾರೆ. ಅಧಿಕಾರಿಗಳು ಜಾತ್ರೆಗಳು ನಡೆಯುವಂತಹ ಸಂದರ್ಭಗಳಲ್ಲಿ ಅಂತಹ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದುಕೊಳ್ಳುತ್ತಿರಬೇಕು. ದೇವಸ್ಥಾನ, ಮಸೀದಿ, ಮಠ, ಕಲ್ಯಾಣ ಮಂಟಪಗಳಲ್ಲಿ ‘ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ’ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಬರಹಗಳು, ಚಿತ್ರಗಳ ಸಹಿತ ಅಳವಡಿಸಬೇಕು ಎಂದು ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತಾಕೀತು ಮಾಡಿದರು.
ಶಾಲೆ ಬಿಡುವ ಮಕ್ಕಳ ಮಾಹಿತಿ
ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 2018-19 ನೇ ಸಾಲಿನಲ್ಲಿ 54 ಪ್ರಕರಣಗಳು, 2019-20 ರಲ್ಲಿ ಈವರೆಗೆ 24 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಲು ಕಾರಣವೇನು ಎಂದು ಅಧಿಕಾರಿಗಳು ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು
ಮಕ್ಕಳು 10 ನೇ ತರಗತಿ ಮುಗಿದ ಮೇಲೆ ಮುಂದಿನ ವಿದ್ಯಾಭ್ಯಾಸಕ್ಕೆ ದಾಖಲಾದರೆ ಇಲ್ಲವೆ, ಎಲ್ಲಿ ವ್ಯಾಸಂಗ ಮಾಡುತ್ತಾರೆ ಅಥವಾ ಮನೆಯಲ್ಲಿಯೇ ಉಳಿದಿದ್ದಾರೆಯೇ ಎಂಬ ಅಂಕಿ-ಅಂಶಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಹೀಗಾಗಿ 15 ರಿಂದ 16 ವರ್ಷದ ಮಕ್ಕಳು ಮುಂದಿನ ಶಿಕ್ಷಣಕ್ಕೆ ದಾಖಲಾಗಿರುವ ಬಗ್ಗೆ ಅಂಕಿ-ಅಂಶಗಳನ್ನು ಪಡೆದುಕೊಂಡು, ಶಿಕ್ಷಣದಿಂದ ಹೊರಗುಳಿಯುವವರ ಬಗ್ಗೆ ಮಾಹಿತಿಯನ್ನು ಸಿದ್ಧಪಡಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಈ ಮಾಹಿತಿಯನ್ನು ಹದಿನೈದು ದಿನಗಳ ಒಳಗಾಗಿ ಸಂಗ್ರಹಿಸಿ ಸಲ್ಲಿಸುವಂತೆ ಡಿಡಿಪಿಐ ಅವರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ ಮಾಡದಕೆರೆ, ಮಾದಿಹಳ್ಳಿ, ದುಗ್ಗಾವರ, ಅತ್ತಿಘಟ್ಟ, ಮೆಟ್ಟಿನಹೊಳೆ ಮುಂತಾದೆಡೆ ಹೆಚ್ಚಿನದಾಗಿ ಬಾಲ್ಯ ವಿವಾಹಗಳು ಆಗುತ್ತಿದ್ದು, ಯಾವ ಜನಾಂಗದಲ್ಲಿ ಹೆಚ್ಚು ಬಾಲ್ಯವಿವಾಹಗಳು ಆಗುತ್ತಿವೆ? ಕಾರಣಗಳನ್ನು ಕಂಡುಕೊಂಡಿದ್ದೀರ? ತಡೆಗಟ್ಟಲು ಕೈಗೊಂಡ ಕ್ರಮಗಳೇನು? ಸಮುದಾಯವರೊಂದಿಗೆ ಸಭೆ ನಡೆಸಿ, ಅವರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಿದ್ದೀರಾ? ಎಂದು ಹೊಸದುರ್ಗ ಸಿಡಿಪಿಓ ಅಧಿಕಾರಿಯನ್ನು ಕೇಳಿದರು.
ಇದಕ್ಕೆ ಸಿಡಿಪಿಓ ಸಮರ್ಪಕ ಉತ್ತರ ನೀಡದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಅವರು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿಯೇ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲೆಯಲ್ಲಿ ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ರಾಜ್ಯ ಮಟ್ಟದ ಸಭೆಗಳಲ್ಲಿ ನಾವು ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಮಸ್ಯೆ, ಬಾಲ್ಯ ವಿವಾಹ ನಂತಹ ವಿಷಯಗಳಲ್ಲಿ ಜಿಲ್ಲೆ ಅತ್ಯಂತ ಕಳಪೆ ಸಾಧನೆ ತೋರುತ್ತಿದೆ. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಹೋದರೆ, ಹಿಂದುಳಿದಿರುವ ಜಿಲ್ಲೆ ಅಭಿವೃದ್ಧಿಯಾಗುವುದು ಯಾವಾಗ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಮಾತೃಶ್ರೀ, ಮಾತೃ ವಂದನಾ ಯೋಜನೆ :
ಮಾತೃಶ್ರೀ ಯೋಜನೆಯಡಿಯಲ್ಲಿ ಗರ್ಭಣಿ ಮಹಿಳೆಯರಿಗೆ 6 ಸಾವಿರ ರೂ. ಹಾಗು ಮಾತೃ ವಂದನಾ ಯೋಜನೆಯಡಿಯಲ್ಲಿ 5 ಸಾವಿರ ರೂ. ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಿದ್ದು, ಫಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸಹಾಯಧನ ಜಮಾ ಆಗಲಿದೆ. ಜಿಲ್ಲೆಯಲ್ಲಿ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ವಿತರಿಸಬೇಕಿದೆ. ಆದರೆ ಅಧಿಕಾರಿಗಳು ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಸೌಲಭ್ಯ ಕಲ್ಪಿಸುವಲ್ಲಿ, ವಿಫಲರಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು
ಈ ಯೋಜನೆಗಳನ್ನು ತಲುಪಿಸುವಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಚಿತ್ರದುರ್ಗ ಜಿಲ್ಲೆ ಹಿಂದುಳಿದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ದಿಸೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ತಾಕೀತು ಮಾಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾನಾಯಕ್ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಸುಮಾರು 24 ಸಾವಿರ ಗರ್ಭಿಣಿಯರು ಇದ್ದಾರೆ. ಯೋಜನೆಗಳಡಿ ಸೌಲಭ್ಯ ದೊರಕಿಸಲು ಇಲಾಖೆ ಕಾರ್ಯ ಕೈಗೊಳ್ಳುತ್ತಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಎಂ.ಬಿ. ನಂದಗಾವಿ, ಡಿಡಿಪಿಐ ಎ. ಜೆ. ಆಂಥೋನಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಸೇರಿದಂತೆ ಸಿಡಿಪಿಒ ಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
