ತುಮಕೂರು:
ನಮ್ಮ ಭಾರತದ ಸಂವಿಧಾನದಲ್ಲಿ ಅನುಚ್ಛೇದ 19 ರ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆ ಇದ್ದು ಭಾರತದ ಸರ್ವೋಚ್ಛ ನ್ಯಾಯಾಲಯವು ಅನೇಕ ಪ್ರಕರಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಕ್ಷಣೆ ಒದಗಿಸಿದೆ ಎಂದು ಆರ್.ರಾಮಕೃಷ್ಣ ವ್ಯಾಖ್ಯಾನಿಸಿದರು.
ಬಂಡಾಯ ಸಾಹಿತ್ಯ ಸಂಘನಟನೆ ವತಿಯಿಂದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ಆಯೋಜಿಸಿದ್ದ ಸೈದ್ಧಾಂತಿಕ ಸಂವಿಧಾನ ಸಮಾವೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಸಂವಿಧಾನದ ಅನುಚ್ಛೇದದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತ್ಯೇಕವಾಗಿ ಹೇಳಿಲ್ಲ. ಅದರ ಉಚ್ಛಾರ ಸಹ ಇಲ್ಲ. ಆದರೆ ಆ ಅನುಚ್ಛೇದದ ಒಳಗೆ ಅಭಿವ್ಯಕ್ತಿ ಸ್ವಾತಂತ್ರ್ಯವೂ ಅಡಗಿದೆ. ಇದನ್ನು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಉಲ್ಲೇಖಿಸಿದೆ ಎಂದರು. ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಬಿಡಿಬಿಡಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಅದರ ಬಳಕೆ ಹೆಚ್ಚಾಗುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಂತೂ ಅತಿ ಹೆಚ್ಚಿನ ಬಳಕೆ ಮತ್ತು ಧಕ್ಕೆಯಾಗುತ್ತಿದೆ ಎಂದು ಉಲ್ಲೇಖಿಸಿದರು.
ದೇಶದ್ರೋಹದ ಬಗ್ಗೆ ಹಲವರು ಹಲವು ರೀತಿಯ ವ್ಯಾಖ್ಯಾನ ಮಾಡುತ್ತಾರೆ. ಇದೇ ವಿಷಯ ಇಟ್ಟುಕೊಂಡು ಅನೇಕರು ಸುಪ್ರೀಂಕೋರ್ಟ್‍ವರೆಗೂ ಹೋಗಿದ್ದಾರೆ. ಆದರೆ ಯಾವುದು ದೇಶದ್ರೋಹ ಎಂಬುದನ್ನು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂಬುದನ್ನು ಹಲವು ಪ್ರಕರಣಗಳ ಉದಾಹರಣೆ ಸಹಿತ ವಿವರಿಸಿದರು.
ನಮ್ಮ ಕರ್ನಾಟಕದಲ್ಲಿಯೇ ಹಲವು ಲೇಖಕರು ಅಭಿವ್ಯಕ್ತಿ ಸ್ವಾತಂತ್ರ್ಯದ ಧಕ್ಕೆಗೆ ಸಿಲುಕಿಕೊಂಡರು. ಮಹಾಚೈತ್ರ ಕೃತಿಯ ಹೆಚ್.ಎಸ್.ಶಿವಪ್ರಕಾಶ್, ಬಂಜಗೆರೆ ಜಯಪ್ರಕಾಶ್, ಯು.ಆರ್.ಅನಂತಮೂರ್ತಿ ಅವರ ಸಂಸ್ಕಾರ ಸಿನಿಮಾ ಸೇರಿದಂತೆ ಹಲವು ಅಭಿವ್ಯಕ್ತಿ ಸ್ವಾತಂತ್ರ್ಯದ ಒಳಗೆ ಸಿಲುಕಿ ಅನೇಕರು ಕೃತಿ ಮತ್ತು ಲೇಖಕರ ವಿರುದ್ಧ ಹರಿಹಾಯ್ದರು. ಒಂದು ಚೌಕಟ್ಟಿನಲ್ಲಿ ಮಾತ್ರವೇ ಟೀಕೆಗಳು ಇರಬೇಕು. ವ್ಯಾಪ್ತಿಯನ್ನು ಮೀರಿ ಮಾತನಾಡುವುದು, ಸಲ್ಲದ ಆರೋಪಗಳನ್ನು ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು ಎಂದರು.
ಇದಕ್ಕೂ ಮುನ್ನ ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನ ಕುರಿತು ಮಾತನಾಡಿದ ಡಾ.ಚಂದ್ರಪ್ಪ ಅವರು ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವ್ಯವಸ್ಥೆ ಇದೆ. ಆದರೂ ಕೆಲವೊಮ್ಮೆ ಕೇಂದ್ರ ಸರ್ಕಾರ ರಾಜ್ಯಗಳ ಹಿಡಿತ ಸಾಧಿಸಲು ಹೊರಡುತ್ತದೆ. ಕೇಂದ್ರ ಸರ್ಕಾರ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ಇದಕ್ಕೊಂದು ಉದಾಹರಣೆ. ಹೆಚ್ಚಿನ ಆದಾಯ ಕೇಂದ್ರಕ್ಕೆ ಹೋಗುತ್ತದೆ. ಕಡಿಮೆ ಆದಾಯ ರಾಜ್ಯಕ್ಕೆ ಬರುತ್ತದೆ. ಇಂತಹ ಹಲವು ನೀತಿಗಳು ಸಮಾನತೆಯ ಆಶಯಕ್ಕೆ ಧಕ್ಕೆ ತರುತ್ತವೆ. ರಾಜ್ಯಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕೆಲಸ ನಡೆಯುತ್ತವೆ ಎಂದರು.ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ.ಬಿ.ಎಸ್.ಲಿಂಗರಾಜು ವಹಿಸಿದ್ದರು. ಕೊಟ್ಟ ಶಂಕರ್ ಕಾರ್ಯಕ್ರಮ ನಿರೂಪಿಸಿದರು. ಸಮಾನತೆ ಜಾತ್ಯತೀತತೆ ಮತ್ತು ಸಂವಿಧಾನ ಕುರಿತು ಡಾ.ಬಿ.ರಮೇಶ್ ಮಾತನಾಡಿದರು.