ಜಗಳೂರು
ದೇಶದ ರಕ್ಷಣೆಗೆ ಮೋದಿಯಂತಹ ಸೂಕ್ತ ಮತ್ತು ಸ್ಪಷ್ಠ ನಿರ್ಧಾರ ಕೈಗೊಳ್ಳುವ ಧೀಮಂತ ನಾಯಕನ ಅವಶ್ಯಕತೆ ಇದ್ದು, ಈ ಚುನಾವಣೆಯಲ್ಲಿ ಬಿ.ಜೆ.ಪಿ. ಮತ ಹಾಕುವ ಮೂಲಕ ಮೋದಿಯವರನ್ನ ಮತ್ತೊಮ್ಮೆ ಭಾರತ ದೇಶದ ಪ್ರಧಾನಮಂತ್ರಿ ಮಾಡಲು ಬಿ.ಜೆ.ಪಿ. ಗೆ ಬೆಂಬಲಿಸಬೇಕೆಂದು ಸಂಸದರಾದ ಜಿ.ಎಂ. ಸಿದ್ದೇಶ್ವರ ಜನರಲ್ಲಿ ಮನವಿಯನ್ನು ಮಾಡಿದರು.
ಜಗಳೂರು ವಿಧಾನಸಭಾ ಕ್ಷೇತ್ರದ ಪಲ್ಲಾಗಟ್ಟೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಬಿ.ಜೆ.ಪಿ. ತತ್ವ ಸಿದ್ದಾಂತಗಳಿಗೆ ಮಾತ್ರ ಮನ್ನಣೆ ನೀಡುತ್ತದೆಯೇ ವಿನ: ಯಾರದೋ ಒಂದು ಕುಟುಂಬವನ್ನು ಓಲೈಸಲು ಹುಟ್ಟಿಕೊಂಡ ಪಕ್ಷ ಇದಲ್ಲ, ನಾವು ಸಾಕಷ್ಟು ಕೆಲಸ ಮಾಡಿ ನಿಮ್ಮ ಬಳಿ ಕೂಲಿ ಕೇಳುತ್ತಿದ್ದೇವೆ, ಆದರೆ ಕಾಂಗ್ರೆಸ್ ಪಕ್ಷದವರು ಕೆಲಸ ಮಾಡದೇ ನಿಮ್ಮ ಬಳಿ ಕೂಲಿಯ ರೂಪದಲ್ಲಿ ಮತ ಕೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಮನಮೋಹನ್ಸಿಂಗ್ ಭಾರತದ ಪ್ರಧಾನಿಯಾಗಿದ್ದಾಗ ವಿದೇಶಗಳಿಗೆ ಹೋದರೆ ಸಾಲ ಕೇಳಲು ಬಂದಿದ್ದಾರೆ ಎನ್ನತ್ತಿದ್ದರು. ಮೋದಿಯವರು ವಿದೇಶಗಳಿಗೆ ಹೋದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತವನ್ನು ಮಾಡುತ್ತಿದ್ದಾರೆ, ನಮ್ಮ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹರಿದು ಬರುತ್ತಿದೆ.
ಪುಲ್ವಾಮ ದಾಳಿಗೆ ಪ್ರತ್ಯುತ್ತರವಾಗಿ ಏರ್ ಸ್ಟೈಕ್ ಮಾಡುವ ಮೂಲಕ ಪಾಕ್ ಹಾಗೂ ಉಗ್ರರಿಗೆ ಮೋದಿಯವರು ತಕ್ಕ ಪಾಠ ಕಲಿಸಿ ದಿಟ್ಟತನ ಮೆರೆದಿದ್ದಾರೆ. ಇಡೀ ವಿಶ್ವವೇ ಅವರ ಕಾರ್ಯಕ್ಕೆ ಕೈ ಜೋಡಿಸುತ್ತಿವೆ ಎಂದರು ಉಗ್ರರ ವಿರುದ್ದದ ಪ್ರತೀಕಾರಕ್ಕೆ ದೇಶದ ಜನ ಸಂತಸಗೊಂಡಿದ್ದಾರೆ ಎಂದರು.
ಜಗಳೂರು ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿಗೆ ಕೇಂದ್ರದಿಂದ ಸಾಕಷ್ಟು ಅನುದಾನ ಬಂದಿದೆ, ಬಯಲು ಶೌಚ ಮುಕ್ತ ಮಾಡಲು ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣಕ್ಕೆ ಹಣ ನೀಡಲಾಗಿದೆ. ಸ್ವಚ್ಚ ಭಾರತ ಯೋಜನೆಗೆ ಹೆಚ್ಚು ಒತ್ತು ನೀಡಿದ ಪರಿಣಾಮವಾಗಿ ದಾವಣಗೆರೆ ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಣೆಯಾಗಿದೆ, ಶುದ್ದ ಕುಡಿಯುವ ನೀರಿನ ಘಟಕ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ
ಇನ್ನೂ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ನೀಡಲು ಕೇಂದ್ರ ಸರ್ಕಾರ ಅನುದಾನವನ್ನು ನೀಡಿದೆ, ಆದರೆ ರಾಜ್ಯ ಸರ್ಕಾರ ಉಚಿತ ಅಕ್ಕಿ ವಿತರಣೆ ನಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ವೃದ್ದಾಪ್ಯ ವೇತನ, ಮುದ್ರಾ ಯೋಜನೆ, ಅಯುಷ್ಮಾನ್ ಭಾರತ್, ಫಸಲು ಭೀಮಾ, ಪ್ರಧಾನಮಂತ್ರಿ ಕೃಷಿ ಸಿಂಚಯಿ, ಸುಕನ್ಯ ಸಮೃದ್ಧಿ ಸೇರಿದಂತೆ ನೂರಾರು ಯೋಜನೆಗಳನ್ನ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದು ದೇಶವನ್ನ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ. ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ. ಶ್ರೀರಾಮುಲು ಆಗಮಿಸುತ್ತಿದ್ದು, ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಬಲ ನೀಡಬೇಕೆಂದು ಸಂಸದರಾದ ಜಿ.ಎಂ.ಸಿದ್ದೇಶ್ವರ ಮನವಿ ಮಾಡಿದರು
ಮಾದಮುತ್ತೇನಹಳ್ಳಿ, ಹಿರೇಮಲ್ಲನಹೊಳೆ, ಮುಸ್ಟೂರು, ಹನುಮಂತಾಪುರ, ಕೆಚ್ಚೇನಹಳ್ಳಿ, ಹೊಸಕೆರೆ, ಕ್ಯಾಸೇನಹಳ್ಳಿ, ಚಿಕ್ಕುಜ್ಜಿನಿ, ಗಡಿಮಾಕುಂಟೆ, ಸೊಕ್ಕೆ, ಗುರುಸಿದ್ದಾಪುರ, ಬಸವನಕೋಟೆ, ದಿದ್ದಿಗೆ, ಪಲ್ಲಾಗಟ್ಟೆ ಸೇರಿದಂತೆ ಹಲವು ಹಳ್ಳಿಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಜಗಳೂರು ಶಾಸಕದ ಎಸ್.ವಿ. ರಾಮಚಂದ್ರ, ಜಿಲ್ಲಾ ಪಂಚಾಯತಿ ಸದಸ್ಯ ಮಂಜಣ್ಣ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ.ವಿ.ನಾಗಪ್ಪ, ಜಿ.ಪಂ. ಸದಸ್ಯರಾದ ಶಾಂತಕುಮಾರಿ ಶಶಿಧರ್, ಹೆಚ್.ನಾಗರಾಜ್, ತಾ.ಪಂ. ಸದಸ್ಯ ಗಡಿಮಾಕುಂಟೆ ಸಿದ್ದೇಶ್, ಲಿಂಗಣ್ಣನಹಳ್ಳಿ ಕೃಷ್ಣಮೂರ್ತಿ, ದೇವಿಕೆರೆ ಶಿವಕುಮಾರಸ್ವಾಮಿ, ಸೇರಿದಂತೆ ಇನ್ನೂ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.