ಕುಣಿಗಲ್
ಪ್ರತಿಯೊಬ್ಬ ಮನುಷ್ಯನು ಆರೋಗ್ಯವಾಗಿರಬೇಕಾದರೆ ತನ್ನ ಬಾಯಿಯಲ್ಲಿರುವ ಹಲ್ಲುಗಳನ್ನ ಆರೋಗ್ಯವಾಗಿರಿಸಿಕೊಳ್ಳ ಬೇಕೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು ತಿಳಿಸಿದರು.
ಅವರು ಪಟ್ಟಣದ ಗೌತಮ ಅನುದಾನಿತ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಆಹಾರವನ್ನು ಅಗೆದು ತಿಂದರೆ ಉತ್ತಮ ಪಚನಕ್ರಿಯೆ ಉಂಟಾಗಿ ಆರೋಗ್ಯದಿಂದ ಇರಲು ಸಾಧ್ಯ, ಅದಕ್ಕಾಗಿ ಎಲ್ಲರೂ ಬಾಯಿ ಸ್ವಚ್ಛವಾಗಿರಿಸಿಕೊಳ್ಳಬೇಕೆಂದು ತಿಳಿಸಿದರು.
ಅಮೃತೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಿರಿಯ ದಂತವೈದ್ಯ ಜಗದೀಶ್ ಮಾತನಾಡಿ, ನಮ್ಮ ದೇಶ ಹಳ್ಳಿಗಳ ದೇಶವಾಗಿದ್ದು ಬಾಯಿ ಹಲ್ಲುಗಳ ಬಗ್ಗೆ ಸ್ವಚ್ಛವಾಗಿ ಇಟ್ಟುಕೊಳ್ಳಲು ತಿಳುವಳಿಕೆ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನ ಹೆಚ್ಚಾಗಿ ಆಯೋಜಿಸಿ ಹಲ್ಲಿನ ಬಗ್ಗೆ ಎಚ್ಚರಿಕೆ ನೀಡಬೇಕು. ಹಲ್ಲು ಆರೋಗ್ಯವಾಗಿದ್ದರೆ ಮನುಷ್ಯನ ಆರೋಗ್ಯ ಉತ್ತಮವಾಗಿರಲು ನೆರವಾಗುತ್ತದೆ. ತಿಂಡಿ ಊಟವಾದ ನಂತರ ಬಾಯಿಯನ್ನ ಮುಕ್ಕಳಿಸುವ ಕ್ರಿಯೆಯನ್ನಾದರು ಮಾಡಿದರೆ ಉತ್ತಮ ಆರೋಗ್ಯ ಮತ್ತು ಮುಖದ ಸೌಂದರ್ಯವೂ ಇರಲು ಸಾಧ್ಯವಾಗುತ್ತದೆ ಎಂದರು.
ಕುಣಿಗಲ್ ಸರ್ಕಾರಿ ಆಸ್ಪತ್ರೆಯ ದಂತ ವೈದ್ಯರಾದ ಭಾರತಿ ಅವರು ಮಾತನಾಡಿ, ಮಕ್ಕಳ ಹಲ್ಲುಗಳಲ್ಲಿ ಚಿಕ್ಕ ಕಲೆಗಳು ಕಂಡತಕ್ಷಣ ವೈದ್ಯರ ಬಳಿ ತೋರಿಸಿ ತಕ್ಕ ಚಿಕಿತ್ಸೆ ಪಡೆದರೆ ಮಕ್ಕಳ ಹಲ್ಲು ಸ್ವಚ್ಛವಾಗಿರಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಡಾ.ಜಗದೀಶ್ ಮಕ್ಕಳಿಗೆ ಉಚಿತವಾಗಿ ಬ್ರಶ್ ಮತ್ತು ಪೇಸ್ಟ್ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








