ಮಜ್ಜಿಗೆ ಸೇವನೆಯಿಂದ ಉತ್ತಮ ಆರೋಗ್ಯ ಪ್ರಾಪ್ತಿ

ದಾವಣಗೆರೆ:

       ಬೇಸಿಗೆಯಲ್ಲಿ ಮಜ್ಜಿಗೆ ಸೇವಿಸುವುದರಿಂದ ದೇಹವೂ ತಂಪಾಗಿರುವುದರ ಜೊತೆಗೆ ಉತ್ತಮ ಆರೋಗ್ಯವೂ ಪ್ರಾಪ್ತಿಯಾಗಲಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ತಿಳಿಸಿದರು.

          ನಗರದ ಜಯದೇವ ವೃತ್ತದಲಿ ಸೋಮವಾರ ಕರುಣಾಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಒಂದು ತಿಂಗಳ ಕಾಲ ಆಯೋಜಿಸಿರುವ ಉಚಿತ ಮಜ್ಜಿಗೆ ಮತ್ತು ನೀರಿನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯ ಬಾಯಿಗೆ ರುಚಿ ನೀಡಿದರೆ, ಅದರಲ್ಲಿರುವ ರಾಸಾಯನಿಕ ಪದಾರ್ಥಗಳು ಆರೋಗ್ಯಕ್ಕೆ ಮಾರಕವಾಗಿರುತ್ತವೆ. ಅದರ ಬದಲು ಮಜ್ಜಿಗೆ ಸೇವಿಸುವುದರಿಂದ ದೇಹಕ್ಕೆ ತಂಪು ಸಿಗುವುದರ ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಹೇಳಿದರು.

           ಮಾರುಕಟ್ಟೆಯಲ್ಲಿನ ತಂಪುಪಾನೀಯಗಳು ಬಾಯಿಗೆ ರುಚಿಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ ಉದರಕ್ಕೆ ಕಹಿಯಾಗಿರುತ್ತದೆ ಎಂದ ಅವರು, ಬೇಸಿಗೆಯಲ್ಲಿ ಬಿಸಿಲು ಬಹಳಷ್ಟು ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಮಜ್ಜಿಗೆ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಹಿಂದೆ ಬಸವಾದಿ ಶರಣರು ಇಂತಹ ಮಹಾಕಾರ್ಯಕ್ಕೆ ಶಿವದಾನ ಎಂದಿದ್ದರು. ಶ್ರಮಿಕರು, ಬಡವರು, ಅಶಕ್ತರು, ಆಟೋಚಾಲಕರ ಬಾಯಾರಿಕೆ ನೀಗಿಸುವ ನಿಟ್ಟಿನಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್‍ವತಿಯಿಂದ ಮಜ್ಜಿಗೆ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

          ಟ್ರಸ್ಟ್‍ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಕಳೆದ ಮೂರು ವರ್ಷದಿಂದಲೂ ಕರುಣಾ ಜೀವ ಕಲ್ಯಾಣ ಟ್ರಸ್ಟ್‍ನಿಂದ ಬೇಸಿಗೆಯಲ್ಲಿ ಮಜ್ಜಿಗೆ ವಿತರಣೆ ಕಾರ್ಯ ಮಾಡಲಾಗುತ್ತಿದೆ. ದಾನಿಗಳು ಸಹ ಇಂತಹ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ. ನಗರದ ಚಿಗಟೇರಿ ಜಿಲ್ಲಾಸ್ಪತ್ರೆ, ಹಳೇ ಹೆರಿಗೆ ಆಸ್ಪತ್ರೆ, ರಾಮ್ ಅಂಡ್ ಕೋ ವೃತ್ತ ಹಾಗೂ ಜಯದೇವವೃತ್ತದಲ್ಲಿ ಒಂದು ತಿಂಗಳ ಕಾಲ ಉಚಿತ ಮಜ್ಜಿಗೆ, ನೀರು ವಿತರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಮೊದಲ ದಿನದ ಮಜ್ಜಿಗೆ ದಾಸೋಹಿ ಡಾ.ಮಲ್ಲಿಕಾರ್ಜುನ್, ಟ್ರಸ್ಟ್‍ನ ಮಂಜುಳಾ ಬಸವಲಿಂಗಪ್ಪ, ಚಂಪಾಲಾಲ್ ಹಾಗೂ ಟ್ರಸ್ಟ್‍ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link