ಬೆಂಗಳೂರು
ಚಿಕ್ಕಬಳ್ಳಾಪುರ ಬಾಲಮಂದಿರದಲ್ಲಿ ವೇಶ್ಯಾವಾಟಿಕೆ ಪ್ರಕರಣ ಹಿನ್ನೆಲೆ ರಾಜ್ಯದಲ್ಲಿರುವ ಬಾಲಮಂದಿರಗಳ ಲೆಕ್ಕಪತ್ರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ನೀಡಿದ್ದರೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಇದೂವರೆಗೂ ವರದಿ ಸಲ್ಲಿಸಿಲ್ಲ ಎಂದು ಮೇಲ್ಮನೆ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್ ಆರೋಪಿಸಿದ್ದಾರೆ.
ಮಾರ್ಚ್ 30 ರಂದು ಚಿಕ್ಕಬಳ್ಳಾಪುರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಮಕ್ಕಳ ರಕ್ಷಣಾ ಘಟಕ ಉಸ್ತುವಾರಿಯ ಬಾಲಮಂದಿರದ ಸಿಬ್ಬಂದಿಯೇ ಇಬ್ಬರು ಬಾಲಕಿಯರನ್ನು ವೇಶ್ಯಾವಾಟಿಕೆಗೆ ದೂಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾದ ಬಾಲಕಿಯರಿಗೆ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಆದರೆ ಬಾಲಕಿಯರಿಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಪೆÇಲೀಸರು ಪ್ರಕರಣದ ತನಿಖೆ ನಡೆಸಿದಾಗ ಬಾಲಮಂದಿರದ ಮಹಿಳಾ ಸಿಬ್ಬಂದಿಯೇ ಬಾಲಕಿಯರನ್ನು ವೇಶ್ಯಾವಾಟಿಕೆಗೆ ದೂಡಿರುವುದು ತಿಳಿದುಬಂದಿತ್ತು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ತೇಜಸ್ವಿನಿ, ಸಚಿವೆ ಜಯಮಾಲಾ ಅವರು ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಚುನಾವಣಾ ಕೆಲಸಗಳಿಗೆ ಸಮಯ ನೀಡುವ ಸಚಿವರು ಬಾಲಮಂದಿರಗಳಲ್ಲಿನ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದೂವರೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಬಿಜೆಪಿ ಮುಖಂಡ ಈಶ್ವರಪ್ಪ ಅವರನ್ನು ಜಾತಿ ಹೆಸರಿನಲ್ಲಿ ಏಕವಚನದಲ್ಲಿ ಸಂಬೋಧಿಸಿ ನಿಂದಿಸಿದ್ದು ಅವರ ನಡೆ ಖಂಡನೀಯ. ಬಿಜೆಪಿಯ ನಾಯಕರ ಜಾತಿ ಬಗ್ಗೆ ಮಾತನಾಡುವವರಿಗೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ವಿವಾಹವಾಗುವ ಪೂರ್ವದಲ್ಲಿ ಎಲ್ಲಿದ್ದರು? ಅವರು ಯಾವ ಧರ್ಮಿಯರಾಗಿದ್ದರು ಎಂದು ಪ್ರಶ್ನಿಸಬಹುದೇ? ಎಂದು ತಿರುಗೇಟು ನೀಡಿದರು.
ಜೆಡಿಎಸ್ ಸಂಸದ ಶಿವರಾಮೇಗೌಡ ಅವರು ಸುಮಲತಾ ಅವರ ಜಾತಿ ಪ್ರಸ್ತಾಪಿಸುವುದು ಸರಿಯಲ್ಲ.ಮಾಜಿ ಸಂಸದ ನಟ ಅಂಬರೀಷ್ ಅವರನ್ನು ವಿವಾಹದ ಬಳಿಕ ಸುಮಲತಾ ಅವರು ಮಂಡ್ಯದ ಸೊಸೆ, ಮಗಳಾಗುತ್ತಾರೆ ಎಂಬುದನ್ನು ಕಾಂಗ್ರೆಸ್-ಜೆಡಿಎಸ್ ನಾಯಕರು ಅರಿತುಕೊಂಡು ಮಾತನಾಡಬೇಕು ಎಂದರು.
ಬಿಜೆಪಿ ಸಹ ವಕ್ತಾರೆ ಮಂಜುಳಾ ಮಾತನಾಡಿ, ಮಂಡ್ಯ ಸಂಸದರು ಸುಮಲತಾ ಅವರ ಜಾತಿ ಪ್ರಸ್ತಾಪ ಮಾಡುವ ಮೂಲಕ ಅವರಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಶಿವರಾಮೇಗೌಡರ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರ ಮೇಲೆ ಒತ್ತಡ ಹೇರಿ ಸುಮಲತಾ ಅವರಿಗೆ ತೊಂದರೆ ನೀಡುತ್ತಿದ್ದರು. ಇದರ ವಿರುದ್ಧ ಬಿಜೆಪಿ ದೂರು ನೀಡಿದ್ದನ್ನು ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪರಿಗಣಿಸಿ ಕ್ರಮ ಜರುಗಿಸಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
