ಚುನಾವಣಾ ಅಕ್ರಮ ಕಂಡುಬಂದಲ್ಲಿ ಸಿ-ವಿಜಲ್ ಆಪ್ ಮೂಲಕ ಮಾಹಿತಿ ನೀಡಿ: ಚಂದ್ರಶೇಖರ್ ಗುಡಿ

ಬಳ್ಳಾರಿ
 
         ಮುಕ್ತ, ನಿರ್ಭಿತಿಯಿಂದ ಮತದಾನ ಚಲಾಯಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಅನೇಕ ಕ್ರಮಗಳನ್ನು ಕೈಗೊಂಡಿದೆ. ಈ ಬಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿ-ವಿಜಲ್ ಆಪ್ ಅಭಿವೃದ್ಧಿ ಪಡಿಸಲಾಗಿದ್ದು, ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ತಕ್ಷಣ ಪೋಟೊ ಮತ್ತು ವಿಡಿಯೋ ಕ್ಲಿಕ್ ಮಾಡಿ ಆಪ್ ಪ್ ಮೂಲಕ ದೂರು ನೀಡಿ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ್ ಗುಡಿ ಹೇಳಿದರು.
   
         ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮತದಾನ ಶೇಕಡಾವಾರು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರವ ಸಂಜೆ ಏರ್ಪಡಿಸಿದ್ದ ಕವಿಗೋಷ್ಠಿ/ನಗೆಚಟಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
     
         ಪ್ರಜಾಪ್ರಭುತ್ವದ ಹಬ್ಬ ಈ ಮತದಾನ ಪ್ರಕ್ರಿಯೆ ಏ.೨೩ರಂದು ಸರ್ವರೂ ಉತ್ಸಾಹದಿಂದ ಬಂದು ಮತದಾನ ಮಾಡಬೇಕು ಎಂದರು.
         ನಗರ ಪ್ರದೇಶದ ಮತದಾರರು ಮತದಾನ ಮಾಡುವುದರಿಂದ ವಿಮುಖರಾಗದೇ ಕಡ್ಡಾಯವಾಗಿ ತಮ್ಮ ಮತದಾನ ಮಾಡಬೇಕು. ಈ ಮೂಲಕ ಕಳೆದ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಉಪಚುನಾವಣೆಯಲ್ಲಿ ನಗರ ಪ್ರದೇಶದ ಮತದಾರರು ಕಡಿಮೆ ಮತದಾನ ಮಾಡಿರುವ ಆಪಾದನೆಯನ್ನು ಹೋಗಲಾಡಿಸಿಕೊಳ್ಳಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ್ ಗುಡಿ ಅವರು ಹೇಳಿದರು.
   
         ಮತದಾರರು ಅತ್ಯಂತ ಖುಷಿಯಿಂದ ಬಂದು ಮತದಾನ ಮಾಡುವ ನಿಟ್ಟಿನಲ್ಲಿ ನೀರು- ನೆರಳು, ವ್ಹೀಲ್ ಚೇರ್, ಭೂತಗನ್ನಡಿ, ವಾಹನದ ವ್ಯವಸ್ಥೆ, ರ್‍ಯಾಂಪ್ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಮುಕ್ತ ಮತ್ತು ನಿರ್ಭಿತಿಯಿಂದ ಬಂದು ಮತದಾನ ಚಲಾಯಿಸಬೇಕು ಎಂಬ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
          ಇದೇ ಸಂದರ್ಭದಲ್ಲಿ ಚಂದ್ರಶೇಖರ ಗುಡಿ ಅವರು ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ಪ್ರಜಾಪ್ರಭುತ್ವ ಎನ್ನುವುದು ನಾವೇ ಮಾಡಿಕೊಂಡಿರುವ ಚೌಕಟ್ಟು,ಅದನ್ನು ಭದ್ರಪಡಿಸಬೇಕಿದೆ. ನಾವೆಲ್ಲರು ಸೇರಿ ತಪ್ಪದೇ ಮತಚಲಾಯಿಸಬೇಕು ಎಂದರು.
 
          ನಗರದ ಜನರು ತಿರಸ್ಕೃತ ಮನೋಭಾವನೆಯಿಂದ ಮತದಾನ ಮಾಡದಿರುವುದು ಕಂಡುಬಂದಿದೆ. ಆ ರೀತಿ ಆಗಬಾರದು ಎಂಬ ಸದುದ್ದೇಶದಿಂದ ಈ ರೀತಿಯ ಕಾರ್ಯಕ್ರಮಗಳು ಸ್ವೀಪ್ ಸಮಿತಿ ಏರ್ಪಡಿಸಿರುವುದು ಶ್ಲಾಘನೀಯ. ತಾವು ಮತದಾನ ಮಾಡಿ ಸುತ್ತಮುತ್ತಲಿನವರಿಗೂ ಮತದಾನ ಮಾಡಲು ಪ್ರೇರೆಪಿಸಿ ಎಂದರು.
         ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಬೇಕು. ಮತದಾನ ಮಾಡದಿದ್ದರೆ ತಮ್ಮನ್ನ ತಾವು ಕಳಕೊಂಡಂತೆ ಎಂಬುದನ್ನು ಒತ್ತಿ ಹೇಳಿದರು.
 
           ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಹಾಗೂ ಇತರೆ ಗಣ್ಯರು ಇದ್ದರು.ಅಮಾತಿ ಬಸವರಾಜ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link