ತುಮಕೂರು
ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ, ನಿಧಿ ಸಂಗ್ರಹಣೆ ಮಾಡಲಾಗುತ್ತಿದ್ದು, ಸಂಗ್ರಹದ ಹಣವನ್ನು ಕರ್ನಾಟಕ ರಾಜ್ಯ ಪೊಲೀಸ್ ಬೆನವೊಲೆಂಟ್ ಫಂಡ್ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ವಂಶಿಕೃಷ್ಣ ತಿಳಿಸಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿಂದು ಏರ್ಪಡಿಸಿದ್ದ “ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಪೊಲೀಸ್ ಕಾಯ್ದೆಯನ್ನು 1965ರ ಏಪ್ರಿಲ್ 2ರಂದು ಜಾರಿಗೊಳಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವು ಪೊಲೀಸ್ ಧ್ವಜ ದಿನಾಚರಣೆ ಆಚರಿಸುತ್ತಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಮತ್ತು ತ್ಯಾಗದ ಮಹತ್ವ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧ ಪತ್ತೆ ಮತ್ತು ತಡೆ, ಸಾಮಾಜಿಕ ಭದ್ರತೆ ಕಾಪಾಡುವುದು ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ನಿವೃತ್ತ ಪೊಲೀಸ್ ಕಲ್ಯಾಣ ನಿಧಿ ಖಾತೆಯಲ್ಲಿ ನಿಶ್ಚಿತ ಠೇವಣಿ 23,65,911 ರೂ.ಗಳು ಹಾಗೂ ಉಳಿತಾಯ ಖಾತೆಯಲ್ಲಿ 1,388 ರೂ.ಗಳ ಹಣ ಇರುತ್ತದೆ. 2018ನೇ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಧ್ವಜ ದಿನಾಚರಣೆಯ ಅಂಗವಾಗಿ ಧ್ವಜಗಳನ್ನು ಮಾರಾಟ ಮಾಡಿದ ಬಾಬ್ತು 5,52,257 ರೂ. ಹಣ ಸಂಗ್ರಹವಾಗಿದೆಯಲ್ಲದೆ ಜಿಲ್ಲೆಯ ಸುಮಾರು 1000 ಮಂದಿ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕಾಗಿ 3,84,000 ರೂ.ಗಳು ಹಾಗೂ ಅವರ ಶವ ಸಂಸ್ಕಾರಕ್ಕಾಗಿ 75,000 ರೂ.ಗಳನ್ನು ಸಂಬಂಧಿಸಿದವರ ಕುಟುಂಬಗಳಿಗೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿ/ವಯೋ ನಿವೃತ್ತಿ/ಸ್ವಯಂ ನಿವೃತ್ತಿ ಹೊಂದಿರುವ ಒಟ್ಟು 36 ಮಂದಿ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು ಹಾಗೂ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಇನ್ಸ್‍ಪೆಕ್ಟರ್ ಎ.ಕೆ ತಿಮ್ಮಯ್ಯ ಗೌರವ ರಕ್ಷೆ ಸ್ವೀಕರಿಸಿದರು. ಜಿಲ್ಲಾ ನಿವೃತ್ತ ಪೊಲೀಸ್ ಸಂಘದ ಅಧ್ಯಕ್ಷ ಮಾಲೂರಪ್ಪ, ಡಿವೈಎಸ್ಪಿ ಡಾ|| ಶೋಭಾರಾಣಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
