ತುಮಕೂರು
ದೇಶದ ಭವಿಷ್ಯಕ್ಕಾಗಿ ಹೋರಾಟ ಮಾಡುವ ನಿಟ್ಟಿನಲ್ಲಿ ನಮ್ಮ ಪಕ್ಷವು ದೇಶದ ಪಕ್ಷಗಳೊಂದಿಗೆ ಸೇರಿಕೊಂಡು ಮಹಾಘಟಬಂಧನ್ ನಿರ್ಮಾಣ ಮಾಡಿಕೊಂಡು ಮೋದಿ ವಿರುದ್ಧ ಚುನಾವಣೆ ಎದುರಿಸುತ್ತಿವೆ. ದೇಶದ ಬಹುಸಂಖ್ಯಾತ ಬಡವರ ಆಸೆ ಆಕಾಂಕ್ಷೆಗಳನ್ನು ನಾಶ ಮಾಡಿದ ಬಿಜೆಪಿ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಹನುಮಂತಪುರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ಜಂಟಿ ಸಭೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈ ದೇಶದಲ್ಲಿ ಶೋಷಿತರಿಗಾಗಿ, ಬಡವರಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದರೆ ಇಂದು ಬಿಜೆಪಿ ಪಕ್ಷದ ಸಚಿವರು, ಮುಖಂಡರು ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡುತ್ತಾರೆ. ಸಂವಿಧಾನದಲ್ಲಿ ಎಲ್ಲರೂ ಸಮಾನರು.
ಎಲ್ಲರಿಗೂ ಮುಕ್ತ ಅವಕಾಶ ಇರಬೇಕು ಎಂಬುದಾಗಿ ಬರೆದಿದ್ದಾರೆ. ಆದರೆ ಬಿಜೆಪಿ ಆಡಳಿತದಲ್ಲಿ ಜನರನ್ನು ಇನ್ನೂ ಶೋಷಿತರಾಗುತ್ತಿದ್ದಾರೆ. ಬಡವರು ಇನ್ನೂ ಬಡವರಾಗುತ್ತಿದ್ದಾರೆ. ನಿರುದ್ಯೋಗ ಹೆಚ್ಚಾಗುತ್ತಿದೆ. ರೈತರ ಸಾಲ ಮನ್ನಾ ಆಗಿಲ್ಲ ಎಂದು ಆರೋಪ ಮಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ವಿವಿಧ ಭರವಸೆಗಳನ್ನು ನೀಡಿದ್ದ ಮೋದಿಯವರು, ಐದು ವರ್ಷದಲ್ಲಿ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಬದಲಿಗೆ ಜಿಎಸ್‍ಟಿ ಜಾರಿ ಮಾಡಿ ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡಿದರು. ರೈತರ ಸಾಲ ಮನ್ನಾ ಮಾಡದೆ, ರೈತರಿಗೆ ಬೆಂಬಲ ಬೆಲೆ ನೀಡದೆ ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಲ್ಲ. ಅಂತಹ ಪಕ್ಷಕ್ಕೆ ಮತ ನೀಡಬೇಕೆ ಎಂದು ಪ್ರಶ್ನಿಸಿದರಲ್ಲದೆ, ತುಮಕೂರಿನಿಂದ ಸ್ಪರ್ಧೆ ಮಾಡಿದ ಜಿಎಸ್. ಬಸವರಾಜು ತಾವು ಯಾವುದೇ ಕೆಲಸ ಕಾರ್ಯಗಳನ್ನು ಮಾಡದೇ ಕೇವಲ ಮೋದಿಯವರ ಹೆಸರನ್ನು ಹೇಳಿಕೊಂಡು ಮತ ಕೇಳುತ್ತಿದ್ದಾರೆ ಎಂದರು.
ಈ ಹಿಂದೆಯಿಂದಲೂ ಜನಸೇವೆಯೇ ಮುಖ್ಯ ಆಶಯವನ್ನಾಗಿಟ್ಟುಕೊಂಡು ನೀರಾವರಿ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ್ದ ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದು ಕೇವಲ ಸಿಂಬಾಲಿಕ್ ಆಗಿದೆ. ಈಗಾಗಲೇ ಎರಡೂ ಪಕ್ಷಗಳ ಮುಖಂಡರು ಬಿಜೆಪಿಯನ್ನು ಸೋಲಿಸಲು ಮೈತ್ರಿ ಮಾಡಿಕೊಂಡು ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚುನಾವಣೆ ಪ್ರಚಾರ ಕಾರ್ಯ ಆರಂಭ ಮಾಡಿದ್ದು, ಮಂಗಳವಾರಕ್ಕೆ ಆರು ಕ್ಷೇತ್ರಗಳಲ್ಲಿ ಸಭೆ ನಡೆಸಲಾಗಿದೆ. ಬುಧವಾರ ಕೊರಟಗೆರೆ, ಮಧುಗಿರಿ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯ ಮಾಡಬೇಕಿದೆ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೀರಾವರಿಗೆ ನೀಡಿದ್ದ ಅನುದಾನದಲ್ಲಿ ಹೇಮಾವತಿ ಚಾನೆಲ್‍ನ 0 ಯಿಂದ 72 ಕಿಮೀ ವರೆಗೆ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಅಲ್ಲಿಂದ 150ನೇ ಕಿ.ಮೀ ನವರೆಗೆ ಅಭಿವೃದ್ಧಿ ಮಾಡಲು ಬಜೆಟ್‍ನಲ್ಲಿ 450 ಕೋಟಿ ನೀಡಲಿದ್ದಾರೆ. ರಾಜ್ಯ ಸರ್ಕಾರ ಸುಭದ್ರವಾಗಿದೆ. ಸರ್ಕಾರ ಬಿಳುತ್ತದೆ ಎಂದು ಯಾರಾದರೂ ತಿಳಿದುಕೊಂಡಿದ್ದರೆ ಅದು ಕೇವಲ ಅವರ ಕನಸು ಎಂದರು. ತುಮಕೂರು ಕ್ಷೇತ್ರದ ಅಭಿವೃದ್ಧಿ ಮಾಡಲು ನಾವು ಬದ್ಧರಾಗಿದ್ದೇವೆ. ಕಳೆದ ಎರಡ್ಮೂರು ದಿನಗಳಿಂದ ಹೇಮಾವತಿ ಬಗ್ಗೆ ಮಾತನಾಡುತ್ತಿರುವ ಜಿ.ಎಸ್.ಬಸವರಾಜು ತುಮಕೂರಿನಲ್ಲಿ ನಾಲ್ಕು ಬಾರಿ ಸಂಸದರಾಗಿದ್ದರು. ಅವರು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಚುನಾವಣೆಗೆ ಮುಂಚೆ ದೇಶದ ಅಭಿವೃದ್ಧಿ ಮಾಡುತ್ತೇನೆ. ದೇಶದ ಪ್ರತಿಯೊಬ್ಬ ಪ್ರಜೆಗೂ 15 ಲಕ್ಷ ರೂ. ಹಣವನ್ನು ನೀಡುತ್ತೇನೆ ಎಂದಿದ್ದರು. 10 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು. ಎಲ್ಲಿ ನೀಡಿದ್ದಾರೆ ಉದ್ಯೋಗ ಎಂಬುದನ್ನು ಕೇಳಬೇಕು. ಇನ್ನೇನು ಎರಡು ತಿಂಗಳಲ್ಲಿ ಚುನಾವಣೆ ಬರುತ್ತಿದೆ ಎಂದಾಗ ರೈತರು ನೆನಪಾದರು.
ಅದಕ್ಕೆ ಕೇವಲ 6 ಸಾವಿರ ರೂ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ಹಲವು ವರ್ಷಗಳಿಂದ ರೈತರ ಸಾಲ ಮನ್ನಾ ಮಾಡಲು ಬಿಜೆಪಿ ಪಕ್ಷದ ಸಂಸದರನ್ನೇ ಕರೆದುಕೊಂಡು ಹೋಗಿ ಕೇಳಿಕೊಂಡರೂ ಅದರ ಬಗ್ಗೆ ಗಮನ ಹರಿಸಿಲ್ಲ ಎಂದು ಕೇಳಿದರು. ನಾವು ಕೋ ಆಪರೇಟಿವ್ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುತ್ತೇವೆ. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಲು ಕೇಳಿದರೆ ಅದಕ್ಕೆ ಉತ್ತರ ನೀಡಲಿಲ್ಲ ಎಂದು ಆರೋಪ ಮಾಡಿದರು.
ಸಭೆಯಲ್ಲಿ ಮಾತನಾಡಿದ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ತುಮಕೂರು ಕ್ಷೇತ್ರದಿಂದ ದೇವೇಗೌಡರು ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಪಕ್ಷದಿಂದ ಬಸವರಾಜುರವರು ಸ್ಪರ್ಧೆ ಮಾಡಿದ್ದಾರೆ. ಬಸವರಾಜುರವರು ಕೇವಲ ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತೀದ್ದೀರಾ. ನೀವು ನಾಲ್ಕು ಬಾರಿ ಸಂಸದರಾಗಿ ಕೆಲಸ ಮಾಡಿದ್ದೀರಾ. ಜನರ ಮುಂದೆ ನಿಮ್ಮ ಸಾಧನೆ ಹೇಳಿಕೊಂಡು ಮತ ಕೇಳುವ ನೈತಿಕತೆ ನಿಮಗಿಲ್ಲ. ಮೋದಿ ಎಂಬ ಹೆಸರನ್ನು ಬಳಸಿಕೊಂಡು ಮತ ಕೇಳುತ್ತಿದ್ದೀರ ಎಂದು ಜಿಎಸ್ ಬಸವರಾಜು ವಿರುದ್ಧ ವಾಗ್ದಾಳಿ ನಡೆಸಿದರು.
ಕೇವಲ ನೀರಾವರಿ ವಿಷಯವನ್ನು ಮತ್ತು ದೇವೇಗೌಡರ ವಿರುದ್ಧ ಮಾತನಾಡುತ್ತಿದ್ದೀರಾ ಅಲ್ವಾ, ಕೇವಲ ಆಶ್ವಾಸನೆಗಳನ್ನು ನೀಡುವ ಪ್ರಧಾನಿಯವರಿಗೆ ಮತ ನೀಡಿ ಎಂದು ಕೇಳುತ್ತೀರಾ ಎಂದು ಪ್ರಶ್ನಿಸಿದರಲ್ಲದೆ, ದೇಶದಲ್ಲಿ ಅತಿ ದೊಡ್ಡ ಸುಳ್ಳುಗಾರ ಎಂದರೆ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು, ತುಮಕೂರಿನಲ್ಲಿನ ಸುಳ್ಳುಗಾರ ಜಿ.ಎಸ್.ಬಸವರಾಜು ಎಂದು ವ್ಯಂಗ್ಯವಾಡಿದರು.
ಕೇವಲ ಚುನಾವಣೆಗಳು ಬಂದಾಗ ಮಾತ್ರ ಹೇಮಾವತಿ ನೀರಿನ ವಿಚಾರ ಎತ್ತುತ್ತಾರೆ ಹೊರತು ಚುನಾವಣೆ ನಂತರ ಅದರ ಬಗ್ಗೆ ಮಾತನಾಡುವುದೇ ಇಲ್ಲ. ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಹೇಮಾವತಿ ನೀರು ಹರಿದಿದ್ದು, ಆವೇಳೆ ಒಬ್ಬ ಅಮಾಯಕನನ್ನು ಕಾಲುವೆಗೆ ತಳ್ಳಿ ಅಮಾನುಷವಾಗಿ ಕೊಲೆ ಮಾಡಿದರು. ಆ ವ್ಯಕ್ತಿಗೆ ಪರಿಹಾರ ನೀಡಲು ದಾಖಲಾತಿಗಳನ್ನು ಹುಡುಕಿದಾಗ ಆತನಿಗೆ ಕೇವಲ ಒಂದು ಗುಂಟೆ ಕೂಡ ಜಮೀನು ಇಲ್ಲ ಅಂತಹ ಬಡ ವ್ಯಕ್ತಿ ಹೇಮಾವತಿ ಹೋರಾಟಕ್ಕೆ ಹೇಗೆ ಬರುತ್ತಾನೆ. ಇವರು ಕೇವಲ ನೀರಿನ ರಾಜಕಾರಣ ಮಾಡುತ್ತಾರೆ ಎಂದು ಆಪಾದಿಸಿದರು.
ಬಿಜೆಪಿ ಪಕ್ಷವು ಕೇವಲ ಆರ್‍ಎಸ್‍ಎಸ್ , ಕೋಮುವಾದ ಪಕ್ಷವಾಗಿದ್ದು ಆರ್‍ಎಸ್‍ಎಸ್‍ನವರು ಹೇಳಿದಂತೆ ಆಡಳಿತ ನಡೆಸುವ ಪ್ರಧಾನಿ ನಮಗೆ ಬೇಕೆ ? ಸರ್ಕಾರದಲ್ಲಿ ಐಎಎಸ್, ಕೆಎಎಸ್, ಐಪಿಎಸ್ ಪಾಸ್ ಆದವರಿಗೆ ತರಬೇತಿ ನೀಡಿದಂತೆ ಆರ್‍ಎಸ್‍ಎಸ್‍ನಲ್ಲಿ ಕದ್ದು ಮುಚ್ಚಿ ಪಕ್ಕದ ಮನೆಯಲ್ಲಿ ಹಾಲು ಕುಡಿಯುವುದು ಹೇಗೆ ? ಜನರಿಗೆ ಹೇಗೆ ಸುಳ್ಳು ಹೇಳಬಹುದು ಎಂಬುದರ ಬಗ್ಗೆ ತರಬೇತಿ ನೀಡುತ್ತಾರೆ ಎಂದು ಗೇಲಿ ಮಾಡಿದರು.
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಚುನಾಯಿತನಾಗಿದ್ದೇನೆ. ನಾನು ನೇರವಾಗಿ ಕೇಳುತ್ತೇನೆ ನಿಮ್ಮ ಸಮಸ್ಯೆಗಳಿಗೆ ಸ್ಪಂಧಿಸಿದ್ದೇನೆ ನನ್ನನ್ನು ಬಿಟ್ಟು ಇನ್ಯಾರಿಗೆ ಮತ ಹಾಕುತ್ತೀರಾ ಎಂದು ನೇರವಾಗಿಯೇ ಕೇಳುತ್ತೇನೆ ಎಂದರು.
ಹೇಮಾವತಿ ವಿಚಾರದಲ್ಲಿ ದೇವೇಗೌಡರ ವಿರುದ್ದ ಮಾತನಾಡುವ ನೀವು, ನೀರಾವರಿ ಹೋರಾಟಗಳನ್ನು ಮಾಡಿದ ಗೌಡರ ತಿಳಿದುಕೊಳ್ಳಬೇಕಿದೆ. ಹೇಮಾವತಿ ನೀರು ಬಿಡುವಲ್ಲಿ ದೇವೇಗೌಡರು ಅಡ್ಡಿಪಡಿಸುತ್ತಾರೆ ಎಂಬ ಆರೋಪ ಮಾಡುತ್ತೀದ್ದೀರಾ ಅಲ್ವಾ, ಗೋರೂರು ಡ್ಯಾಂನ ಬೀಗ ದೇವೇಗೌಡರ ಬಳಿ ಇರುತ್ತಾ, ನೀರು ಬಿಟ್ಟಿಲ್ಲ ಎನ್ನುವುದಕ್ಕೆ, ಈ ಮುಂಚೆ ಕಾಂಗ್ರೆಸ್ ಸರ್ಕಾರ ಇತ್ತು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು ಅವರನ್ನು ಕೇಳುವುದರ ಬದಲಾಗಿ ಈಗ ಕೇವಲ ದೇವೇಗೌಡರ ಮೇಲೆ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿದ್ದಾರೆ ಎಂದೆಲ್ಲಾ ಮಾತನಾಡುವ ಬಿಜೆಪಿ ಮುಖಂಡರು ಮುದ್ದಹನುಮೆಗೌಡರಿಗೆ ಬಿಜೆಪಿಯಿಂದ ಟಿಕೆಟ್ ನೀಡಿ ನಿಲ್ಲಿಸಬಹುದಿತ್ತು. ಆದರೆ ಆ ಕೆಲಸವನ್ನು ಏಕೆ ಮಾಡಲಿಲ್ಲ. ಈಗ ಮೋದಿಯನ್ನು ದೂರ ಮಾಡುವುದೇ ನಮ್ಮ ಪ್ರಮುಖ ಉದ್ದೇಶ ಈ ನಿಟ್ಟಿನಲ್ಲಿ ಎಲ್ಲರೂ ದೇವೇಗೌಡರಿಗೆ ಹೆಚ್ಚಿನ ಬಹುಮತದೊಂದಿಗೆ ಚುನಾಯಿಸಬೇಕು. ಮಾಜಿ ಪ್ರಧಾನಿಗೆ ಮತ ನೀಡಿ ಉತ್ತಮ ಕೀರ್ತಿ ಪಡೆಯುತ್ತೀರೋ ಅಥವಾ ಅಪಜಯಗೊಳಿಸಿ ಅಪಕೀರ್ತಿ ಪಡೆಯುತ್ತೀರೋ ಎಂಬುದನ್ನು ನೀವೇ ತೀರ್ಮಾನ ಮಾಡಿಕೊಳ್ಳಿ ಎಂದರು.
ಮಾಜಿ ಶಾಸಕ ರಫೀಕ್ ಅಹಮ್ಮದ್ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಗುರಿ ಬಿಜೆಪಿಯನ್ನು ಸೋಲಿಸುವುದೊಂದೆ ಆಗಿದೆ. ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ ರಾಹುಲ್‍ಗಾಂಧಿಯವರೇ ಪ್ರಧಾನಿಯಾಗಬೇಕಿದೆ. ತುಮಕೂರಿನಲ್ಲಿ ದೇವೇಗೌಡರು ಸಂಸದರಾದರೆ ತುಮಕೂರು ಕ್ಷೇತ್ರವೂ ಅಭಿವೃದ್ಧಿಯಾಗಲಿದೆ ಎಂದರಲ್ಲದೆ, ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇದ್ದಾರೆ ರೈತರ ಸಾಲ ಮನ್ನಾ ಮಾಡಿದ್ದೇವೆ. ಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಆದರೆ ಕೇಂದ್ರದಲ್ಲಿ ನೀಡಿದ್ದ ಭರವಸೆಗಳಲ್ಲಿ ಯಾವೊಂದು ಈಡೇರಿಸಿಲ್ಲ. ಈ ಬಗ್ಗೆ ಮಾತನಾಡಲಾಗದೆ ಈಗ ಧಾರ್ಮಿಕ ಹಾಗೂ ರಕ್ಷಣಾ ಇಲಾಖೆಯ ವಿಷಯವನ್ನಿಟ್ಟುಕೊಂಡು ಚುನಾವಣೆಯಲ್ಲಿ ಮತ ಕೇಳುತ್ತಿದ್ದಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಮುಖಂಡ ರಮೇಶ್‍ಬಾಬು ಮಾತನಾಡಿ, ಚುನಾವಣೆಗೆ ಇನ್ನು 15 ದಿನಗಳು ಬಾಕಿ ಇದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಸೇರಿ ಮನೆಮನೆಗೆ ತೆರಳಿ ಪ್ರಚಾರ ಮಾಡಿ ದೇವೇಗೌಡರಿಗೆ ಮತ ನೀಡುವಂತೆ ತಿಳಿಸಲು ಮನವಿ ಮಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜೆಡಿಎಸ್ ಮುಖಂಡ ಗೋವಿಂದರಾಜು, ದೇವೇಗೌಡರ ಸ್ಪರ್ದೆಯಿಂದ ತುಮಕೂರು ಇಡೀ ದೇಶದ ಗಮನ ಸೆಳೆದಿದೆ. ಒಬ್ಬ ಪ್ರಧಾನಿಯಾಗಿದ್ದವರು ಎಲ್ಲಿಯಾದರೂ ಸ್ಪರ್ಧೆ ಮಾಡಬಹುದಿತ್ತು. ಆದರೆ ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧೆ ಮಾಡಿರುವುದು ನಮ್ಮ ಅದೃಷ್ಠ. ಅವರನ್ನು ಚುನಾಯಿಸಿ ಲೋಕಸಭೆಗೆ ಕಳುಹಿಸುವುದು ನಮ್ಮ ಕರ್ತವ್ಯವಾಗಿದೆ. ಇದಕ್ಕೆ ಕಾರ್ಯಕರ್ತರು, ಮುಖಂಡರು ಶ್ರಮವಹಿಸಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಷಫೀ ಅಹಮ್ಮದ್, ತೂಪಲ್ಲಿಚೌಡರೆಡ್ಡಿ, ಜಿ.ಪಂ ಅಧ್ಯಕ್ಷೆ ಲತಾರವಿಕುಮಾರ್, ಪಾಲಿಕೆ ಮಹಾಪೌರರಾದ ಲಲಿತಾರವೀಶ್, ಉಪಮಹಾಪೌರರಾದ ರೂಪಶ್ರೀ ಶೆಟ್ಟಳಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ನಯಾಜ್‍ಅಹಮ್ಮದ್, ಬೆಳ್ಳಿ ಲೋಕೇಶ್, ತು.ಬಿ.ಮಲ್ಲೇಶ್, ಬೆಮೆಲ್ ಕಾಂತರಾಜು, ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
