ಪದವೀಧರ ಕ್ಷೇತ್ರದ ಚುನಾವಣೆ: ವಿದ್ಯಾವಂತ ಮತದಾರರು ನಿರ್ಧರಿಸಬೇಕು

ತುಮಕೂರು
     “ರಾಜ್ಯ ಮತ್ತು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ವಿದ್ಯಾವಂತ ಮತದಾರರು ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಹೊಸ ಬದಲಾವಣೆಗೆ ನಾಂದಿ ಹಾಡಬೇಕು” ಎಂದು ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ಮನವಿ ಮಾಡಿಕೊಂಡರು.
       ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, “ತುಮಕೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಪದವೀಧರರನ್ನು ನೋಂದಾಯಿಸಲು ಅಭಿಯಾನವನ್ನೇ ಮಾಡುತ್ತಿದ್ದೇವೆ”ಎಂದರು.
     ಮೂರು ವರ್ಷಗಳ ಹಿಂದೆ ಅಂದರೆ 2016 ರ ಅಕ್ಟೋಬರ್ 31 ರೊಳಗೆ ಪದವಿ ಪಡೆದ ಎಲ್ಲ ಪದವೀಧರರು ನೋಂದಣಿಗೆ ಅರ್ಹರಿದ್ದಾರೆ. ಇದೇ ಅಕ್ಟೋಬರ್ 1 ರಿಂದ ಮತದಾರರ ಹೆಸರು ಸೇರ್ಪಡೆಗೆ ಅವಕಾಶ ಆರಂಭವಾಗಿದ್ದು, ನವೆಂಬರ್ 6 ರವರೆಗೆ ನೋಂದಾಯಿಸಬಹುದು. ಜಿಲ್ಲೆಯ ಎಲ್ಲ ತಾಲ್ಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಅಧಿಕೃತ ದಾಖಲೆಗಳೊಂದಿಗೆ ನಮೂನೆ-18 ರಲ್ಲಿ ಹೆಸರು ನೋಂದಾಯಿಸಬಹುದು. ಪದವಿ ಪ್ರಮಾಣ ಪತ್ರ, ಅಂಕಪತ್ರ, ಪಾಸಿಂಗ್ ಸರ್ಟಿಫಿಕೇಟ್, ಕಾನ್ವೊಕೇಷನ್ ಸರ್ಟಿಫಿಕೇಟ್ ಲಗತ್ತಿಸಬೇಕು. ವಾಸಸ್ಥಳದ ದಾಖಲೆಪತ್ರ, ಆಧಾರ್ ಕಾರ್ಡ್, ಚುನಾವಣಾ ಗುರುತು ಪತ್ರವನ್ನೂ ಇರಿಸಬೇಕು” ಎಂದು ಅವರು ಹೇಳಿದರು.
     ಇದೇ ಸಂದರ್ಭದಲ್ಲಿ ಮತದಾರರ ನೋಂದಣಿಗೆ ಅನುಕೂಲವಾಗುವಂತೆ `ನಮೂನೆ-18′ ರ ಪ್ರತಿಗಳನ್ನು ಬಿಡುಗಡೆ ಮಾಡಿ, ಎಲ್ಲ ಪದವೀಧರರು ನೋಂದಾಯಿಸಿಕೊಳ್ಳುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಬದಲಾವಣೆಗೆ ಕಾರಣರಾಗಬೇಕೆಂದು ವಿನಂತಿಸಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ