ತುಮಕೂರು:
ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ,ಈಗಾಗಲೇ ಸರಕಾರ ತಯಾರಿಸಿರುವ ದಾಸ್ತಾವೇಜುಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಇಂದು ಬೆಸ್ಕಾಂ ನೌಕರರು,ಬೆಸ್ಕಾಂ ವೃತ್ತ ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ, ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ನಗರದ ಶಿವಕುಮಾರಸ್ವಾಮೀಜಿ ವೃತ್ತದಲ್ಲಿರುವ ಬೆಸ್ಕಾಂ ವೃತ್ತ ಕಚೇರಿ ಎದುರು ಇಂದು ಬೆಳಗ್ಗೆ 11 ಗಂಟೆಗೆ ತೊಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ನೌಕರರು ಸರಕಾರ ಕೂಡಲೇ ಖಾಸಗೀಕರಣ ಪ್ರಕ್ರಿಯೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಬೆಸ್ಕಾಂ ವೃತ್ತ ಕಚೇರಿಯ ಅಧೀಕ್ಷಕ ಇಂಜಿನಿಯರ್ ಗೋವಿಂದಪ್ಪ ಮಾತನಾಡಿ,ಕರ್ನಾಟಕ ರಾಜ್ಯದಲ್ಲಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ,ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣಗೊಳಿಸಲು ಹೊರಟಿರುವುದು ಸರಿಯಲ್ಲ ರೈತರು,ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ.ಈ ಮೂರು ಕಂಪನಿಗಳು,ಅದರಲ್ಲಿಯೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ,ಇಡೀ ರಾಜ್ಯದಲ್ಲಿಯೇ ಅತ್ಯುನ್ನತ ಸೇವೆಗೆ ಹೆಸರಾಗಿದೆ.ವಿದ್ಯುತ್ ಸರಬರಾಜು,ಕರ ವಸೂಲಿಯಲ್ಲಿಯೂ ಮುಂಚೂಣಿಯಲ್ಲಿದೆ. ಅಲ್ಲದೆ ಸರಕಾರದ ಎಸ್ಸಿಪಿ, ಟಿ.ಎಸ್ಸಪಿ, ಕುಟೀರ ಜೋತಿ,ಭಾಗ್ಯ ಜೋತಿ,ರೈತರ ಪಂಪಸೆಟ್,ಇನ್ನಿತರ ಯೋಜನೆಗಳ ಮೂಲಕ ವಿದ್ಯುತ್ ಸಂಪರ್ಕ ಪಡೆದವರಿಗೂ ಉತ್ತಮ ಸೇವೆ ಒದಗಿಸಲಾಗುತ್ತಿದೆ .ಹೀಗಿದ್ದೂ ಸರಕಾರ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದರ ಹಿಂದಿರುವ ಹುನ್ನಾರವೇನು ಎಂದು ಪ್ರಶ್ನಿಸಿದರು.
ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಂಗಾಧರಪ್ಪ ಆರ್.ಕೆ.ಮಾತನಾಡಿ, ಕೇಂದ್ರ ಸರಕಾರ ಯಾವುದೇ ನಷ್ಟವಿಲ್ಲದೆ ಲಾಭದಲ್ಲಿಯೇ ನಡೆದುಕೊಂಡು ಹೋಗುತ್ತಿರುವ ಕಂಪನಿಗಳನ್ನು ಖಾಸಗೀಕರಣ ಗೊಳಿಸಲು ಹೊರಟಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ.ಖಾಸಗೀಕರಣದಿಂದ ಈಗ ನೀಡುತ್ತಿರುವ ಸೇವೆಯನ್ನು ಸಮರ್ಪಕವಾಗಿ ನೀಡಲು ಸಾಧ್ಯವಾಗುವುದಿಲ್ಲ.ಹಾಗಾಗಿ 2003ರ ವಿದ್ಯುತ್ ಕಾಯ್ದೆಯನ್ನು ಮುಂದುವರೆಸಬೇಕು,2020ರ ಹೊಸ ಕಾಯ್ದೆಯನ್ನು ಬೆಸ್ಕಾಂ ನೌಕರರು ಧಿಕ್ಕರಸಲಿದ್ದೇವೆ.
ಸರಕಾರ ಖಾಸಗೀಕರಣದಿಂದ ಹಿಂದೆ ಸರಿಯದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ಕೆ.ಪಿ.ಟಿ.ಸಿ.ಎಲ್ ನ ಕಾರ್ಯಪಾಲಕ ಇಂಜಿನಿಯರ್ ಚನ್ನವೀರಯ್ಯ, ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರಾದ ಗಿರೀಶ್ ಕಾರ್ನಾಡ್, ಸಂಘದ ಪದಾಧಿಕಾರಿಗಳಾದ ವೆಂಕಟರಮಣಪ್ಪ, ಹನುಮಂತರಾಯಪ್ಪ, ಪ್ರಶಾಂತ್ ಕೂಡ್ಲಿಗಿ,ಶ್ರೀನಾಥ್,ಶಿವಶಂಕರ್, ಆನಂತರಾಮಯ್ಯ ,ಮಹಮದ್ ಷರೀಫ್ ಸೇರಿದಂತೆ ಎಲ್ಲಾ ಹಂತದ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
