ಯುಗಾದಿ ಹಬ್ಬದ ಪ್ರಯುಕ್ತ 600 ಹೆಚ್ಚುವರಿ ವಿಶೇಷ ಬಸ್ : ಕೆಎಸ್ಆರ್ ಟಿಸಿ

ಬೆಂಗಳೂರು
       ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಒತ್ತಡ ಕಡಿಮೆ ಮಾಡಲು ಮತ್ತು ಖಾಸಗಿ ಬಸ್ ಗಳ ದರ ಪೈಪೋಟಿಗೆ ಕಡಿವಾಣ ಹಾಕಲು ಕೆಎಸ್ಆರ್ ಟಿಸಿಯಿಂದ ಹೆಚ್ಚುವರಿಯಾಗಿ 600 ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ. 
        ಏಪ್ರಿಲ್ 6 ರಂದು ಯುಗಾದಿ ಹಬ್ಬವಿದ್ದು, 5 ರಿಂದಲೇ ವಿಶೇಷ ಹೆಚ್ಚುವರಿ ಬಸ್ ಸೇವೆ ಕಲ್ಪಿಸಲಾಗುತ್ತಿದೆ. ನಂತರ ರಾಜ್ಯ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ 7 ರಂದು ವಿಶೇಷ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 
        ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್, ತಿರುಪತಿ, ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಕಾರ್ಯಾಚರಣೆ ನಡೆಸಲಿದೆ. 
      ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಭಾಗಗಳಿಗೆ ಮಧುರೈ, ಕುಂಭಕೋಣಂ, ತಿರುಚಿ, ಚೆನ್ನೈ, ಕೊಯಮತ್ತೂರ್ ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಹೋಗುವವವರಿಗಾಗಿ ಶಾಂತಿನಗರದಲ್ಲಿನ ಬೆಂಗಳೂರು ಕೇಂದ್ರ ಘಟಕ – 4 ಮತ್ತು ಘಟಕ – 3 ರ ಮುಂಭಾಗದಿಂದ ಬಸ್ ಗಳು ಹೊರಡಲಿವೆ. 
      ಬೆಂಗಳೂರು ನಗರದ ಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್ (ರಾಜಾಜಿನಗರ), ಮಲ್ಲೇಶ್ವರಂ 18ನೇ ಅಡ್ಡ ರಸ್ತೆ, ಬನಶಂಕರಿ, ಜೀವನ್ ಭೀಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರ, ಮುಂತಾದ ಸ್ಥಳಗಳಿಂದ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
     
      ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 
     ಇ-ಟಿಕೇಟ್ ಬುಕಿಂಗ್‌ನ್ನು www.ksrtc.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ, ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Recent Articles

spot_img

Related Stories

Share via
Copy link