ಛಲವಾದಿ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ‘ಕೈ’ ಪಡೆ ದೂರು

ಬೆಂಗಳೂರು:

   ಏಟಿಗೆ ಎದುರೇಟು ಎಂಬಂತೆ ಕಾಂಗ್ರೆಸ್‌‍ ನಾಯಕರು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಭೂ ಅಕ್ರಮ ಪ್ರಕರಣವನ್ನು ಬಯಲಿಗೆ ತಂದಿದ್ದು, ವಿಧಾನಪರಿಷತ್‌ ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

   ವಿಧಾನಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ನೇತೃತ್ವದಲ್ಲಿ ಕಾಂಗ್ರೆಸ್‌‍ನ ಹಲವು ಸದಸ್ಯರು, ನಾಯಕರು ಮಂಗಳವಾರ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ 61 ಪುಟಗಳ ಸುದೀರ್ಘ ದೂರನ್ನು ಸಲ್ಲಿಸಿದರು. ಇದೇ ವೇಳೆ ಆರೋಪಕ್ಕೆ ಸಂಬಂಧಿಸಿದಂತೆ ಅಗತ್ಯ ಪುರಾವೆಗಳನ್ನು ಒದಗಿಸಿದ್ದಾರೆ.

   2002 ರ ನವೆಂಬರ್‌ 28 ರಿಂದ 2004 ರ ಮೇ 5 ರ ನಡುವೆ ಕರ್ನಾಟಕ ವಸತಿ ಮಂಡಳಿ ನಿರ್ದೇಕರಾಗಿದ್ದ ಛಲವಾದಿ ನಾರಾಯಣ ಸ್ವಾಮಿಯವರು ಭೂ ಕಬಳಿಕೆ ಮಾಡಿ ತಾವು ಅಧ್ಯಕ್ಷರಾಗಿರುವ ಆದರ್ಶ ಸೋಶಿಯಲ್‌ ಆ್ಯಂಡ್ ಎಜುಕೇಷನ್‌ ಟ್ರಸ್ಟ್‌ಗೆ ಬಳಸಿಕೊಂಡಿದ್ದು, ಶಾಲೆ ನಿರ್ಮಿಸಿದ್ದಾರೆ ಎಂದು ದೂರಿದ್ದಾರೆ.

   ಈ ಹಗರಣವನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್‌ 13, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 316, 318ರ ಅಡಿ ತನಿಖೆ ನಡೆಸಲು ಅನುಮತಿ ನೀಡಬೇಕು ಹಾಗೂ ನಾರಾಯಣಸ್ವಾಮಿಯವರ ವಿಧಾನಪರಿಷತ್‌ನ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ವಿಧಾನಪರಿಷತ್‌ ಸದಸ್ಯರಾದ ಎಂ.ಆರ್‌.ಸೀತಾರಾಂ, ಮಂಜುನಾಥ್‌ ಭಂಡಾರಿ, ಎಸ್‌.ರವಿ ವಸಂತಕುಮಾರ್‌, ಅನಿಲ್‌ಕುಮಾರ್‌, ದಿನೇಶ್‌ಗೂಳಿಗೌಡ, ಪುಟ್ಟಣ್ಣ, ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್‌ ಬಾಬು, ಸೇರಿದಂತೆ ಹಲವರು ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದರು.

   ಈ ಬಗ್ಗೆ ಮಾತನಾಡಿದ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ಅವರು, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯನ್ನು ವಜಾ ಮಾಡಬೇಕು. ಹೌಸಿಂಗ್ ಬೋರ್ಡ್ ನಿರ್ದೇಶಕರಾಗಿದ್ದಾಗ ಸಿಎ ಸೈಟ್ ಪಡೆದುಕೊಂಡಿದ್ದರು. ಆದರ್ಶ ಸ್ಕೂಲ್ ಎಜುಕೇಶನ್​​ ಗ್ರೂಪ್​​ನ ಚೇರಮನ್ ಆಗಿದ್ದರು ಛಲವಾದಿ. ಇದೀಗ ಸಿಎ ಸೈಟ್ ಪಡೆದ ಜಾಗದಲ್ಲಿ ಆನಂದ್ ಧಂ ಬಿರಿಯಾನಿ ನಡೆಯುತ್ತಿದೆ. ಶಿಕ್ಷಣ ಉದ್ದೇಶಕ್ಕಾಗಿ ಪಡೆದಿರುವ ಸಿಎ ಸೈಟ್​ನಲ್ಲಿ ಬಿರಿಯಾನಿ ಹೋಟೆಲ್​ ನಡೆಸುತ್ತಿದ್ದಾರೆ. ಶಿಕ್ಷಣ ಉದ್ದೇಶಕ್ಕೆ ಪಡೆದ ಜಾಗವನ್ನು ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ರಾಜ್ಯಪಾಲರಿಗೆ ಇದನ್ನು ವಿವರವಾಗಿ ತಿಳಿಸಿದ್ದೇವೆ ಎಂದರು.

   ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ವಿಪಕ್ಷ ನಾಯಕನ ಸ್ಥಾನದ ಗಾಂಭೀರ್ಯತೆಗೆ ಧಕ್ಕೆ ತಂದಿದ್ದಾರೆ. ಕಳಂಕಿತರು ಆ ಸ್ಥಾನದಲ್ಲಿ ಇರಬಾರದು. 2002-2005ರ ವರೆಗೆ ಕರ್ನಾಟಕ ಹೌಸಿಂಗ್ ಬೋರ್ಡ್ ನಿರ್ದೇಶಕ ಆಗಿರ್ತಾರೆ. ಅವರ ಸ್ಥಾನ ದುರುಪಯೋಗ ಮಾಡಿಕೊಂಡು ಹೌಸಿಂಗ್ ಬೋರ್ಡ್​​ಗೆ ಭೂಸ್ವಾಧೀನ ಆಗಿದ್ದ ಲ್ಯಾಂಡ್ ಅನ್ನು ತಾವು ಪಡೆಯುತ್ತಾರೆ. ಸ್ಟ್ರೇ ಸೈಟ್ ಬಿಡುಗಡೆ ಮಾಡಿ ಅಂತ ಮೂಲ ಜಮೀನು ಮಾಲೀಕರು ಹೌಸಿಂಗ್ ಬೋರ್ಡ್​ಗೆ ಅರ್ಜಿ ಹಾಕ್ತಾರೆ. ಆಗ ಬೋರ್ಡ್ ನಿರ್ದೇಶಕರಾಗಿದ್ದ ಛಲವಾದಿ ನಾರಾಯಣಸ್ವಾಮಿ 2004 ರಲ್ಲಿ ತಮಗೇ ಆ ಸಿಎ ಸೈಟ್ ನೀಡಿ ಎಂದು ಅರ್ಜಿ ಹಾಕಿಕೊಳ್ತಾರೆ. ತಾವೇ ನಿರ್ದೇಶಕರಾಗಿದ್ದರೂ ಕೂಡ ಕಾನೂನು ಬಾಹಿರವಾಗಿ ಇದನ್ನು ಪಡೆಯುತ್ತಾರೆ. ಆದರ್ಶ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾಗಿದ್ದುಕೊಂಡು ಸಿಎ ಸೈಟ್ ಪಡೆಯುತ್ತಾರೆ ಎಂದು ಹೇಳಿದರು.

   ಐದು ವರ್ಷದಲ್ಲಿ ಶಾಲೆಯ ಕಟ್ಟಡ ಕಟ್ಟಬೇಕು ಎಂಬ ಕಂಡೀಷನ್ ಮೇಲೆ ಹೌಸಿಂಗ್ ಬೋರ್ಡ್ ನಿವೇಶನ ನೀಡ್ತಾರೆ. ಇದೇ ನಿವೇಶನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಶಾಲೆ ಕಟ್ಟುವ ಬದಲು ಟೆಲಿ ಕಮ್ಯುನಿಕೇಷನ್ ಆ್ಯಂಡ್ ಪಬ್ಲಿಕ್ ಸರ್ವೀಸ್ ಕಂಪನಿ ಹೆಸರಿಗೆ ಈ ಜಾಗವನ್ನು ಮಾರ್ಪಾಡು ಮಾಡ್ತಾರೆ. ಸೇಲ್ ಡೀಡ್ ಆಗುವ ಮೊದಲೇ ಈ ರೀತಿ ಮಾರ್ಪಾಡು ಮಾಡಿರುತ್ತಾರೆ. ಯಾವಾಗ ಟೆಲಿ ಕಮ್ಯುನಿಕೇಷನ್​​ನಲ್ಲಿ ಛಲವಾದಿ ನಾರಾಯಣಸ್ವಾಮಿ ಎಕ್ಸ್​ಪರ್ಟ್ ಆದರೋ ಅವರೇ ಹೇಳಬೇಕು ಎಂದು ಲೇವಡಿ ಮಾಡಿದರು

Recent Articles

spot_img

Related Stories

Share via
Copy link
Powered by Social Snap