ಬಳ್ಳಾರಿ
ಸರ್ಕಾರಿ ಸ್ವಾಮ್ಯದ ಅಂಗನವಾಡಿ ಶಾಲೆಯ ಮಕ್ಕಳು ಕಾನ್ವೆಂಟ್ ಸ್ಕೂಲ್ ಮಕ್ಕಳಿಗಿಂತ ಕಡಿಮೆ ಇರಬಾರದು ಎನ್ನುವ ಸದಾಶಯದೊಂದಿಗೆ ನಗರದಲ್ಲಿ 4 ದಿನಗಳ ಕಾಲ ಅಂಗನವಾಡಿ ಮಕ್ಕಳ ಬಲವರ್ಧನ ಸಮಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕಳೆದೆರಡು ದಿನಗಳಿಂದ ಇಲ್ಲಿನ ದುರ್ಗಮ್ಮ ಗುಡಿ ಬಳಿ ಇರುವ ಕಸ್ತೂರಿ ಬಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ, ಸಂಯೋಜಕರಾದ ಕೊಟ್ರೇಶ್, ಮೇಲ್ವಿಚಾರಕರಾದ ಸಾವಿತ್ರಮ್ಮ, ಮರಿಳಮ್ಮ ಇನ್ನಿತರರು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ತಬೇತಿ ನೀಡುತ್ತಿದ್ದಾರೆ. ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಈ ಕಾರ್ಯಾಗಾರ ನಡೆಯುತ್ತಿದೆ.
ಅದೇರೀತಿ ಬಳ್ಳಾರಿ ನಗರದಲ್ಲಿಯೂ ಸಹ ತರಬೇತಿ ನಡೆಯುತ್ತಿದ್ದು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಗುತ್ತಿದೆ. ಆಟೋಟ, ಪಾಠ, ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು, ಮಕ್ಕಳಲ್ಲಿನ ಬೌದ್ಧಿಕ ಹಾಗೂ ಮಾನಸಿಕ ಸ್ಥಿತಿಗೆ ಅನುಗುಣವಾಗಿ ಅವರನ್ನು ಶ್ಯಕ್ಷಣಿಕವಾಗಿ ಕ್ರಿಯಾಶೀಲಗೊಳಿಸುವುದು, ಗುಂಪು ಚರ್ಚೆ, ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಉತ್ತೇಜನಗೊಳಿಸುವುದು ಹೀಗೆ ಹಲವು ಬಗೆಯಲ್ಲಿ ಮಕ್ಕಳನ್ನು ಸಮರ್ಥ ಹಾಗೂ ಸದೃಢರನ್ನಾಗಿಸಲು ತರಬೇತಿ ನಡೆಯುತ್ತಿದೆ.
ತರಬೇತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಎಸ್.ಅರ್ಕಾಣಿ, ಲಲಿತಾ, ಶಾರದಾ, ವರಲಕ್ಷ್ಮಿ, ನಾಗರತ್ನ, ರೇಣುಕಾ ಸೇರಿದಂತೆ 20ಕ್ಕೂ ಹೆಚ್ಚು ಅಂಗನವಾಡಿ ಶಾಲೆಯ ಕಾರ್ಯಕರ್ತೆಯರು ಪಾಲ್ಗೊಂಡಿದ್ದಾರೆ.