ಹರಪನಹಳ್ಳಿ:
ಮತದಾನ ಜಾಗೃತಿ ಅಭಿಯಾನ ಅಂಗವಾಗಿ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಸಾಮರ್ಥ್ಯಸೌಧದಲ್ಲಿ ಬುಧವಾರ ಕವಿಗೋಷ್ಠಿ ಏರ್ಪಡಿಸಲಾಗಿತ್ತು.
ಕವಿಗೋಷ್ಠಿಗೆ ಚಾಲನೆ ನೀಡಿದ ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಬ್ ಶಿರಹಟ್ಟಿ ಮಾತನಾಡಿ, ಮತದಾರರು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಮತದಾರರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಮತದಾರನೂ ಸಹ ಮತದಾನದಿಂದ ಹೊರಗೆ ಉಳಿಯಬಾರದು ಹಾಗೂ ನೂರಕ್ಕೆ ನೂರರಷ್ಟು ಮತದಾನ ಆಗಬೇಕು ಎಂಬುದು ಚುನಾವಣಾ ಆಯೋಗದ ಗುರಿಯಾಗಿದೆ. ವಿದ್ಯಾವಂತರೇ ನೆಲೆಸಿರುವ ಮಹಾ ನಗರಗಳಲ್ಲಿ ಮತದಾನ ಪ್ರಮಾಣ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿ ಎಂದರು.
ತಹಶೀಲ್ದಾರ ಪ್ರಸಾದ ಅವರು ಮಾತನಾಡಿ, ಭವಿಷ್ಯದ ರಾಷ್ಟ್ರ ನಿರ್ಮಾಣ ಒಂದು ಮತವೂ ಕೂಡ ಅತ್ಯಮೂಲ್ಯ. ಪ್ರತಿಯೊಬ್ಬರು ಮತದಾನ ಮಾಡಿ ದೇಶ ಅಭಿವೃದ್ಧಿಗೆ ಕಾರಣರಾಗಬೇಕು. ಕವಿಗೋಷ್ಠಿ ನಮ್ಮಲ್ಲಿನ ವಿಚಾರಧಾರೆ, ಅಭಿರುಚಿ, ಅಭಿವ್ಯಕ್ತಪಡಿಸಲು ಅತ್ಯುತ್ತಮ ಸಾಧನವಾಗಿದೆ ಎಂದು ಹೇಳಿದರು.
ಕಸಾಪ ಅಧ್ಯಕ್ಷ ರಾಮನಮಲಿ ಅವರ `ಮತ ನಮ್ಮ ಮೂರನೇ ಕಣ್ಣು’ ಎಂಬ ಶಿರ್ಷಿಕೆಯ ಕವನ `ನಾನು ಮತ ಹಾಕುತ್ತೇನೆ, ದೇಶ ಪ್ರೇಮದ ಚಿಂತನೆಯಲ್ಲಿ, ರಾಷ್ಟ್ರದ ಹಿತ ಕಾಯಲೆಂದು, ಪ್ರಜಾಪ್ರಭುತ್ವ ಉಳಿಸಲೆಂದು’ ಹಾಗೂ ಸಾಹಿತಿ ಇಸ್ಮಾಯಿಲ್ ಎಲಿಗಾರ ವಾಚಿಸಿದ `ನಾಳಿನ ನೆಮ್ಮದಿಗಾಗಿ’ ಕವನದ `ಸಾಕಿನ್ನು ಇವರ ಸಹವಾಸ, ಹುಡುಕೋಣ ಬನ್ನಿ ಸೂಕ್ತ ಅಭ್ಯರ್ಥಿಯ ಆವಾಸ’! ಸಾಲುಗಳು ಕಲ್ಪನೆಯ ದೇಶವನ್ನು ಬಿಂಬಿಸುತ್ತಿದ್ದವು.
ಕಸಾಪ ಕಾರ್ಯದರ್ಶಿ ಹೇಮಣ್ಣ ಮೋರಗೆರೆ ಅವರ ‘ಮತದಾನ, ಬನ್ನಿ ಆಯ್ಕೆ ಮಾಡೋಣ’, ಕವಯತ್ರಿ ಸುಭದ್ರಮ್ಮ ಮಾಡಲಗೆರೆ ಅವರ ‘ಮತದಾನ ಮಾಡಿ, ಮಾಡಿಸಿ’, ಟಿ.ಸುಚಿತ್ರ ಅವರ ‘ಮತದಾನ’, ಭೀಮಪ್ಪ ಜಂಗಮತುಂಬಿಕೆರೆ ಅವರ ‘ಚುನಾವಣೆ ಹಬ್ಬ’, ನಾಗರಾಜ ಪಟ್ನಾಮದ ಅವರ `ಒಂದು ಎರಡೋ ಬೂತ್ ಗೆ ಹೊರಡಿ’ ಕವನಗಳು ಗಮನ ಸೆಳೆದವು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ಹಣಾಧಿಕಾರಿ ಮಮತಾ ಹೊಸಗೌಡರ ಅವರೂ ಕವನ ವಾಚಿಸಿ ಕವಿಗಳಲ್ಲಿ ಸ್ಪೂರ್ತಿ ತುಂಬಿದರು. ಕಸಾಪ ಕಾರ್ಯದರ್ಶಿ ಗಂಗಾಧರ, ಖಲೀಲ್, ಹಾರಕನಾಳು ಕೊಟ್ರೇಶ್ ಇದ್ದರು.ಉಪನ್ಯಾಸಕ ಎಂ,ತಿಮ್ಮಪ್ಪ, ಶೇಖರಗೌಡ ಪಾಟೀಲ, ಆರ್.ಧನರಾಜ, ಬಿ.ಸಿ.ಮಮತಾ, ಆರ್.ಪಿ.ಮಂಜುನಾಥ್, ಪಟ್ನಾಮದ ವೆಂಕಟೇಶ್, ಜಿ.ಮಹಾದೇವಪ್ಪ, ಕೆ.ಎಸ್.ವೀರಭದ್ರಪ್ಪ, ಕಬ್ಬಳ್ಳಿ ಗೀತಾ, ಭೋವಿ ರಾಮಚಂದ್ರ, ಕಾಂತೇಶ್ ರೆಡ್ಡಿ, ಎಂ.ಉಮ್ಮಶ್ ಇತರರು ಕವನ ವಾಚಿಸಿದರು.