ಚಿತ್ರದುರ್ಗ:
ಮಕ್ಕಳಿಗೆ ಬಂಡವಾಳ ಕಟ್ಟಿಕೊಡುವ ಬದಲು ಬದುಕುವ ಶಿಕ್ಷಣ ಕೊಡಬೇಕಿದೆ ಎಂದು ಗೊಡಬನಹಾಳ್ ಗುರುಶಾಂತೇಶ್ವರ ಪ್ರೌಢಶಾಲೆಯ ಶಿಕ್ಷಕಿ ಅನ್ನಪೂರ್ಣ ಆನಂದ್ ಹೇಳಿದರು.ಜಿಲ್ಲಾ ಲಿಂಗಾಯತ ಶಿವಸಿಂಪಿ ಮಹಿಳಾ ಘಟಕದಿಂದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ಇಂಜಿನಿಯರ್ ಡಾಕ್ಟರ್‍ಗಳನ್ನಾಗಿ ಮಾಡಿ ಹಣ ಗಳಿಸುವುದೇ ಇಂದಿನ ಶಿಕ್ಷಣ ಪದ್ದತಿಯಾಗಿದೆ. ಆರ್ಥಿಕತೆಯಿಂದಲೇ ಒಬ್ಬ ವ್ಯಕ್ತಿ ಯ ಯೋಗ್ಯತೆಯನ್ನು ಸಮಾಜದಲ್ಲಿ ಅಳೆಯುವಂತಾಗಿರುವುದರಿಂದ ಎಲ್ಲರೂ ಪೈಪೋಟಿಯಲ್ಲಿ ಸಾಗುತ್ತಿದ್ದೇವೆ. ಮಹಿಳೆಗೆ ಶಿಕ್ಷಣ ಬೇಕು. ವಿದ್ಯೆಯಿಂದ ವಿನಯ, ಧನ, ಗೌರವ ಎಲ್ಲವೂ ಸಿಗುತ್ತದೆ. ಪದವಿ ಪಡೆಯುವುದು ನಿಜವಾದ ಶಿಕ್ಷಣವಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯ, ಧೈರ್ಯ, ಯುಕ್ತಿ, ಶಕ್ತಿ, ಬುದ್ದಿಯನ್ನು ತುಂಬುವ ಶಿಕ್ಷಣವನ್ನು ಮನೆಯಲ್ಲಿ ತಾಯಿ ಮೊದಲು ಕಲಿಸಬೇಕು. ಮಕ್ಕಳನ್ನು ಅಸಹಾಯಕರನ್ನಾಗಿ ಬೆಳೆಸುತ್ತಿದ್ದೇವೆ. ನೈಜವಾಗಿ ಮಗು ಬೆಳೆಯುತ್ತಿಲ್ಲ. ಮನೋಬಲ, ಮನೋಧೈರ್ಯವನ್ನು ಮಕ್ಕಳಿಗೆ ತುಂಬುಲ್ಲಿ ವಿಫಲರಾಗಿದ್ದೇವೆ ಎಂದು ವಿಷಾಧಿಸಿದರು.
ಸಮಾಜದಲ್ಲಿ ಪ್ರೋತ್ಸಾಹ, ನಿಂದನೆ, ಪ್ರೇರಣೆ ಎಲ್ಲವೂ ಇದೆ. ನೀವುಗಳು ನಡೆಯುವ ದಾರಿಯಲ್ಲಿ ಯಾವುದು ಸರಿ, ತಪ್ಪು ಎನ್ನುವುದನ್ನು ನಿರ್ಧರಿಸುವ ಶಿಕ್ಷಣ ಬೇಕು. ಮಕ್ಕಳಿಗೆ ಪುಸ್ತಕದ ಶಿಕ್ಷಣಕ್ಕಿಂತ ಮಸ್ತಕದ ಶಿಕ್ಷಣ ಅಗತ್ಯವಾಗಿದೆ. ಆಸೆ ಇರಬೇಕು. ದುರಾಸೆ ಬೇಡ.
ಮನಸ್ಸನ್ನು ನಿಗ್ರಹಿಸುವ ಶಕ್ತಿ ಮಕ್ಕಳಿಗೆ ಸಿಗಬೇಕು. ಇದರಿಂದ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು. ಸಹಿಷ್ಣತೆ ಶಕ್ತಿಯನ್ನು ತಾಯಿಯಿಂದ ಮಾತ್ರ ಮಗುವಿಗೆ ಕೊಡಲು ಸಾಧ್ಯ. ಸಂಸ್ಕಾರಯುತ ಶಿಕ್ಷಣ ಇಂದಿನ ಸಮಾಜಕ್ಕೆ ಬೇಕು. ಹೆಣ್ಣು ಮಗುವಿಗೆ ಮನೆಯಲ್ಲಿ ಚೌಕಟ್ಟು, ನಿರ್ಬಂಧ ವಿಧಿಸಲಾಗುತ್ತಿದೆ. ಹೆಣ್ಣು-ಗಂಡು ಇಬ್ಬರಿಗೂ ಚಿಕ್ಕಂದಿನಿಂದಲೇ ಸಂಸ್ಕಾರ ಕಲಿಸುವ ಜವಾಬ್ದಾರಿ ತಂದೆ-ತಾಯಿಗಳ ಮೇಲಿದೆ. ಸಾಮಾಜಿಕ ಕಟ್ಟುಪಾಡು ಕಲಿಸಬೇಕಿದೆ. ಹೆಣ್ಣು-ಗಂಡು ಎನ್ನುವ ತಾರತಮ್ಯ ಬೇಡ. ಮೂಲ ಸಂಸ್ಕಾರವನ್ನು ಮಕ್ಕಳಿಗೆ ಕೊಟ್ಟು ಬಂಧು, ಬಾಂಧವ್ಯ ಬೆಳೆಸಿ ಎಂದು ಮಹಿಳೆಯರಿಗೆ ಕರೆ ನೀಡಿದರು.
ಜಿಲ್ಲಾ ಲಿಂಗಾಯತ ಶಿವಸಿಂಪಿ ಮಹಿಳಾ ಘಟಕ ಐದನೆ ವರ್ಷಕ್ಕೆ ಕಾಲಿಟ್ಟಿರುವುದು ಸುಲಭವಲ್ಲ. ನ್ಯೂಯಾರ್ಕ್‍ನ ಕಾರ್ಖಾನೆಯೊಂದರಲ್ಲಿ ಕಾರ್ಮಿಕ ಮಹಿಳೆಯೊಬ್ಬಳಿಗೆ ಅನ್ಯಾಯವಾದಾಗ ಪ್ರತಿಭಟನೆ ನಡೆಸಲಾಯಿತು. ಅಂದಿನಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಗೌರವ, ಸಾಮಾಜಿಕ ನ್ಯಾಯ, ಸವಲತ್ತುಗಳನ್ನು ಪಡೆಯಲು ಮಹಿಳೆ ಸಂಘಟನೆಯಾಗಬೇಕು. ಜಿಲ್ಲಾ ಲಿಂಗಾಯತ ಶಿವಸಿಂಪಿ ಮಹಿಳಾ ಘಟಕಕ್ಕೆ ಇನ್ನು ಹೆಚ್ಚಿನ ಶಕ್ತಿ ಬೇಕು. ಮಹಿಳೆ ಎಲ್ಲಾ ರಂಗದಲ್ಲಿಯೂ ಸಾಧನೆ ಮೆರೆದು ತೋರಿಸುವ ಅನಿವಾರ್ಯತೆಯಿದೆ ಎಂದು ತಿಳಿಸಿದರು.
ಎಲ್ಲಾ ರಂಗದಲ್ಲಿಯೂ ಮಹಿಳೆ ಹೆಜ್ಜೆ ಇಟ್ಟಿರುವುದರಿಂದ ಎಲ್ಲಾ ಕಡೆಯಲ್ಲಿಯೂ ಮಹಿಳೆಗೆ ಪ್ರಾಮುಖ್ಯತೆ ಕೊಡಲಾಗಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ನಿರ್ದೇಶಕಿ ಆರತಿ ಮಹಡಿಶಿವಮೂರ್ತಿ ಮಾತನಾಡಿ ಹಿಂದಿನ ಕಾಲದಲ್ಲಿ ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದಳು. ಬೆಳಗಿನ ಜಾವ ಕೋಳಿ ಕೂಗುವ ಮುನ್ನವೇ ಎದ್ದು ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಳು. ಆದರೆ ಈಗ ಕಾಲ ಬದಲಾಗಿದೆ ಪುರಷ ಪ್ರಧಾನ ಸಮಾಜದಲ್ಲಿ ಮಹಿಳೆ ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದಾಳೆ. ಕ್ರೀಡೆ, ಸಿನಿಮ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮಹಿಳೆ ಪುರುಷನಿಗೆ ಸರಿಸಮಾನವಾಗಿ ನಿಂತಿದ್ದಾಳೆ. ಆದರೂ ಮಹಿಳೆಯ ಮೇಲಿನ ಶೋಷಣೆ ಇನ್ನು ನಿಂತಿಲ್ಲ ಎಂದು ನೊಂದು ನುಡಿದರು.
ಜಿಲ್ಲಾ ಲಿಂಗಾಯತ ಶಿವಸಿಂಪಿ ಮಹಿಳಾ ಘಟಕ ಐದನೆ ವರ್ಷದ ವಿಶ್ವಮಹಿಳಾ ದಿನಾಚರಣೆ ಆಚರಿಸಿಕೊಂಡು ಬರುವುದರ ಜೊತೆಯಲ್ಲಿ ಇನ್ನು ಹೆಚ್ಚಿ ಶಕ್ತಿಶಾಲಿಯಾಗಬೇಕು. ಇದು ಪೈಪೋಟಿ ಯುಗವಾಗಿರುವುದರಿಂದ ಪುರಷ-ಮಹಿಳೆ ಸಮಾನವಾಗಿ ದುಡಿದಾಗ ಮಾತ್ರ ನೆಮ್ಮದಿಯಾದ ಬದುಕು ಸಾಗಿಸಬಹುದು ಎಂದು ಹೇಳಿದರು.
ವಿಶ್ವ ಮಹಿಳಾ ದಿನಾಚರಣೆ ಆಚರಿಸಿಕೊಳ್ಳುವಷ್ಟು ಮಹಿಳೆ ಮುಂದುವರೆದಿದ್ದರೂ ಇನ್ನು ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಶೋಷಣೆ ನಿರಂತರವಾಗಿ ನಡೆಯುತ್ತಿದೆ ಇದು ನಿಂತಾಗ ಮಾತ್ರ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಲಿಂಗಾಯತ ಶಿವಸಿಂಪಿ ಮಹಿಳಾ ಘಟಕದ ಅಧ್ಯಕ್ಷೆ ಕವಿತ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕುಸುಮ ರಾಜಣ್ಣ ವೇದಿಕೆಯಲ್ಲಿದ್ದರು. ಸುಜಾತ ನಾಗರಾಜ್ ಪ್ರಾರ್ಥಿಸಿದರು. ಕವಿತ ಸುರೇಶ್ ಸ್ವಾಗತಿಸಿದರು. ಕುಸುಮ ರಾಜಣ್ಣ ವಾರ್ಷಿಕ ವರದಿ ಓದಿದರು. ಸಮಾರಂಭದ ನಂತರ ಸಾಂಸ್ಕತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ