ಬೆಂಗಳೂರು
ಕುಳಿತು ಮದ್ಯಪಾನ ಮಾಡಲು ಜಾಗ ಕೊಡಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಆರೇಳು ಮಂದಿ ದುಷ್ಕರ್ಮಿಗಳು ಮಹಿಳೆಯರ ಪಿಜಿ ಹಾಸ್ಟೆಲ್‍ಗೆ ನುಗ್ಗಿ ಮಾಲೀಕ ಮತ್ತವನ ಸ್ನೇಹಿತರ ಮೇಲೆ ಗಂಭೀರ ಹಲ್ಲೆ ನಡೆಸಿರುವ ದುರ್ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಏ.2ರ ರಾತ್ರಿ 12.10ರಂದು ನಡೆದ ಈ ಕೃತ್ಯವು ತಡವಾಗಿ ಬೆಳಕಿಗೆ ಬಂದಿದ್ದು ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡಿರುವ ಬಂಡೆಪಾಳ್ಯದ ಮಂಗಮ್ಮನಪಾಳ್ಯದ ಗ್ರೀನ್ಸ್ ಹೌಸ್ ಮಹಿಳೆಯರ ಪಿಜಿ ಮಾಲೀಕ ಭಾಸ್ಕರ್ ರೆಡ್ಡಿ ರೆಡ್ಡಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ಸಹೋದರ ಜಗನ್ ರೆಡ್ಡಿ ಹಾಗೂ ಅನಿಲ್ ಕುಮಾರ್‍ಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಮನಬಂದಂತೆ ಹಲ್ಲೆ ನಡೆಸಿರುವ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಡಪ ಮೂಲದ ಭಾಸ್ಕರ್ ರೆಡ್ಡಿ ಆರು ವರ್ಷಗಳಿಂದ ಮಂಗಮ್ಮನಪಾಳ್ಯದಲ್ಲಿ ಎರಡು ಮಹಿಳೆಯರ ಪಿಜಿ ನಡೆಸುತ್ತಿದ್ದು ಅವರ ಪಿಜಿಯೊಂದರ ಬಳಿ ಕಳೆದ ಏ.2ರ ರಾತ್ರಿ 12.10ಕ್ಕೆ ಸುಮಾರು ಆರೇಳು ಮಂದಿ ಯುವಕರು ಕುಡಿಯಲು ಜಾಗ ಬೇಕು ಎನ್ನುತ್ತಾ ಪಿಜಿಗೆ ನುಗ್ಗಲು ಪ್ರಯತ್ನಿಸಿದ್ದಾರೆ. ತಡೆಯಲು ಬಂದ ಭಾಸ್ಕರ್ ಸೇರಿದಂತೆ ಮೂವರಿಗೆ ಆರೇಳು ಮಂದಿ ಮನಬಂದಂತೆ ನಡುರಸ್ತೆಯಲ್ಲಿ ಥಳಿಸಿ ದೊಣ್ಣೆಯಿಂದ ಬಲವಾಗಿ ಹೊಡೆದು ಇತರರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಪರಾರಿಯಾಗಿರುವ ಆರೋಪಿಗಳ ಪೈಕಿ ಸಾಗರ್ ಎಂಬಾತನನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಬಂಡೆಪಾಳ್ಯ ಪೊಲೀಸರು ಎರಡು ತಂಡ ರಚಿಸಿ ಶೋಧಕಾರ್ಯ ನಡೆಸಿದ್ದಾರೆ ಎಂದು ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
