188 ಗ್ರಾಪಂಗಳಿಗೆ ಚುನಾವಣೆ ಪ್ರಕಟಿಸಿದ ಆಯೋಗ

ಬೆಂಗಳೂರು

    ರಾಜ್ಯ ಚುನಾವಣಾ ಆಯೋಗ  ಸೋಮವಾರ ರಾಜ್ಯಾದ್ಯಂತ 188 ಗ್ರಾಮ ಪಂಚಾಯಿತಿಗಳ 430 ಸ್ಥಾನಗಳಿಗೆ ಚುನಾವಣೆಯನ್ನು ಪ್ರಕಟಿಸಿದೆ.

   ಜುಲೈ 23 ರಂದು ಚುನಾವಣೆ ನಡೆಯಲಿದ್ದು, ಜುಲೈ 26 ರಂದು ಮತ ಎಣಿಕೆ ನಡೆಯಲಿದೆ. 14 ಗ್ರಾಮ ಪಂಚಾಯಿತಿಗಳ 207 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಆಗಸ್ಟ್‌ನಲ್ಲಿ ಅವಧಿ ಮುಕ್ತಾಯವಾಗಲಿದೆ.

    ಅಲ್ಲದೆ, ವಿವಿಧ ಕಾರಣಗಳಿಂದ ತೆರವಾಗಿರುವ 174 ಗ್ರಾಮ ಪಂಚಾಯಿತಿಗಳ 223 ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

    ಜು.6ಕ್ಕೆ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲು, ನಾಮಪತ್ರಗಳನ್ನು ಸಲ್ಲಿಸಲು ಜು.12ರಂದು ಕೊನೆಯ ದಿನವಾಗಿದೆ. ಇನ್ನು ಜು.13ರಂದು ನಾಮಪತ್ರಗಳನ್ನು ಪರಿಶೀಲಿಸಲು, ಜು.15ಕ್ಕೆ ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಇನ್ನು ಮತದಾನಕ್ಕೆ ಅವಶ್ಯವಿದ್ದರೆ, ಮತದಾನವನ್ನು ನಡೆಸಲು ಜು.23ಕ್ಕೆ ಸೂಚಿಸಲಾಗಿದೆ. ಮರು ಮತದಾನ ಅವಶ್ಯವಿದ್ದರೆ, ಮತದಾನವನ್ನು ಜು.25ಕ್ಕೆ ನಡೆಸಲು ಆಯೋಗ ತಿಳಿಸಿದೆ. ಜು.26ಕ್ಕೆ ಮತಗಳ ಎಣಿಕೆ ನಡೆಯಲಿದೆ.

    ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜು.6 ಹಾಗೂ ಜು.26ರವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರಲಿದೆ. ಕಳೆದ ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿ ಕುರಿತು ಆದೇಶ ಹೊರಡಿಸಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನಡವಳಿಗಳ ಅನ್ವಯ ಈ ಆದೇಶ ಪ್ರಕಟಿಸಲಾಗಿತ್ತು.

   ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪ್ರಕಾಶ್ ಎಸ್. ಮುರಬಳ್ಳಿ ಈ ಕುರಿತು ಆದೇಶ ಹೊರಡಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44(2)ರ ಪ್ರಕಾರ, ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗದಿಪಡಿಸಬೇಕಾಗಿರುತ್ತದೆ ಎಂದು ಹೇಳಿದ್ದರು.

    ಮೊದಲನೇ ಅವಧಿಯ ನಿಗದಿಪಡಿಸಿದ ಮೀಸಲಾತಿಗಳನ್ನು ಪರಿಗಣಿಸಿ 2020ನೇ ಸಾಲಿನ ಚುನಾವಣೆ ನಂತರದ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಮೀಸಲಾತಿ ನಿಗದಿಪಡಿಸುವಾಗ ಸೂಚನೆಗಳನ್ನು ಪಾಲಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap