ಹುಳಿಯಾರು:

ಯುಗಾದಿ ಹಬ್ಬದ ಮೊದಲ ದಿನ ಎಲ್ಲರೂ ಒಬ್ಬಟ್ಟಿನ ಸಿಹಿ ತಿಂದು ಹಬ್ಬವನ್ನು ಆಚರಿಸಿದರೆ ಮಾರನೆಯ ದಿನ ಸಸ್ಯಹಾರಿಗಳು ನುಗ್ಗೆಕಾಯಿ ಸಾರು ಹಾಗೂ ಮಾಂಸಹಾರಿಗಳು ಕುರಿ ಕೋಳಿ ಅಡಿಗೆ ಮಾಡುವ ಮೂಲಕ ವರ್ಷದ ತೊಡಕು ಆಚರಿಸುವುದು ಸಾಮಾನ್ಯ.
ಮಾಂಸಾಹಾರಿ ಪ್ರೇಮಿಗಳು ಯುಗಾದಿಗಿಂತ ಈ ದಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತ ಬಂದಿದ್ದು ಇಂದು ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಊಟಕ್ಕೆ ಕರೆಯುವುದು ವಾಡಿಕೆ. ಹಬ್ಬದ ಹೊಸ ತೊಡಕು ಪ್ರಯುಕ್ತ ಮುಂಜಾನೆಯಿಂದಲೆ ಪಟ್ಟಣದ ವಿವಿಧ ಮಾಂಸಾಹಾರಿ ಅಂಗಡಿಗಳಲ್ಲಿ ಮಾಂಸದ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಖಾರದ ಹಬ್ಬಕ್ಕಾಗಿ ಕುರಿ, ಕೋಳಿ ಕೊಳ್ಳಲು ಅಕ್ಕ-ಪಕ್ಕದ ಹಳ್ಳಿಗಳ ಜನ ಪಟ್ಟಣಕ್ಕೆ ಬಂದ ಕಾರಣ ಒಂದು ರೀತಿಯ ಜಾತ್ರಾ ವಾತಾವರಣ ಉಂಟಾಗಿತ್ತು. ಮಧ್ಯಾನ್ಹದವರೆಗೂ ಲಾರಿಗಟ್ಟಲೆ ಕೋಳಿ ಭೀಕರಿಯಾಯ್ತು. ಇಂದು ಕೋಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದಿದ್ದರಿಂದ ಮಾಮೂಲಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಯಿತು.
ಮಧ್ಯಾಹ್ನದೊಳಗೆ ಕೋಳಿ ಖಾಲಿಯಾಗಿದ್ದು ಕೊನೆ ಕೊನೆಯಲ್ಲಿ ಕೆಜಿಗೆ 150 ರು.ಗಳಿಗೆ ಕೋಳಿ ಬೆಲೆ ಏರಿ ವ್ಯಾಪಾರಿಗಳಿಗೆ ಲಾಟರಿ ಹೊಡೆದಂತೆ ವ್ಯಾಪಾರ ವಹಿವಾಟು ನಡೆಯಿತು. ಹಳ್ಳಿಗಳಿಂದ ಬಂದ ರೈತರು ಕೈಯಲ್ಲಿ ಮೂರ್ನಾಲ್ಕು ಕೋಳಿ ನೇತು ಹಾಕಿಕೊಂಡು ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
