ಕೊರಟಗೆರೆ
ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ನಾನು ಹಾಗೂ ವೀರಣ್ಣನವರು ಒಟ್ಟೊಟ್ಟಿಗೆ ಕೆಲಸ ಮಾಡಿದ್ದು, ಆರ್ಥಿಕ ಸಂಕಷ್ಟವಿದ್ದ ಸಂದರ್ಭದಲ್ಲಿ ಸಣ್ಣ ಉಳಿತಾಯ ಖಾತೆ ಹೊಂದಿದ್ದ ವೀರಣ್ಣನವರಿಗೆ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸಿ ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ ಹೆಗ್ಗಳಿಕೆ ಸಲ್ಲುತ್ತದೆ ಎಂದು ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ. ದೇವೆಗೌಡರು ಪ್ರಶಂಸೆ ವ್ಯಕ್ತಪಡಿಸಿದರು.
ಅವರು ಕೊರಟಗೆರೆ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ ಮಾಜಿ ಸಚಿವ ಸಿ.ವೀರಣ್ಣನವರ ಮನೆಗೆ ಭೇಟಿ ನೀಡಿ ಮಾತನಾಡುತ್ತಾ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಿ.ವೀರಣ್ಣನವರು ನನ್ನ ಪರವಾಗಿ ಮತ ಯಾಚನೆ ಮಾಡಲಿದ್ದು, ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ವೀರಣ್ಣನವರು ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರದಲ್ಲಿ ನಿಷ್ಠಾವಂತ ಮತ್ತು ಪ್ರಾಮಾಣಿಕ ಸಚಿವರಾಗಿ ಕೆಲಸ ನಿರ್ವಹಿಸಿರುವ ವ್ಯಕ್ತಿಯಾಗಿದ್ದಾರೆ. ಅವರು ಕೊರಟಗೆರೆ ವಿಧಾನ ಸಭಾಕ್ಷೇತ್ರ ಸೇರಿದಂತೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ನನ್ನ ಪರವಾಗಿ ಕೆಲಸ ಮಾಡಿ ನನ್ನ ಗೆಲುವಿಗೆ ಸಹಕರಿಸುತ್ತಾರೆ. ಅವರ ಅಳಿಯ ಉಗ್ರಪ್ಪ ಹಿಂದೆ ನಮ್ಮ ಪಕ್ಷದಲ್ಲಿದ್ದು, ಈಗ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ವ್ಯಕ್ತಿಯಾಗಿ ಲೋಕಸಭಾ ಸದಸ್ಯರಾಗಿ ಪ್ರಸ್ತುತ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಮ್ಮಿಶ್ರ ಪಕ್ಷಗಳ ಅಭ್ಯರ್ಥಿಯಾಗಿರುವುದು ಸಂತೊಷಕರವಾಗಿದೆ.
ಅದೇ ರೀತಿಯಾಗಿ ಈ ಹಿಂದೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಬೆಳ್ಳಾವಿ ವಿಧಾನ ಸಭಾಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದಾಗ ಚುನಾವಣಾ ಕಡೆಯ ದಿನಗಳಲ್ಲಿ ಬೆಳ್ಳಾವಿ ಕ್ಷೇತ್ರ ವ್ಯಾಪ್ತಿಯ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಗೆ ಬಂದು ನನ್ನ ಪರ ಮತ ಯಾಚಿಸಲೇಬೇಕು ಎಂದಾಗ ಜ್ವರವಿದ್ದರೂ, ರಸ್ತೆಗಳು ಹಾಳಾಗಿದ್ದ ಕಾಲದಲ್ಲೂ ನಾನು ಕೆ.ಎನ್.ರಾಜಣ್ಣ ನವರ ಪರವಾಗಿ ಬಂದು ಪ್ರಚಾರ ಮಾಡಿದ್ದೆ. ಆದರೆ ಈ ಬಗ್ಗೆ ಟೀಕೆಗಳನ್ನು ನಾನು ಮಾಡಲು ಹೋಗುವುದಿಲ್ಲ ಎಂದರು.
ಹೇಮಾವತಿ ನೀರಿನ ವಿಚಾರದಲ್ಲಿ ವಿರೋಧ ಪಕ್ಷದವರು ನನ್ನ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ನನ್ನ ಗೆಲುವಿನ ನಂತರ ಕೆಲವೇ ತಿಂಗಳುಗಳಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರು ಹರಿಸುವ ಮುಖೇನ ವಿರೋಧಿಗಳಿಗೆ ತಕ್ಕ ಉತ್ತರ ನೀಡಲಾಗುವುದು. ಅಭಿವೃದ್ದಿ ವಿಚಾರದಲ್ಲಿ ನಾವು ಎಂದೆಂದಿಗೂ ರಾಜಿಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಶಾಶ್ವತ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಮಾಜಿ ಸಚಿವ ಸಿ.ವೀರಣ್ಣ ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ರಾಜ್ಯದ ಏಕೈಕ ಪ್ರಧಾನಿಯಾಗಿದ್ದ ಇವರು ರಾಜ್ಯಕ್ಕೆ ಒಳ್ಳೆಯ ಹೆಸರನ್ನು ತಂದು ಕೊಟ್ಟ ರೈತಪರ ಹೋರಾಟಗಾರರು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರು
ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಂದಿನ ಸಚಿವರಾಗಿದ್ದ ದೇವೇಗೌಡರ ಕೆಲಸ ಮತ್ತು ಅವರ ಕಾರ್ಯ ನಮಗೆಲ್ಲ ಮಾದರಿಯಾಗಿತ್ತು ಎಂದ ಅವರು, ನಮ್ಮಗಳ ಬೆಳವಣಿಗೆಗೆ ದೇವೇಗೌಡರು ಸಹ ಪರೋಕ್ಷ ಕಾರಣರಾಗಿದ್ದು ಅವರಿಗಾಗಿ ಕ್ಷೇತ್ರದಾದ್ಯಂತ ಮತ ಯಾಚನೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಣ್ಣಕೈಗಾರಿಕಾ ಸಚಿವ ಎಸ್.ಆರ್.ಶ್ರಿನಿವಾಸ್, ವಿಧಾನ ಪರಿಷತ್ ಸದಸ್ಯ ಬೆಮೆಲ್ಕಾಂತರಾಜು, ಮಾಜಿ ಶಾಸಕ ಸುಧಾಕರಲಾಲ್, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ, ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು, ಪ.ಪಂ.ಸದಸ್ಯರಾದ ಪುಟ್ಟನರಸಯ್ಯ, ಕೆ.ಎನ್.ಲಕ್ಷ್ಮಿನಾರಾಯಣ್ ಮುಖಂಡರಾದ ಗಣೇಶ್, ಸಿದ್ದಮಲ್ಲಯ್ಯ, ಕುದುರೆ ಸತ್ಯನಾರಾಯಣ, ರಮೇಶ್, ಭಕ್ತರ್ಪಾಷ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








